ADVERTISEMENT

ಮಂಗಳೂರು: ಸಮುದಾಯ ಸಹಭಾಗಿತ್ವದೊಂದಿಗೆ ಪ್ರವಾಸೋದ್ಯಮ

ವಿಶ್ವ ಪ್ರವಾಸೋದ್ಯಮ ದಿನಾಚರಣೆಯಲ್ಲಿ ಜಿಲ್ಲಾಧಿಕಾರಿ ಡಾ.ರಾಜೇಂದ್ರ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2020, 8:25 IST
Last Updated 28 ಸೆಪ್ಟೆಂಬರ್ 2020, 8:25 IST
ಬೀಚ್‌ ವಾಲಿಬಾಲ್‌ ಅನ್ನು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಉದ್ಘಾಟಿಸಿದರು (ಎಡಚಿತ್ರ) ತಣ್ಣೀರುಬಾವಿ ಬೀಚ್‌ನಲ್ಲಿ ಭಾನುವಾರ ಕರಾವಳಿಯ ಚೆಂಡೆ ಹಾಗೂ ಯಕ್ಷಗಾನದ ವೈಭವ –ಪ್ರಜಾವಾಣಿ ಚಿತ್ರಗಳು
ಬೀಚ್‌ ವಾಲಿಬಾಲ್‌ ಅನ್ನು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಉದ್ಘಾಟಿಸಿದರು (ಎಡಚಿತ್ರ) ತಣ್ಣೀರುಬಾವಿ ಬೀಚ್‌ನಲ್ಲಿ ಭಾನುವಾರ ಕರಾವಳಿಯ ಚೆಂಡೆ ಹಾಗೂ ಯಕ್ಷಗಾನದ ವೈಭವ –ಪ್ರಜಾವಾಣಿ ಚಿತ್ರಗಳು   

ಮಂಗಳೂರು: ಸಮುದಾಯದ ಸಹಭಾಗಿತ್ವದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ಯೋಜನೆಯನ್ನು ರೂಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದರು.

ವಿಶ್ವ ಪ್ರವಾಸೋದ್ಯಮದ ದಿನದಅಂಗವಾಗಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಹಾಗೂ ಮಹಾನಗರ ಪಾಲಿಕೆ ಆಶ್ರಯದಲ್ಲಿ ನಗರದ ತಣ್ಣೀರುಬಾವಿ ಕಡಲ ಕಿನಾರೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಸ್ವಚ್ಛತಾ ಪಖ್ವಾಡ-2020’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗ್ರಾಮೀಣ ಕ್ರೀಡೆಗಳಾದ ಕಂಬಳ, ಹುಲಿ ವೇಷ, ಭೂತಕೋಲುಗಳಂತಹ ಸಾಂಸ್ಕೃತಿಕ ಚಟುವಟಿಕೆಗಳು ಗ್ರಾಮೀಣ ಜನರ ಆರ್ಥಿಕ ಸ್ಥಿತಿ ಹೆಚ್ಚಿಸಲು ಮಹತ್ವದ ಪಾತ್ರ ವಹಿಸುತ್ತವೆ. ಜಿಲ್ಲೆಯ ಐತಿಹಾಸಿಕ ಕ್ರೀಡೆಗಳನ್ನು ಸಂರಕ್ಷಿಸಿ, ಮುನ್ನೆಡಸಲು ಪ್ರವಾಸೋದ್ಯಮ ಅತ್ಯಂತ ಸಹಕಾರಿಯಾಗಲಿದೆ ಎಂದರು.

ADVERTISEMENT

ಯಕ್ಷಗಾನ, ಭರತನಾಟ್ಯ, ಬಯಲಾಟ, ಡೊಳ್ಳು ಕುಣಿತ, ಕೋಲಾಟ ಮುಂತಾದ ಕಲೆಗಳು ಗ್ರಾಮೀಣ ಪ್ರದೇಶದ ಸಾಂಸ್ಕೃತಿಕ ವೈಭವದ ಜೀವನಾಡಿಯಾಗಿದ್ದು, ಪ್ರವಾಸೋದ್ಯಮ ಅಭಿವೃದ್ಧಿಗೆ ಮುಕುಟವಾಗಿವೆ. ಜಿಲ್ಲೆಯಲ್ಲಿರುವ ಪಾರಂಪರಿಕ ಶೈಲಿನ ಗುತ್ತುಮನೆಗಳು, ಪುರಾತನ ಪರಿಕರಗಳೊಂದಿಗೆ ಗ್ರಾಮೀಣ ಆಹಾರ, ಕೃಷಿ ಮುಂತಾದ ಚಟುವಟಿಕೆಗಳನ್ನು ಕ್ರೋಡೀಕರಿಸಿ ಒಂದು ಪ್ರವಾಸಿ ಮಾದರಿಯಾಗಿ ವಿಸ್ತರಿಸಲು ಅವಕಾಶ ಇದೆ ಎಂದು ವಿವರಿಸಿದರು.

ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ₹17 ಕೋಟಿ ಯೋಜನೆಯನ್ನು ರೂಪಿಸಲಾಗಿದೆ. ಈಗಾಗಲೇ ₹9 ಕೋಟಿ ಬಿಡುಗಡೆಯಾಗಿದೆ. ಮುಂದಿನ ತಿಂಗಳು ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯ ಬಗ್ಗೆ ಜನಾಭಿಪ್ರಾಯವನ್ನು ಸಂಗ್ರಹಿಸಿ, ಮುಂದಿನ ಯೋಜನೆ ರೂಪಿಸುವ ಉದ್ದೇಶ ಹೊಂದಿರುವುದಾಗಿ ಹೇಳಿದರು.

ಜಿಲ್ಲೆಯ ವಿವಿಧ ದೇವಸ್ಥಾನ ಹಾಗೂ ಪ್ರಾಚೀನ ಸಾಂಸ್ಕೃತಿಕ ಪರಂಪರೆಯ ಬಗ್ಗೆ ಇಲ್ಲಿಗೆ ಭೇಟಿ ನೀಡುವವರು ಹೆಚ್ಚು ತಿಳಿದುಕೊಳ್ಳಲು ಅನುಕೂಲವಾಗುವಂತೆ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ಚಿಂತನೆ ಇದೆ ಎಂದರು.

ಪ್ರವಾಸೋದ್ಯಮ ಇಲಾಖೆಯ ಮೂಲಕ ನಿರ್ಮಿಸಿದ ದಾರಿಸೂಚಕ ಫಲಕವನ್ನು ಉದ್ಘಾಟಿಸಲಾಯಿತು. ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಸೋಮಶೇಖರ, ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಐಸಾಕ್ ವಾಸ್, ಹೊಟೇಲ್ ಮಾಲೀಕರ ಸಂಘದ ಚಂದ್ರಹಾಸ ಶೆಟ್ಟಿ, ಯೋಜಕ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಜಗದೀಶ್ ಬೋಳೂರು, ಪಾಲಿಕೆ ಸದಸ್ಯೆ ಸುನೀತಾ, ಮಂಜುನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.