ಮೂಡುಬಿದಿರೆ: ಒಂಟಿಕಟ್ಟೆಯ ಕಡಲಕೆರೆ ನಿಸರ್ಗಧಾಮವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವ ಸಂಬಂಧ ವಿಸ್ತೃತ ಯೋಜನಾ ವರದಿಯನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ. ಕಡಲಕೆರೆಯಲ್ಲಿ ವರ್ಷಪೂರ್ತಿ ನಿರಂತರ ದೋಣಿ ವಿಹಾರ, ಸುತ್ತ ಮುತ್ತಲಿನ ಪರಿಸರದಲ್ಲಿ ಅಂತರ್ಜಲ ವೃದ್ಧಿಸುವದೂ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳ ಚಿಂತನೆ ಇದೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಅರಣ್ಯ ಇಲಾಖೆ, ಪುರಸಭೆ ಮತ್ತು ರೋಟರಿ ಕ್ಲಬ್ ಮೂಡುಬಿದಿರೆ ವತಿಯಿಂದ ಕಡಲಕೆರೆಯಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ದೋಣಿವಿಹಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮೂರು ತಿಂಗಳೊಳಗೆ ಈ ಯೋಜನೆಗೆ ಅನುಮೋದನೆ ಸಿಗುವ ನಿರೀಕ್ಷೆ ಇದೆ. ಸರ್ಕಾರದ ಅನುದಾನ ಲಭಿಸಿದರೆ ಕಡಲಕೆರೆ ನಿಸರ್ಗಧಾಮವನ್ನು ಪಿಲಿಕುಲ ನಿಸರ್ಗಧಾಮಕ್ಕಿಂತಲೂ ಸುಂದರವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದರು.
ಇದಕ್ಕೂ ಮೊದಲು ಅವರು ಕಡಲಕೆರೆಗೆ ಕಾಟ್ಲಾ ಹಾಗೂ ರೋಹು ಜಾತಿಯ ಸುಮಾರು ಇಪ್ಪತ್ತು ಸಾವಿರ ಮೀನಿನ ಮರಿಗಳನ್ನು ಸಮರ್ಪಿಸಿದರು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ್ ಮಾತನಾಡಿ, ಈ ಬಾರಿ ವಾಡಿಕೆಗಿಂತ ಮೊದಲೇ ಮಳೆಯಾಗಿ ಕಡಲಕೆರೆಯಲ್ಲಿ ನೀರು ತುಂಬಿರುವುದರಿಂದ ದೋಣಿ ವಿಹಾರವನ್ನು ಬೇಗನೆ ಪ್ರಾರಂಭಿಸಲಾಯಿತು ಎಂದರು.
ಸಾರ್ವಜನಿಕರು ಇಲ್ಲಿ ನೀರಿಗೆ ಇಳಿಯಲು, ಈಜಲು ಅವಕಾಶ ಇಲ್ಲ ಎಂದರು.
ಸಾಲುಮರದ ತಿಮ್ಮಕ್ಕ ವೃಕ್ಷ ಉದ್ಯಾನದಲ್ಲಿ ವನಮಹೋತ್ಸವ ಆಚರಿಸಲಾಯಿತು.
ತಹಶಿಲ್ದಾರ್ ಶ್ರೀಧರ್ ಮುಂದಲಮನಿ, ವಲಯ ಅರಣ್ಯಾಧಿಕಾರಿ ಕಿರಣ್ ಕುಮಾರ್, ಪುರಸಭೆ ಅಧ್ಯಕ್ಷ ಜಯಶ್ರೀ ಕೇಶವ್, ಉಪಾಧ್ಯಕ್ಷ ನಾಗರಾಜ ಪೂಜಾರಿ, ರೋಟರಿ ಅಧ್ಯಕ್ಷ ನಾಗರಾಜ ಹೆಗ್ಡೆ, ಮಾಜಿ ಅಧ್ಯಕ್ಷ ಪಿ.ಕೆ.ಥಾಮಸ್, ರೋಟರಿ ಎಜುಕೇಷನ್ ಸೊಸೈಟಿ ಅಧ್ಯಕ್ಷ ನಾರಾಯಣ ಪಿ.ಎಂ., ನಝೀರ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.