ADVERTISEMENT

ದಕ್ಷಿಣ ಕನ್ನಡ ಪ್ರವಾಸೋದ್ಯಮ: ಚಿಗುರಿದ ಉತ್ಸಾಹ

ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ವೃದ್ಧಿ, ಜನವರಿಯಲ್ಲಿ ಗಾಳಿಪಟ ಉತ್ಸವ

ಸಂಧ್ಯಾ ಹೆಗಡೆ
Published 17 ನವೆಂಬರ್ 2021, 16:37 IST
Last Updated 17 ನವೆಂಬರ್ 2021, 16:37 IST
ಮಂಗಳೂರಿನ ಇಡ್ಯಾ ಸಮುದ್ರ ತೀರದಲ್ಲಿ ಮುಸ್ಸಂಜೆ ಕಳೆಯಲು ಬಂದಿದ್ದ ಜನರು     ಪ್ರಜಾವಾಣಿ ಚಿತ್ರ/ ಇರ್ಷಾದ್ ಮಹಮ್ಮದ್
ಮಂಗಳೂರಿನ ಇಡ್ಯಾ ಸಮುದ್ರ ತೀರದಲ್ಲಿ ಮುಸ್ಸಂಜೆ ಕಳೆಯಲು ಬಂದಿದ್ದ ಜನರು     ಪ್ರಜಾವಾಣಿ ಚಿತ್ರ/ ಇರ್ಷಾದ್ ಮಹಮ್ಮದ್   

ಮಂಗಳೂರು: ಕೋವಿಡ್ ಪ್ರಕರಣಗಳು ತಗ್ಗಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳು ಚಿಗಿತುಕೊಂಡಿವೆ. ಧಾರ್ಮಿಕ ಕ್ಷೇತ್ರಗಳು, ಕಡಲ ತೀರಗಳಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ. ಕೋವಿಡ್ ಪೂರ್ವದ ಉತ್ಸಾಹದ ಮತ್ತೆ ಮರುಕಳಿಸುತ್ತಿದೆ.

ಸೆಪ್ಟೆಂಬರ್ ತಿಂಗಳಿಗೆ ಹೋಲಿಸಿದಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ಜಿಲ್ಲೆಗೆ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆ 1.50 ಲಕ್ಷದಷ್ಟು ಅಧಿಕವಾಗಿದೆ. ಹೀಗಾಗಿ, ಕೋವಿಡ್ ಕಾರಣಕ್ಕೆ ಎರಡು ವರ್ಷಗಳಿಂದ ನಷ್ಟ ಅನುಭವಿಸುತ್ತಿದ್ದ ಪ್ರವಾಸೋದ್ಯಮ ಪೂರಕ ಚಟುವಟಿಕೆಗಳು, ಜಲಕ್ರೀಡೆಗಳು, ಟ್ರಾವೆಲ್ ಏಜೆನ್ಸಿಗಳು, ಹೋಂ ಸ್ಟೇ ಮಾಲೀಕರಲ್ಲಿ ನಿರೀಕ್ಷೆಗಳು ಗರಿಗೆದರಿವೆ.

‘ಜಿಲ್ಲೆಯಲ್ಲಿರುವ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಪ್ರಮುಖ ಧಾರ್ಮಿಕ ಕ್ಷೇತ್ರಗಳಿಗೆ ಪ್ರವಾಸಿಗರು ಬರುತ್ತಿದ್ದಾರೆ. ಅವರಲ್ಲಿ ಹೆಚ್ಚಿನವರು ಕಡಲ ತೀರಗಳಿಗೆ ಭೇಟಿ ನೀಡುತ್ತಾರೆ. ಎಲ್ಲ ಕಡೆಗಳಲ್ಲಿ ಕೋವಿಡ್ ನಿಯಮ ಪಾಲನೆಯೊಂದಿಗೆ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಕಡಲ ತೀರಗಳಿಗೆ ಪ್ರವಾಸಿಗರನ್ನು ಆಕರ್ಷಿಸಲು ಪಣಂಬೂರು ಬೀಚ್, ತಣ್ಣೀರುಬಾವಿ ಬೀಚ್, ಸೋಮೇಶ್ವರ ಬೀಚ್, ಸಸಿಹಿತ್ಲು ಬೀಚ್ ಸೆಲ್ಫಿ ಪಾಯಿಂಟ್‌ಗಳನ್ನು ಅಳವಡಿಸಲಾಗುತ್ತಿದೆ’ ಎನ್ನುತ್ತಾರೆ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಎನ್‌. ಮಾಣಿಕ್ಯ.

ADVERTISEMENT

‘ನವೆಂಬರ್ ಅಂತ್ಯದೊಳಗೆ ನದಿಗಳಲ್ಲಿ ಕಯಾಕಿಂಗ್ ಮತ್ತಿತರ ಜಲಕ್ರೀಡೆ ಆರಂಭಿಸಲಾಗುತ್ತಿದೆ. ಈ ಸಂಬಂಧ ಈಗಾಗಲೇ ಮೂರು ಸಂಸ್ಥೆಗಳಿಗೆ ಅನುಮತಿ ನೀಡಲಾಗಿದೆ. ಪಣಂಬೂರು ಬೀಚ್‌ನಲ್ಲಿ ಪುನಃ ಪ್ರಾರಂಭವಾಗಿರುವ ಜಲಕ್ರೀಡೆಗಳು ಜನರನ್ನು ಸೆಳೆಯುತ್ತಿವೆ. ಜನವರಿ ತಿಂಗಳಿನಲ್ಲಿ ಬೀಚ್ ಮ್ಯಾರಥಾನ್, ಗಾಳಿಪಟ ಉತ್ಸವ, ಹೆಲಿ ರೈಡ್ಸ್ ನಡೆಸಲು ಯೋಚಿಸಲಾಗಿದೆ. ಪ್ರಮುಖ ಕಡಲ ಕಿನಾರೆಗಳಲ್ಲಿ ಸ್ವಚ್ಛತೆ ಕಾಪಾಡಲು ಬೀಚ್ ಕ್ಲೀನಿಂಗ್ ಮಷಿನ್ ಖರೀದಿಸಲು ಯೋಚಿಸಲಾಗಿದೆ. ಪ್ರವಾಸಿ ಕ್ಷೇತ್ರಗಳಿಗೆ ಪ್ರವಾಸಿಗರು ಬರುತ್ತಿರುವುದರಿಂದ ದೇವಾಲಯಗಳು, ಬೀಚ್‌ಗಳಲ್ಲಿ ₹ 23.6 ಕೋಟಿ ವೆಚ್ಚದಲ್ಲಿ ಮೂಲ ಸೌಕರ್ಯ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ’ ಎಂದು ಅವರು ವಿವರಿಸಿದರು.

‘ಕೋವಿಡ್ ವೇಳೆ ಹೋಂ ಸ್ಟೇಗಳು ಬಂದಾಗಿದ್ದವು. ಆ ಸಂದರ್ಭದಲ್ಲಿ ಸಾಕಷ್ಟು ನಷ್ಟವಾಗಿದೆ. ಈಗ ನಿರ್ಬಂಧಗಳು ಸಡಿಲಗೊಂಡಿವೆ. ಹಲವರು ಕರೆ ಮಾಡಿ ವಿಚಾರಣೆ ಮಾಡುತ್ತಾರೆ. ಆದರೆ, ಬರುವವರ ಸಂಖ್ಯೆ ಕಡಿಮೆ. ವಾರದ ದಿನಗಳಲ್ಲಿ ಹೋಂ ಸ್ಟೇಗಳು ಖಾಲಿಯೇ ಇರುತ್ತವೆ. ವಾರಾಂತ್ಯದಲ್ಲಿ ಪ್ರವಾಸಿಗರು ಬರುತ್ತಿರುವುದು ಆಶಾಭಾವ ಮೂಡಿಸಿದೆ. ಕೋವಿಡ್ ಪೂರ್ವದ ಸಂದರ್ಭಕ್ಕೆ ಹೋಲಿಸಿದರೆ, ಈಗ ಶೇ 30–40ರಷ್ಟು ಮಾತ್ರ ಪ್ರವಾಸಿಗರ ಸಂಖ್ಯೆ ಹೆಚ್ಚಿದೆ’ ಎನ್ನುತ್ತಾರೆ ಶರತ್ ವಿಲ್ಲಾ ಹೋಂ ಸ್ಟೇಯ ಶಶಿ ಶೆಟ್ಟಿ.

ಜಿಲ್ಲೆಯಲ್ಲಿ ಒಟ್ಟು 55 ನೋಂದಾಯಿತ ಹೋಂ ಸ್ಟೇಗಳು ಇವೆ. ಆದರೆ, ಕೆಲವು ಅನಧಿಕೃತ ಹೋಂ ಸ್ಟೇಗಳು ಅಲ್ಲಲ್ಲಿ ತಲೆ ಎತ್ತಿವೆ. ಇವುಗಳ ನಿಯಂತ್ರಣಕ್ಕೆ ಜಿಲ್ಲಾಡಳಿತ ಮುಂದಾಗಿದೆ.

ಜಿಲ್ಲೆಯಲ್ಲಿ ಅನಧಿಕೃತ ಹೋಂ ಸ್ಟೇ ನಡೆಸುತ್ತಿರುವುದು ಕಂಡು ಬಂದಿದ್ದು, ಡಿಸೆಂಬರ್ 15ರೊಳಗೆ ಕಡ್ಡಾಯವಾಗಿ ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಾಯಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ, ಕೆ.ವಿ ಸೂಚಿಸಿದ್ದಾರೆ.

ಉದ್ಯಮ ಶೇ 70ರಷ್ಟು ಚೇತರಿಕೆ: ಹೋಟೆಲ್ ಅಸೋಸಿಯೇಷನ್:

‘ಕೋವಿಡ್ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಹೋಟೆಲ್‌ಗಳಿಗೆ ಅಂದಾಜು ₹ 50 ಕೋಟಿಯಷ್ಟು ನಷ್ಟವಾಗಿದೆ. ಆದರೆ, ಈಗ ಕೋವಿಡ್ ಪ್ರಕರಣಗಳು ಕಡಿಮೆಯಾಗುತ್ತಿರುವ ಕಾರಣ, ಶೇ 70ರಷ್ಟು ಉದ್ಯಮ ಚೇತರಿಕೆ ಕಂಡಿದೆ.

ಹೋಟೆಲ್ ಮತ್ತು ರೆಸಾರ್ಟ್‌ಗಳು ಪೂರ್ವಭಾವಿಯಾಗಿ ಬುಕ್ ಆಗುತ್ತಿವೆ. ವಾರಾಂತ್ಯದಲ್ಲಿ ಸಾಫ್ಟ್‌ವೇರ್ ಉದ್ಯೋಗಿಗಳು ಹೆಚ್ಚು ಬರುತ್ತಿದ್ದಾರೆ. ಧಾರ್ಮಿಕ ಕ್ಷೇತ್ರಗಳಿಗೆ ಜನರು ಬರುವುದು ಹೆಚ್ಚಿದೆ. ಇವೆಲ್ಲ ಉದ್ಯಮ ಮತ್ತೆ ಚೇತರಿಸಿಕೊಳ್ಳಲು ಕಾರಣವಾಗಿದೆ. ಮೂರು ದಿನಗಳ ರಾಷ್ಟ್ರ ಮಟ್ಟದ ಈಜು ಸ್ಪರ್ಧೆಗೆ ಜಿಲ್ಲೆಯಲ್ಲಿ ಸಿದ್ಧತೆ ನಡೆಯುತ್ತಿದೆ. ಜಿಲ್ಲಾಧಿಕಾರಿ ವಿಶೇಷ ಮುತುವರ್ಜಿಯಿಂದ ಈ ಕಾರ್ಯಕ್ರಮ ಜಿಲ್ಲೆಗೆ ದೊರೆತಿದೆ. ಇಂತಹ ಕಾರ್ಯಕ್ರಮಗಳು ಹೆಚ್ಚು ನಡೆದರೆ ಹೋಟೆಲ್ ಉದ್ಯಮ ನಷ್ಟದಿಂದ ಮೇಲೇಳಲು ಸಹಕಾರಿಯಾಗುತ್ತದೆ’ ಎಂದು ಹೋಟೆಲ್ ಅಸೋಸಿಯೇಷನ್ ಖಜಾಂಚಿ ಪ್ರಕಾಶ್ ಶೆಟ್ಟಿ ಪ್ರತಿಕ್ರಿಯಿಸಿದರು.

ತೇಲುವ ರೆಸ್ಟೋರೆಂಟ್:ತೇಲುವ ರೆಸ್ಟೋರೆಂಟ್ ನಿರ್ಮಾಣಕ್ಕೆ ಉದ್ಯಮಿಯೊಬ್ಬರು ಮುಂದೆ ಬಂದಿದ್ದಾರೆ. ಈ ಸಂಬಂಧ ಈಗಾಗಲೇ ಸಿದ್ಧತೆಗಳು ಆರಂಭಗೊಂಡಿದ್ದು, ಡಿಸೆಂಬರ್ ವೇಳೆಗೆ ತೇಲುವ ರೆಸ್ಟೋರೆಂಟ್ ನಿರ್ಮಾಣವಾಗಲಿದೆ. ರೆಸ್ಟೋರೆಂಟ್ ನಿರ್ಮಾಣಕ್ಕೆ ವಿದೇಶದಿಂದ ಸಾಮಗ್ರಿಗಳು ಬರಬೇಕಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿ ತಿಳಿಸಿದರು.

ಜಿಲ್ಲೆಗೆ ಭೇಟಿ ನೀಡಿದ ಪ್ರವಾಸಿಗರು

ತಿಂಗಳು;ಪ್ರವಾಸಿಗರ ಸಂಖ್ಯೆ

ಸೆಪ್ಟೆಂಬರ್;4,79,976

ಅಕ್ಟೋಬರ್;6,35,486

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.