ಮಂಗಳೂರು: ಮದುವೆಯ ಸಮಾರಂಭದಲ್ಲಿ ಭಾಗವಹಿಸಲು ದಮಾಮ್‌ನಿಂದ ಮಂಗಳೂರಿಗೆ ಬಂದಿದ್ದ ಕುಟುಂಬವೊಂದು ವಿಮಾನದಲ್ಲಿ ಹಾಕಿದ್ದ ಲಗೇಜ್ ಬ್ಯಾಗ್ ಸಿಗದೆ ಪರದಾಡುತ್ತಿದೆ.
‘ಜು.14ರಂದು ವಿಸ್ತಾರ ಏರ್‌ಲೈನ್ಸ್ ವಿಮಾನದಲ್ಲಿ ದಮಾಮ್‌ನಿಂದ ಹೊರಟು ಮುಂಬೈಗೆ ಬಂದು, ಅಲ್ಲಿಂದ ಏರ್ ಇಂಡಿಯಾ ಮೂಲಕ ಮಂಗಳೂರು ತಲುಪಿದ್ದೇವೆ. ನಾವು ತಂದಿದ್ದ ಆರು ಲಗೇಜ್ ಬ್ಯಾಗ್‌ಗಳಲ್ಲಿ ಮೂರು ಮಾತ್ರ ನಮಗೆ ದೊರೆತಿದೆ. ಮುಂಬೈ ವಿಮಾನ ನಿಲ್ದಾಣದಲ್ಲಿ ಲಗೇಜ್‌ಗಾಗಿ ಒಂದೂವರೆ ತಾಸು ಕಾದೆವು. ಲಗೇಜ್ ಸಿಗದೆ ಇದ್ದಾಗ, ನಮ್ಮಿಂದ ಅರ್ಜಿ ಭರ್ತಿ ಮಾಡಿಸಿಕೊಂಡ ಸಿಬ್ಬಂದಿ, 24 ತಾಸುಗಳೊಳಗೆ ಅದನ್ನು ತಲುಪಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಐದು ದಿನ ಕಳೆದರೂ ಲಗೇಜ್ ನಮಗೆ ದೊರೆತಿಲ್ಲ’ ಎಂದು ಬದ್ರುದ್ದೀನ್ ಹೇಳಿದರು.
‘ಇದೇ ವಿಮಾನದಲ್ಲಿ ಪ್ರಯಾಣಿಸಿದ ಹಲವರಿಗೆ ಇದೇ ಅನುಭವ ಆಗಿದೆ. ಲಗೇಜ್ ಬ್ಯಾಗ್‌ಗಳು ನಮ್ಮ ಕೈಗೆ ದೊರೆತಿಲ್ಲ. ಮದುವೆಗೆ ಖರೀದಿಸಿ ತಂದಿದ್ದ ₹2 ಲಕ್ಷ ಮೌಲ್ಯದ ಸಾಮಗ್ರಿಗಳು ಅದರಲ್ಲಿದ್ದವು. ವಿಸ್ತಾರ ಏರ್‌ಲೈನ್ಸ್‌ಗೆ ಇ–ಮೇಲ್ ಮಾಡಿದ್ದು, ಯಾವುದೇ ಪ್ರತಿಕ್ರಿಯೆ ಇಲ್ಲ. ಮೊಬೈಲ್ ಫೋನ್‌ಗೆ ಕರೆ ಮಾಡಿದಾಗ, ಮೊದಲ ದಿನ ಲಗೇಜ್ ತಲುಪಿಸುವ ಭರವಸೆ ನೀಡಿದ್ದರು. ಈಗ ಆ ನಂಬರ್ ಕೂಡ ಸ್ವಿಚ್ ಆಫ್ ಆಗಿದೆ. ಕಳೆದುಕೊಂಡಿರುವ ವಸ್ತುಗಳ ನಷ್ಟ ಭರಿಸುವವರು ಯಾರು? ಇದೇ ರೀತಿ ಆದರೆ, ವಿಮಾನ ಯಾನ ನಡೆಸುವ ಸಂಸ್ಥೆಗಳ ಮೇಲಿನ ವಿಶ್ವಾಸ ಕಳೆದು ಹೋಗುತ್ತದೆ’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.