ADVERTISEMENT

ಮಂಗಳೂರು: ರಜೆಯ ಮಜಾದಲ್ಲೂ ಕಳವಳ

ಆಳಸಮುದ್ರ ಮೀನುಗಾರಿಕೆ ನಿಷೇಧ ಜಾರಿ; ಸ್ಥಳೀಯ ಸಮಸ್ಯೆಗಳಿಗೆ ಮುಂದಿನ ಋತುವಿನಲ್ಲಿ ಪರಿಹಾರದ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2023, 23:38 IST
Last Updated 4 ಜೂನ್ 2023, 23:38 IST
ಆಳಸಮುದ್ರ ಮೀನುಗಾರಿಕೆ ನಿಷೇಧದ ಹಿನ್ನೆಲೆಯಲ್ಲಿ ಮಂಗಳೂರು ಬಂದರಿನಲ್ಲಿ ಲಂಗರು ಹಾಕಿರುವ ದೋಣಿಗಳು –ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್
ಆಳಸಮುದ್ರ ಮೀನುಗಾರಿಕೆ ನಿಷೇಧದ ಹಿನ್ನೆಲೆಯಲ್ಲಿ ಮಂಗಳೂರು ಬಂದರಿನಲ್ಲಿ ಲಂಗರು ಹಾಕಿರುವ ದೋಣಿಗಳು –ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್   

ಮಂಗಳೂರು: ತಲೆಮೇಲೊಂದೊಂದು ಬ್ಯಾಗ್ ಹೊತ್ತುಕೊಂಡು, ಕೈಯಲ್ಲೂ ಒಂದೊಂದು ಬ್ಯಾಗ್‌ ಹಿಡಿದುಕೊಂಡಿದ್ದ ತಮಿಳುನಾಡಿನ ತಂಗಯ್ಯ ಮತ್ತು ಮುತ್ತು ಅವರು ಬ್ಯಾಕ್‌ಪ್ಯಾಕ್‌ ಕೂಡ ಹಾಕಿಕೊಂಡು ವೇಗವಾಗಿ ಹೆಜ್ಜೆ ಹಾಕುತ್ತಿದ್ದರು. ಬಂದರ್‌ನ ಗೇಟ್ ಬಳಿ ಇದ್ದ ಆಟೊ ಹತ್ತಿ ಬಾಡಿಗೆ ಬಗ್ಗೆಯೂ ಕೇಳದೆ ‘ಹೋಗೋಣ...’ ಎಂದು ಚಾಲಕನ ಬಳಿ ಹೇಳಿದರು.

ವಿಜಯಪುರ ಜಿಲ್ಲೆ ಬಬಲಾದಿಯ ರಾಜಪ್ಪ ಮತ್ತು ರೇಖಾ ದಂಪತಿ ಬಂದರಿನ ಒಳಗೆ ಇರುವ ಮೀನು ಮಾರುಕಟ್ಟೆ ಬಳಿ ನಿಂತು ಊರಿಗೆ ಮರಳುವ ಕುರಿತು ಚರ್ಚಿಸುತ್ತಿದ್ದರು. ಎಲ್ಲವೂ ಸರಿಹೋದರೆ ರಾತ್ರಿ ಬಸ್ ಹತ್ತುವುದು, ಇಲ್ಲದಿದ್ದರೆ ಮರುದಿನ ಬೆಳಿಗ್ಗೆ ಹೊರಡುವುದು ಅವರ ಯೋಜನೆಯಾಗಿತ್ತು. ಒಟ್ಟಿನಲ್ಲಿ ಮಧ್ಯಾಹ್ನದ ಒಳಗೆ ಎಲ್ಲವನ್ನೂ ‘ಸೆಟಲ್’ ಮಾಡುವ ತರಾತುರಿಯಲ್ಲಿದ್ದರು ಅವರು. 

ಜೂನ್‌ ಒಂದರಂದು ಮಂಗಳೂರು ದಕ್ಕೆಯ ಒಳಗೂ ಹೊರಗೂ ಎಲ್ಲರಿಗೆ ಧಾವಂತ. ದೊಡ್ಡ ದೊಡ್ಡ ಬ್ಯಾಗ್‌ಗಳನ್ನು ಹಿಡಿದುಕೊಂಡು ಹೊರಟವರು ಇನ್ನು ಎರಡು ತಿಂಗಳು ತಮ್ಮ ಊರಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ. ರಜಾಕಾಲದ ಮಜಾ ಸವಿಯುವುದಕ್ಕಾಗಿ ಆದಷ್ಟು ಬೇಗ ಊರು ಸೇರುವುದು ಅವರ ಉದ್ದೇಶವಾಗಿತ್ತು. ಆದರೆ, ಇತ್ತ ಅನೇಕರು ಕಳವಳದಿಂದ ಭವಿಷ್ಯದ ಲೆಕ್ಕ ಹಾಕುತ್ತಿದ್ದರು. ಅವರಲ್ಲಿ ದುಗುಡ ತುಂಬಿತ್ತು.

ADVERTISEMENT

ಮೀನಿನ ಸಂತಾನೋತ್ಪತ್ತಿ ಕಾಲವಾದ ಜೂನ್‌–ಜುಲೈ ತಿಂಗಳಲ್ಲಿ ಟ್ರೋಲ್ ಬೋಟ್‌ ಮೂಲಕ ಆಳ ಸಮುದ್ರ ಮೀನುಗಾರಿಕೆ ಮಾಡುವುದರ ಮೇಲೆ ನಿಷೇಧ ಹೇರಲಾಗುತ್ತದೆ. ಹೀಗಾಗಿ ಮೇ ತಿಂಗಳ ಕೊನೆಯ ಕೆಲವು ದಿನಗಳು ಮತ್ತು ಜೂನ್‌ ತಿಂಗಳ ಮೊದಲ ಎರಡು ದಿನಗಳಲ್ಲಿ ದಕ್ಕೆಯಿಂದ ವಾಪಸಾಗುವವರೇ ಹೆಚ್ಚಾಗಿ ಕಾಣಸಿಗುತ್ತಾರೆ. ವರ್ಷವಿಡೀ ಸಾಗರದ ಒಡಲಲ್ಲಿ ಮೀನುಗಳೆಂಬ ಮುತ್ತು ಹೆಕ್ಕಿದ ತಮಿಳುನಾಡು, ಒಡಿಶಾ, ಬಿಹಾರ, ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳ ಕಾರ್ಮಿಕರು ಈ ಎರಡು ತಿಂಗಳಲ್ಲಿ ತಮ್ಮೂರಿಗೆ ವಾಪಸಾಗುತ್ತಾರೆ. ಉತ್ತಮ ಲಾಭ ಗಳಿಸಿದ ಬೋಟ್‌ಗಳ ಮಾಲೀಕರು ನೌಕರರಿಗೆ ವಿಶೇಷ ಉಡುಗೊರೆ ನೀಡಿ ಕಳುಹಿಸುತ್ತಾರೆ. ಆದರೆ ಈ ಬಾರಿ ಬಹುತೇಕ ಬೋಟ್‌ಗಳ ಮಾಲೀಕರ ಮುಖದಲ್ಲಿ ಸಂಭ್ರಮ ಇರಲಿಲ್ಲ.

ಮೀನಿನ ಇಳುವರಿ ಹೆಚ್ಚಾಗಿದ್ದರೂ ನಿರೀಕ್ಷಿತ ಬೆಲೆ ಸಿಗದೇ ಇದ್ದದ್ದು ಮತ್ತು ಬೇರೆ ಬೇರೆ ಕಾರಣಗಳಿಂದ ಮೀನಿನ ರಫ್ತು ಕಡಿಮೆಯಾದದ್ದು ಬೋಟ್ ಮಾಲೀಕರ ಚಿಂತೆಗೆ ಕಾರಣವಾಗಿದೆ. 

ಈ ಬಾರಿ ಮಂಗಳೂರು ದಕ್ಕೆಗೆ 3.33 ಲಕ್ಷ ಟನ್‌ ಮೀನುಗಳನ್ನು ಹಿಡಿದು ತರಲಾಗಿದ್ದು ಮಾರಾಟ ಮತ್ತು ರಫ್ತಿನಿಂದ ₹4,154 ಕೋಟಿ ಮೊತ್ತದ ವಹಿವಾಟು ಆಗಿದೆ. ಈ ಋತುವಿನಲ್ಲಿ (ಕಳೆದ ಆಗಸ್ಟ್‌ನಿಂದ ಈ ವರ್ಷ ಮೇ) 3.07 ಲಕ್ಷ ಟನ್ ಮೀನು ಹಿಡಿಯಲಾಗಿದ್ದು ₹3946 ಮೊತ್ತದ ವಹಿವಾಟು ಆಗಿದೆ. ಹಿಂದಿನ ಎರಡು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಇಳುವರಿ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ. ಆದರೆ ಮೀನಿನ ಪ್ರಮಾಣ ಹೆಚ್ಚಾಗಿದ್ದರಿಂದ ಬೆಲೆ ಕಡಿಮೆಯಾಗಿ ಆದಾಯಕ್ಕೆ ಧಕ್ಕೆಯಾಗಿದೆ ಎಂಬುದು ಬೋಟ್ ಮಾಲೀಕರು ಮತ್ತು ಮೀನುಗಾರರ ಬೇಸರದ ನುಡಿ. ಉಪಯೋಗವಿಲ್ಲದ ಮೀನನ್ನು ಕೋಳಿ ಆಹಾರ ಮತ್ತಿತರ ಉತ್ಪನ್ನಗಳಿಗಾಗಿ ಸಾಗಿಸುವವರಿಗೆ ಇದರಿಂದ ಸ್ವಲ್ಪ ಲಾಭ ಆಗಿದೆ ಎನ್ನುತ್ತವೆ ಮೂಲಗಳು.

ಕೈಕೊಟ್ಟ ರಫ್ತು ‘ರಾಣಿ’

ರಫ್ತು ಮಾಡುವುದಕ್ಕೆಂದೇ ಹೆಚ್ಚಾಗಿ ಹಿಡಿಯುವ ಮದಿಮಲ್ ಅಥವಾ ರಾಣಿ ಮೀನನ್ನು ರಫ್ತು ಮಾಡುವವರು ಖರೀದಿಸದೇ ಇದ್ದದ್ದು ಈ ಬಾರಿ ದೊಡ್ಡ ನಷ್ಟ ತಂದೊಡ್ಡಿದೆ ಎಂದು ಬೋಟ್ ಮಾಲೀಕರು ಆರೋಪಿಸಿದ್ದಾರೆ. ಇಂಗ್ಲಿಷ್‌ನಲ್ಲಿ Pink Perch ಅಥವಾ Japanese threadfin bream ಎಂದು ಕರೆಯಲಾಗುವ ಈ ಮೀನಿನ ಬೆಲೆ ಈ ಬಾರಿ ಕೆ.ಜಿ.ಗೆ ₹70ರಿಂದ ದಿಢೀರ್ ₹30ಕ್ಕೆ ಇಳಿದಿತ್ತು. ಇದು, ಸಂಗ್ರಹಕಾರರು ಸೃಷ್ಟಿ ಮಾಡಿದ ತಂತ್ರ ಎಂಬ ದೂರು ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಸಂಗ್ರಹಾಗಾರಗಳಲ್ಲಿ ಹೊರಗಿನ ಮೀನು ಇರಿಸುವುದಕ್ಕೆ ಅವಕಾಶ ನೀಡಬಾರದು ಎಂಬ ಆಗ್ರಹವೂ ಕೇಳಿಬಂದಿದೆ.

ಎಕ್ಸ್‌ಪೋರ್ಟ್ ಹಬ್ ಮಂಗಳೂರನ್ನು ಅಭಿವೃದ್ಧಿಪಡಿಸಬೇಕೆಂಬ ಬೇಡಿಕೆಯೂ ಇದೆ. ಈ ಬೇಡಿಕೆ ಈಡೇರಿದರೆ ಮೀನನ್ನು ಗುಜರಾತ್‌, ಕೇರಳ, ತಮಿಳುನಾಡು, ಮಹಾರಾಷ್ಟ್ರ ಮುಂತಾದ ಕಡೆಗಳಿಗೆ ಕಳುಹಿಸುವ ಅನಿವಾರ್ಯ ಸ್ಥಿತಿ ಇರುವುದಿಲ್ಲ. ವಿಮಾನ ನಿಲ್ದಾಣವಿದ್ದರೂ ಮೀನು ಸಾಗಾಟಕ್ಕೆ ಕಾರ್ಗೊ ಸೌಲಭ್ಯ ಇಲ್ಲದಿರುವುದು ಬೇಸರದ ವಿಷಯ ಎನ್ನುತ್ತಾರೆ ಟ್ರಾಲ್ ಬೋಟ್ ಮಾಲೀಕರ ಸಂಘದ ಕಾರ್ಯದರ್ಶಿ ರಾಜೇಶ್ ಪುತ್ರನ್.

ಬೋಟ್‌ ಪಾರ್ಕಿಂಗ್ ಸೌಲಭ್ಯ ಹೆಚ್ಚಲಿ

ಕೋಟಿಗಟ್ಟಲೆ ಮೊತ್ತದ ವಹಿವಾಟು ಮಾಡುವ ಮಂಗಳೂರು ದಕ್ಕೆಯಲ್ಲಿ ಬೋಟ್‌ಗಳ ಪಾರ್ಕಿಂಗ್‌ಗೆ ಸೂಕ್ತ ಸೌಲಭ್ಯ ಇಲ್ಲವೆಂಬ ಕೂಗು ಅನೇಕ ವರ್ಷಗಳಿಂದ ಇದೆ. ಇರುವ ಜಾಗದಲ್ಲಿ ಹೂಳು ತೆಗೆಯದೇ ಬಿಟ್ಟಿರುವುದರಿಂದ ಬೋಟ್‌ಗಳಿಗೆ ಲಂಗರು ಹಾಕಲು ಅಗುವುದಿಲ್ಲ. ಅಪಘಾತಗಳು ಮತ್ತು ಬೋಟ್‌ಗಳಿಗೆ ಹಾನಿಯಾಗುವುದು ಕೂಡ ಹೆಚ್ಚಾಗಿದೆ. ಹೀಗಾಗಿ ಪಾರ್ಕಿಂಗ್ ಸೌಲಭ್ಯ ಹೆಚ್ಚಬೇಕು ಎಂಬ ಆಗ್ರಹ ಬಲವಾಗಿದೆ. 

‘ಮಲ್ಪೆ ಬಂದರನ್ನು ಆರು ಹಂತಗಳಲ್ಲಿ ಅಭಿವೃದ್ಧಿಪಡಿಸಲಾಗಿದೆ. ಮಂಗಳೂರಿನಲ್ಲಿ ಎರಡು ಹಂತಗಳು ಕೂಡ ಪೂರ್ತಿಯಾಗಲಿಲ್ಲ. ಪ್ಯಾಕ್ಟರಿ, ಫಿಶ್‌ ಮಿಲ್‌, ರಫ್ತು ಕೇಂದ್ರಗಳು ಇತ್ಯಾದಿ ಎಲ್ಲವೂ ಇದ್ದರೂ ಅವುಗಳನ್ನು ಮಂಗಳೂರಿಗೇ ಸೀಮಿತಗೊಳಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಹೊರಗಿನವರ ಕಾಟ ಹೆಚ್ಚಾಗಿದೆ. ಈ ಎಲ್ಲ ವಿಷಯಗಳನ್ನು ಹೊಸ ಸರ್ಕಾರದ ಗಮನಕ್ಕೆ ತಂದು ಮೀನುಗಾರಿಕೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಮಾತುಕತೆ ನಡೆಸಿ ಪರಿಹಾರಕ್ಕೆ ಪ್ರಯತ್ನಿಸಲಾಗುವುದು’ ಎಂದು ಬೋಟ್ ಮಾಲೀಕರ ಸಂಘದ ಅಧ್ಯಕ್ಷ ಚೇತನ್ ಬೆಂಗ್ರೆ ತಿಳಿಸಿದರು.

ವಾಸನೆಯಲ್ಲೇ ಬದುಕಿನ ಸೊಬಗು

ಮೀನುಗಾರರು ಮತ್ತು ಮೀನುಗಾರಿಕೆಗೆ ಸಂಬಂಧಿಸಿದ ವೃತ್ತಿಯಲ್ಲಿ ತೊಡಗಿರುವವರಿಗೆ ವಾಸನೆಯಲ್ಲೇ ಬದುಕು ಎಂದು ಮಾರ್ಮಿಕವಾಗಿ ಹೇಳಿದವರು ಬಜಿಲಕೇರಿಯ ಎಚ್‌.ಇ. ಗೌಸ್‌. ನಿರುಪಯುಕ್ತ ಮೀನನ್ನು ಸಂಗ್ರಹಿಸಿ ಕೋಳಿ ಆಹಾರ ಮತ್ತಿತರ ಉದ್ಯಮಕ್ಕಾಗಿ ಕಳುಹಿಸುವ ವೃತ್ತಿಯಲ್ಲಿ ತೊಡಗಿರುವ ಗೌಸ್‌ ಅವರಿಗೆ ಉಪಯೋಗವಿಲ್ಲದ ಮೀನನ್ನು ಹೆಕ್ಕಿ ತಂದುಕೊಡಲು ಬೇರೆ ಬೇರೆ ರಾಜ್ಯದ ಮಹಿಳೆಯರು ನೆರವಾಗುತ್ತಾರೆ. ಅವರೊಂದಿಗೆ ಮಾತುಕತೆ ನಡೆಸುತ್ತ ನಡೆಸುತ್ತ ಬಹುಭಾಷಾ ವಲ್ಲಭನಾಗಿರುವ ಅವರು ಕನ್ನಡ– ತುಳುವಿನಲ್ಲೂ ಸಾಹಿತ್ಯಕವಾಗಿ ಮಾತನಾಡಬಲ್ಲರು. 

ಈಗಾಗಲೇ ಹಿಡಿದಿರುವ ಮೀನು ಜೂನ್ ಮೊದಲ ವಾರದ ವರೆಗೆ ಸಾಕಾಗುತ್ತದೆ. ಸಾಂಪ್ರದಾಯಿಕ ದೋಣಿಗಳು ಬೇಗ ಸಮುದ್ರಕ್ಕೆ ಇಳಿಯುವುದಿಲ್ಲ. ಮಳೆಗಾಲ ಆರಂಭವಾಗುವ ಸಮಯವಾದ್ದರಿಂದ ಅಪಾಯ ಕಾದಿರುತ್ತದೆ. ಹೀಗಾಗಿ ಒಂದು ‘ತೂಫಾನ್’ ಬಂದ ನಂತರವೇ ಸಾಮಾನ್ಯವಾಗಿ ಮೀನುಗಾರಿಕೆಗೆ ಹೋಗುವುದು ಸಂಪ್ರದಾಯ ಎಂದು ಹೇಳಿದ ಅವರು, ಹೊರಗಿನಿಂದ ನೋಡುವವರಿಗೆ ಮೀನುಗಾರಿಕೆ ವೃತ್ತಿ ಅಸಹ್ಯವಾಗಿ ಕಾಣಬಹುದು. ಆದರೆ ನಮಗೆ ಇದರಲ್ಲೇ ಜೀವನ. ವಾಸನೆಯಲ್ಲೇ ಆದಾಯವಿದೆ, ಪರಿಮಳದಲ್ಲಿ ಅಲ್ಲ ಎಂದರು.

ಜೂನ್ ಅಂತ್ಯದಲ್ಲಿ ತಮಿಳುನಾಡು ಮೀನು

ಅರಬ್ಬಿ ಸಮುದ್ರದಲ್ಲಿ ಆಳಸಮುದ್ರ ಮೀನುಗಾರಿಕೆ ನಿಷೇಧ ಆಗುವ ಮೊದಲೇ ಬಂಗಾಳ ಕೊಲ್ಲಿಯಲ್ಲಿ ನಿಷೇಧ ಆಗುತ್ತದೆ. 61 ದಿನಗಳ ನಿಷೇಧದ ಬಳಿಕ ತಮಿಳುನಾಡು ಭಾಗದಲ್ಲಿ ಜೂನ್ 15ರಂದು ಟ್ರಾಲ್ ಬೋಟ್ ಮೀನುಗಾರಿಕೆ ಪುನರಾರಂಭಗೊಳ್ಳಲಿದೆ. ಇದಾಗಿ ಕೆಲವೇ ದಿನಗಳಲ್ಲಿ ಮಂಗಳೂರಿಗೆ ತಮಿಳುನಾಡು ಮೀನು ಬರಲು ಆರಂಭವಾಗುತ್ತದೆ. ಅಲ್ಲಿಯವರೆಗೆ ಸ್ಥಳೀಯವಾಗಿ ಸಂಗ್ರಹಿಸಿದ ಮತ್ತು ಪಾರಂಪರಿಕ ಶೈಲಿಯಲ್ಲಿ ಹಿಡಿದ ಮೀನನ್ನೇ ಆಶ್ರಯಿಸಬೇಕಾದ ಪರಿಸ್ಥಿತಿ ಇದೆ. ಮಂಗಳೂರು ಭಾಗದಲ್ಲಿ ಇನ್ನು ಒಂದೆರಡು ದಿನಗಳಲ್ಲಿ ಮೀನಿನ ಬೆಲೆ ಹೆಚ್ಚಾಗಲಿದೆ. ಇದರ ಪ್ರಮಾಣ 10ರಿಂದ 30 ಶೇಕಡಾ ಆಗುವ ಸಾಧ್ಯತೆ ಇದೆ ಎಂದು ಮೀನುಗಾರಿಕೆ ವೃತ್ತಿಯಲ್ಲಿರುವವರು ಹೇಳುತ್ತಾರೆ.

***

35,875- ಜಿಲ್ಲೆಯ ಕರಾವಳಿಯಲ್ಲಿ ಕೆಲಸ ಮಾಡುತ್ತಿರುವವರು

1,405- ಜಿಲ್ಲೆಯ ನೊಂದಾಯಿತ ಯಾಂತ್ರೀಕೃತ ಬೋಟ್‌ಗಳ ಸಂಖ್ಯೆ

1,541- ಮೋಟರ್ ಅಳವಡಿಸಿದ ಬೋಟ್‌ಗಳ ಸಂಖ್ಯೆ

218- ಸಾಂಪ್ರದಾಯಿಕ ಮಾದರಿಯ ಬೋಟ್‌ಗಳು

(ಮಾಹಿತಿ: ಮೀನುಗಾರಿಕೆ ಇಲಾಖೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.