ADVERTISEMENT

ಚತುಷ್ಪಥ ಕಾಮಗಾರಿಯಿಂದ ತೊಂದರೆ: ಗೋಳಿತ್ತೊಟ್ಟು ಗ್ರಾಮಸಭೆಯಲ್ಲಿ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 29 ಜನವರಿ 2025, 13:37 IST
Last Updated 29 ಜನವರಿ 2025, 13:37 IST
<div class="paragraphs"><p>ಉಪ್ಪಿನಂಗಡಿ ಸಮೀಪ ಗೋಳಿತ್ತೊಟ್ಟು ಗ್ರಾಮ ಸಭೆಯಲ್ಲಿ ಮಾರ್ಗದರ್ಶಿ ಅಧಿಕಾರಿ ಅಜಿತ್ ಮಾತನಾಡಿದರು</p></div>

ಉಪ್ಪಿನಂಗಡಿ ಸಮೀಪ ಗೋಳಿತ್ತೊಟ್ಟು ಗ್ರಾಮ ಸಭೆಯಲ್ಲಿ ಮಾರ್ಗದರ್ಶಿ ಅಧಿಕಾರಿ ಅಜಿತ್ ಮಾತನಾಡಿದರು

   

ನೆಲ್ಯಾಡಿ(ಉಪ್ಪಿನಂಗಡಿ): ರಾಷ್ಟ್ರೀಯ ಹೆದ್ದಾರಿ 75ರ ಚತುಷ್ಪಥ ಕಾಮಗಾರಿ ನಡೆಯುತ್ತಿರುವ ಗೋಳಿತ್ತೊಟ್ಟು, ಆರ್ಲ ಜಂಕ್ಷನ್ ಮೊದಲಾದ ಕಡೆಯಲ್ಲಿ ಕಾಮಗಾರಿ ಸರಿಯಾಗಿ ನಡೆಯುತ್ತಿಲ್ಲ, ಇದರಿಂದ ಜನರು ತೊಂದರೆ ಅನುಭವಿಸುವಂತಾಗಿದೆ ಎಂದು ಗ್ರಾಮಸ್ಥರು ಗೋಳಿತ್ತೊಟ್ಟು ಗ್ರಾಮ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸವಿತಾ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮ ಸಭೆಯಲ್ಲಿ  ವಿಷಯ ಪ್ರಸ್ತಾಪಿಸಿದ ಗ್ರಾಮಸ್ಥರು, ‘ಆರ್ಲ ಜಂಕ್ಷನ್‌ನಲ್ಲಿ ಸಂಪರ್ಕ ರಸ್ತೆ ಅಗೆದು ಹಾಕಲಾಗಿದ್ದು, ಗ್ರಾಮಸ್ಥರಿಗೆ ತೊಂದರೆಯಾಗಿದೆ. ಇಲ್ಲಿ ಅಪಘಾತಗಳು ಸಾಮಾನ್ಯವಾಗಿದೆ. ದೂಳಿನ ಸಮಸ್ಯೆಯೂ ವಿಪರೀತವಾಗಿದೆ. ಸಮೀಪದಲ್ಲೇ ಬಾಲಕರ ಸರ್ಕಾರಿ ವಸತಿ ನಿಲಯ ಇದ್ದು, ಅಲ್ಲಿನ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ’ ಎಂದು ದೂರಿದರು. 

ADVERTISEMENT

ಸಭೆಯ ಮಾರ್ಗದರ್ಶಿ ಅಧಿಕಾರಿ  ಅಜಿತ್, ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರಿಗೆ ದೂರವಾಣಿ ಮೂಲಕ ಸಮಸ್ಯೆ ವಿವರಿಸಿದರು. ಸಣ್ಣಂಪಾಡಿಯಿಂದ ಆರ್ಲ ಜಂಕ್ಷನ್‌ವರೆಗೆ ಇರುವ ಸಮಸ್ಯೆಯನ್ನು ಮೂರು ದಿನದೊಳಗೆ ಬಗೆಹರಿಸದಿದ್ದಲ್ಲಿ ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದರು.

ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ದಿನದ 24 ಗಂಟೆಯೂ ಇರಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು. ಈ ಬಗ್ಗೆ ಚರ್ಚೆ ನಡೆದು ಆಸ್ಪತ್ರೆ ಮೇಲ್ದರ್ಜೆಗೇರಿಸಲು ಸರ್ಕಾರಕ್ಕೆ ಪತ್ರ ಬರೆಯಲು ನಿರ್ಧರಿಸಲಾಯಿತು.  ಗೋಳಿತ್ತೊಟ್ಟು ಗ್ರಾಮದಲ್ಲಿ 102 ವಿದ್ಯುತ್‌ ಪರಿವರ್ತಕಗಳಿದ್ದು, ಒಬ್ಬರೇ ಪವರ್‌ಮನ್‌  ಇರುವುದರಿಂದ ಸಮಸ್ಯೆ ಆಗಿದೆ. ಇಲ್ಲಿಗೆ ಹೆಚ್ಚುವರಿ ಪವರ್‌ಮನ್‌ ನೇಮಕ ಮಾಡುವಂತೆ ಗ್ರಾಮಸ್ಥರು ಒತ್ತಾಯಿಸಿದರು.

ಗ್ರಾಮಸ್ಥರಾದ ಅಬ್ದುಲ್ ಕುಂಞಿ ಕೊಂಕೋಡಿ, ಹನೀಫ್, ದಿನೇಶ್ ಕಲಾಯಿ, ಶಾಜು, ಬೈಜು, ಮಹಮ್ಮದ್ ರಫೀಕ್, ಶಿವಪ್ರಸಾದ್ ಮಾತನಾಡಿದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೆ. ಬಾಬು ಪೂಜಾರಿ, ಸದಸ್ಯರಾದ ವಿ.ಸಿ. ಜೋಸೆಫ್, ಪ್ರಜಲ, ವಾರಿಜಾಕ್ಷಿ, ಶ್ರುತಿ, ನೋಣಯ್ಯ ಗೌಡ, ಶೋಭಾಲತಾ, ಸಂಧ್ಯಾ, ಜನಾರ್ದನ ಗೌಡ ಇದ್ದರು. ಪಿಡಿಒ ಜಗದೀಶ್ ಸ್ವಾಗತಿಸಿದರು. ಕಾರ್ಯದರ್ಶಿ ಚಂದ್ರಾವತಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.