ADVERTISEMENT

ತುಳು ಅಕಾಡೆಮಿ: ಪುಸ್ತಕ ಬಹುಮಾನ

6 ಕೃತಿಗೆ ದತ್ತಿನಿಧಿ ಬಹುಮಾನ, 4 ಕೃತಿಗೆ ಪುಸ್ತಕ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2025, 23:40 IST
Last Updated 10 ಮಾರ್ಚ್ 2025, 23:40 IST

ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ 2022ನೇ ಹಾಗೂ 2023 ನೇ ಸಾಲಿನ ಪುಸ್ತಕ ಪ್ರಶಸ್ತಿ ಹಾಗೂ ದತ್ತಿ ನಿಧಿ ಪುಸ್ತಕ ಪುರಸ್ಕಾರ ಪ್ರಕಟಗೊಂಡಿದೆ.

ನಾಲ್ವರು ಲೇಖಕರಿಗೆ ವಾರ್ಷಿಕ ಪುಸ್ತಕ ಬಹುಮಾನ ಹಾಗೂ 6 ಲೇಖಕರಿಗೆ ವಾರ್ಷಿಕ ದತ್ತಿ ನಿಧಿ ಪುಸ್ತಕ ಬಹುಮಾನವನ್ನು ಪ್ರಕಟಿಸಲಾಗಿದೆ.

2022ನೇ ಸಾಲಿನ ತುಳು ಕವನ ವಿಭಾಗದ ಪುಸ್ತಕ ಬಹುಮಾನಕ್ಕೆ ರಾಜೇಶ್ ಶೆಟ್ಟಿ ದೋಟ ಅವರ ‘ಮುಗದಾರಗೆ’ ಕವನ ಸಂಕಲನ, 2023ನೇ ಸಾಲಿನ ತುಳು ಕವನ ವಿಭಾಗಕ್ಕೆ ರಘು ಇಡ್ಕಿದು ಅವರ ‘ಎನ್ನ ನಲಿಕೆ’ ಕವನ ಸಂಕಲನ, 2023ನೇ ಸಾಲಿನ ತುಳು ಕಾದಂಬರಿ ಬಹುಮಾನಕ್ಕೆ ರಾಜಶ್ರೀ ಟಿ. ರೈ ಪೆರ್ಲ ಅವರ ‘ಮುಸ್ರಾಲೋ ಪಟ್ಟೊ’ ಕಾದಂಬರಿ, 2023ನೇ ಸಾಲಿನ ತುಳು ಅನುವಾದ ವಿಭಾಗದ ಪುಸ್ತಕ ಬಹುಮಾನಕ್ಕೆ ಕುಶಲಾಕ್ಷಿ ವಿ. ಕುಲಾಲ್ ಅವರ ‘ತಗೊರಿ ಮಿತ್ತ್ದ ಮಣ್ಣ್ ‘ ಅನುವಾದ ಕೃತಿ ಆಯ್ಕೆಯಾಗಿದೆ. ಈ ಪುಸ್ತಕ ಪ್ರಶಸ್ತಿಯು ₹25 ಸಾವಿರ ನಗದು, ಸ್ಮರಣಿಕೆ ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.

ADVERTISEMENT

2022ನೇ ಸಾಲಿನ ಉಷಾ ಪಿ. ರೈ ದತ್ತಿ ನಿಧಿ ಪ್ರಶಸ್ತಿಗೆ ಕಬ್ಬಿನಾಲೆ ವಸಂತ ಭಾರದ್ವಾಜ್ ಅವರ ‘ತುಳು ಕಾವ್ಯ ಮೀಮಾಂಸೆ’ ಕೃತಿ, 2023ನೇ ಪ್ರಶಸ್ತಿಗೆ ಚಿನ್ನಪ್ಪ ಗೌಡ ಅವರ ‘ಕರಾವಳಿ ಕಥನ’ ಕೃತಿ, 2022ನೇ ಸಾಲಿನ ದಿ. ಕೆ. ಅಮರನಾಥ ಶೆಟ್ಟಿ ದತ್ತಿ ಪ್ರಶಸ್ತಿಗೆ ಯಶೋದಾ ಮೋಹನ್ ಅವರ ‘ ದೇರ ಮಾಮುನ ದೂರ ನೋಟೊಲು’ ಕೃತಿ, 2023ನೇ ಸಾಲಿನ ಪ್ರಶಸ್ತಿಗೆ ವಿ.ಕೆ. ಯಾದವ್ ಅವರ ‘‘ಮೊಗವೀರೆರ್ನ ಸಾಂಸ್ಕ್ರತಿಕ ಬದ್‌ಕ್ ಬೊಕ್ಕ ಆರ್ಥಿಕ ಚಿಂತನೆ’ ಕೃತಿಯು ಆಯ್ಕೆಯಾಗಿದೆ.

2022ನೇ ಸಾಲಿನ ದಿ. ಶಿವಾನಂದ ಕರ್ಕೇರ ದತ್ತಿನಿಧಿ ಪ್ರಶಸ್ತಿಗೆ ಶಾರದಾ ಅಂಚನ್ ಅವರ ‘ನಂಬಿ ಸತ್ಯೊಲು’ ಕೃತಿ, 2023ನೇ ಸಾಲಿನ ಪ್ರಶಸ್ತಿಗೆ ರಘುನಾಥ ವರ್ಕಾಡಿ ಅವರ ‘ಸೂರ್ಯ ಚಂದ್ರ ಸಿರಿ’ ಕೃತಿ ಆಯ್ಕೆಯಾಗಿದೆ. ಈ ದತ್ತಿನಿಧಿ ಪ್ರಶಸ್ತಿಗಳು ₹10 ಸಾವಿರ ನಗದು, ಸ್ಮರಣಿಕೆ ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿವೆ.

ಪ್ರಶಸ್ತಿ ಪ್ರದಾನ ಸಮಾರಂಭವು ಮಾ.15ರಂದು ಬೆಳಿಗ್ಗೆ 10 ಗಂಟೆಗೆ ಮಂಗಳೂರಿನ ಉರ್ವಸ್ಟೋರ್‌ನಲ್ಲಿರುವ ತುಳು ಭವನದಲ್ಲಿ ನಡೆಯಲಿದೆ ಎಂದು ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.