ADVERTISEMENT

‘ಇಂಗ್ಲೀsh’ ಬಿಡುಗಡೆ 26ಕ್ಕೆ

ಇಂಗ್ಲಿಷ್ ಬರ್ಪುಜಿ– ಕುಲೆಕುಲು ಬುಡ್ಪುಜಿ...

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2021, 12:32 IST
Last Updated 23 ಮಾರ್ಚ್ 2021, 12:32 IST
ಇಂಗ್ಲೀsh
ಇಂಗ್ಲೀsh   

ಮಂಗಳೂರು: ‘ಕುಲೆ ಮದಿಮೆ’ (ಪ್ರೇತಗಳ ಮದುವೆ) ಹಾಗೂ ಇಂಗ್ಲಿಷ್‌ ಬಾರದ ಯುವಕನೊಬ್ಬನ ಪರದಾಟದ ಹಂದರವನ್ನು ಹೊಂದಿದ, ತುಳು ಹಾಸ್ಯ ದಿಗ್ಗಜರ ತಾರಾಂಗಣದ ‘ದಿಯಾ’ ಖ್ಯಾತಿ ಪೃಥ್ವಿ ಅಂಬರ್ ಹಾಗೂ ನವ್ಯ ಪೂಜಾರಿ ನಟನೆಯ ತುಳು ಸಿನಿಮಾ ‘ಇಂಗ್ಲೀsh' ಇದೇ 26ರಂದು ಬಿಡುಗಡೆಯಾಗಲಿದೆ.

‘ಎಂಕ್ಲೆಗ್‌ ಬರ್ಪುಜಿ ಬ್ರೋ’ (ನಮಗೆ ಬರುವುದಿಲ್ಲ ಅಣ್ಣಾ) ಎಂಬ ಟ್ಯಾಗ್ ಲೈನ್ ಹೊಂದಿರುವ ಈ ಸಿನಿಮಾವನ್ನು ಅಕ್ಮೆ ಮೂವೀಸ್ ಇಂಟರ್‌ನ್ಯಾಷನಲ್ ಲಾಂಛನದಲ್ಲಿ ಉದ್ಯಮಿ, ನಿರ್ಮಾಪಕ ಹರೀಶ್ ಶೇರಿಗಾರ್ ಮತ್ತು ಶರ್ಮಿಳಾ ಶೇರಿಗಾರ್ ನಿರ್ಮಿಸಿದ್ದು, ಕೆ. ಸೂರಜ್ ಶೆಟ್ಟಿ ನಿರ್ದೇಶಿಸಿದ್ದಾರೆ. ಏಕಕಾಲದಲ್ಲಿ ಮಂಗಳೂರು-ಉಡುಪಿ- ಬೆಂಗಳೂರು-ಮೈಸೂರು ಹಾಗೂ ಗಲ್ಫ್ ರಾಷ್ಟ್ರಗಳಲ್ಲಿ ಬಿಡುಗಡೆಗೊಳ್ಳಲಿದೆ.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹರೀಶ್ ಶೇರಿಗಾರ್, ‘ತುಳುನಾಡಿನ ಅನಾದಿ ಕಾಲದ ಸಂಸ್ಕೃತಿ ಹಾಗೂ ಆಧುನಿಕ ಸಂವಹನದ ಇಂಗ್ಲಿಷ್ ಬಾರದ ಯುವಕನ ಜೀವನ ಆಧಾರಿತ ಈ ಸಿನಿಮಾವನ್ನು ವಿವಿಧೆಡೆಯ ಹೊರಾಂಗಣ ಮಾತ್ರವಲ್ಲ, ನಡುರಾತ್ರಿಯಲ್ಲಿ ಸ್ಮಶಾನದಲ್ಲೂ ಚಿತ್ರೀಕರಿಸಲಾಗಿದೆ. ತುಳುವಿನ ಹಾಸ್ಯ ದಿಗ್ಗಜರಾದ ಅರವಿಂದ್ ಬೋಳಾರ್, ನವೀನ ಡಿ ಪಡೀಲ್, ಭೋಜರಾಜ್ ವಾಮಂಜೂರು, ವಿಸ್ಮಯ್ ವಿನಾಯಕ್, ದೀಪಕ್ ರೈ ಬಳಗವೇ ಇದೆ’ ಎಂದರು.

ADVERTISEMENT

‘ಕನ್ನಡದ ಹಿರಿಯ ನಟ ಅನಂತ್‌ನಾಗ್ ಇಂಗ್ಲಿಷ್ ಟ್ಯೂಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಣಿಕಾಂತ್ ಕದ್ರಿ ಸಂಗೀತ, ಭಜರಂಗಿ ಮೋಹನ್ ಕೊರಿಯೋಗ್ರಫಿ, ಕೃಷ್ಟಸಾರಥಿ–ಅಭಿಲಾಷ್‌ ಕಲಾತಿ ಸಿನಿಮಾಟೊಗ್ರಫಿ, ಮಹೇಶ್‌ ಎಣ್ಮೂರಿ ಕಲಾ ನಿರ್ದೇಶನ ಇದೆ. ಕತೆ, ಚಿತ್ರಕತೆ, ಸಂಭಾಷಣೆ, ನಿರ್ದೇಶನವನ್ನು ಕೆ. ಸೂರಜ್ ಶೆಟ್ಟಿ ನಿರ್ವಹಿಸಿದ್ದಾರೆ’ ಎಂದರು.

‘ಸಿನಿಮಾದಲ್ಲಿ 8 ಕೆ ಕ್ಯಾಮರಾ ಬಳಸಿದ್ದು, ಬೆಂಗಳೂರಿನ ಅರೆಮನೆ ಮೈದಾನದಲ್ಲೂ ಚಿತ್ರೀಕರಿಸಲಾಗಿದೆ. ‘ವರ್ಲ್ಡ್ ಪ್ರೀಮಿಯರ್ ಶೋ' ದುಬೈಯಲ್ಲಿ ನಡೆದಿದೆ. ಸಿನಿಮಾದ ಕಲಾತ್ಮಕತೆ ಹಾಗೂ ತಾಂತ್ರಿಕತೆಗೆ ಧಕ್ಕೆ ಬಾರದ ರೀತಿಯಲ್ಲಿ, ನಿರ್ಮಾಣ ಶ್ರೀಮಂತಿಕೆ ಮೆರೆದ ಶೇರಿಗಾರ್ ಯಥೇಚ್ಛವಾಗಿ ಹಣ ಹಾಕಿದ್ದಾರೆ. ತಾಂತ್ರಿಕತೆಯಲ್ಲೂ ವಿಭಿನ್ನ ಸಿನಿಮಾ’ ಎಂದು ನಿರ್ದೇಶಕ ಕೆ. ಸೂರಜ್‌ ಶೆಟ್ಟಿ ವಿವರಿಸಿದರು.

‘ಪ್ರಸ್ತುತ ಹಾಸ್ಯವೇ ತುಳು ಸಿನಿಮಾಗಳ ಜೀವಂತಿಕೆಯಾಗಿದೆ. ಅಂತಹ ಹಾಸ್ಯದ ಹೊನಲು ಹರಿಸಿದ ದಿಗ್ಗಜರೇ ಇಲ್ಲಿದ್ದಾರೆ. ಅವರ ನಟನೆ ಹಾಗೂ ದೃಶ್ಯಗಳ ಚೌಕಟ್ಟು ಒಂದಕ್ಕಿಂತ ಒಂದು ವಿಭಿನ್ನ. ಇದು ತುಳು ಸಿನಿಮಾ ರಂಗದಲ್ಲಿ ಶೇರಿಗಾರ್ ಹೊಸ ಸಾಹಸವಾದರೆ, ನಮಗೆಲ್ಲ ಹೊಸ ಅನುಭವ’ ಎಂದು ನಟ ಪೃಥ್ವಿ ಅಂಬರ್ ಶ್ಲಾಘಿಸಿದರು.

‘ಉಮಿಲ್ ಬಳಿಕ ಇದೇ ಚಿತ್ರದಲ್ಲಿ ನಟಿಸುತ್ತಿದ್ದು, ವಿಶಿಷ್ಟ ಸಿನಿಮಾದಲ್ಲಿ ಅದ್ಭುತ ಕಲಾವಿದರು ಹಾಗೂ ನಿರ್ಮಾಣಕಾರರ ಜೊತೆ ನಟಿಸಲು ನಿರ್ಮಾಪಕರು ಅವಕಾಶ ಮಾಡಿಕೊಟ್ಟಿದ್ದಾರೆ’ ಎಂದು ನಟಿ ನವ್ಯ ಪೂಜಾರಿ ಕೃತಜ್ಞತೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.