ADVERTISEMENT

ಮಂಗಳೂರು: 2 ತಿಂಗಳು ನೀರಿನ ಸಮಸ್ಯೆ ಎದುರಾಗದು: ಮೇಯರ್

ನೇತ್ರಾವತಿ ನದಿಗೆ ಬಾಗಿನ ಅರ್ಪಿಸಿ ಮೇಯರ್‌ ವಿಶ್ವಾಸ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2023, 4:57 IST
Last Updated 9 ಫೆಬ್ರುವರಿ 2023, 4:57 IST

ಮಂಗಳೂರು: ‘ನಗರಕ್ಕೆ ನೀರು ಪೂರೈಸುವ ತುಂಬೆ ಅಣೆಕಟ್ಟೆಯಲ್ಲಿ 6 ಮೀ. ಎತ್ತರದವರೆಗೆ ನೀರಿನ ಸಂಗ್ರಹವಿದೆ. ಇನ್ನೂ ಎರಡು ತಿಂಗಳು ನಗರದ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ತೀರಾ ಕಡಿಮೆ’ ‌ಎಂದು ಮೇಯರ್ ಜಯಾನಂದ ಅಂಚನ್ ಹೇಳಿದರು.

ತುಂಬೆ ಅಣೆಕಟ್ಟೆಯಲ್ಲಿ ಗಂಗಾಪೂಜೆಯನ್ನು ಬುಧವಾರ ನೆರವೇರಿಸಿದ ಅವರು ಬಳಿಕ ನೇತ್ರಾವತಿ ನದಿಗೆ ಬಾಗಿನ ಅರ್ಪಿಸಿದರು. ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹವನ್ನು ಪರಿಶೀಲಿಸಿದರು. ಬಳಿಕ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ‘ಕುಡಿಯುವ ನೀರನ್ನು ಪೋಲು ಮಾಡಬಾರದು. ನೀರನ್ನು ಜತನದಿಂದ ಬಳಸಬೇಕು’ ಎಂದು ಕೋರಿದರು.

‘ಪಾಲಿಕೆ ವ್ಯಾಪ್ತಿಯಲ್ಲಿ ನಾಲ್ಕು ವರ್ಷಗಳಲ್ಲಿ ಬೇಸಿಗೆಯಲ್ಲೂ ಕುಡಿಯುವ ನೀರಿನ ಕೊರತೆ ಎದುರಾಗಿಲ್ಲ. ಕಳೆದ ವರ್ಷ ಮೇ ತಿಂಗಳಲ್ಲಿ ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿತ್ತು. ಇನ್ನೇನು ನೀರಿನ ಕೊರತೆ ಎದುರಾದೀತು ಎನ್ನುವಾಗ ಮಳೆಯಾಗಿದ್ದರಿಂದ ಅಣೆಕಟ್ಟೆಯಲ್ಲಿ ಮತ್ತೆ ನೀರು ಸಂಗ್ರಹವಾಗಿತ್ತು. ಈ ಬಾರಿಯೂ ನೀರಿನ ಅಭಾವ ಎದುರಾಗಲಿಕ್ಕಿಲ್ಲ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

ಪಾಲಿಕೆಯ ಸಚೇತಕ ಪ್ರೇಮಾನಂದ ಶೆಟ್ಟಿ, ‘ಜಲಸಿರಿ ಯೋಜನೆಯಡಿ ನೀರಿನ ವಿತರಣಾ ಜಾಲ ಬಲಪಡಿಸಲಾಗುತ್ತಿದೆ. ಓವರ್ ಹೆಡ್ ಟ್ಯಾಂಕ್‌ಗಳನ್ನು ನಿರ್ಮಿಸಿ ಎಲ್ಲ ಪ್ರದೇಶಗಳಿಗೂ ಸರಿ ಸಮಾನವಾಗಿ ದಿನಪೂರ್ತಿ ಒಂದೇ ಒತ್ತಡದಲ್ಲಿ ನೀರು ಪೂರೈಸುವ ವ್ಯವಸ್ಥೆ ಅನುಷ್ಠಾನಗೊಳ್ಳಲಿದೆ’ ಎಂದು ತಿಳಿಸಿದರು.

‘ಪಾಲಿಕೆ ವ್ಯಾಪ್ತಿಯ ನಿವಾಸಿಗಳು ಹಾಗೂ ಈ ಪರಿಸರದ ಜನರು ಕುಡಿಯಲು ನೇತ್ರಾವತಿ ನದಿಯ ನೀರನ್ನೇ ಅವಲಂಬಿಸಿದ್ದಾರೆ. ಮುಂಬರುವ ಬೇಸಿಗೆಯಲ್ಲಿಯೂ ನೀರಿನ ಅಭಾವವಾಗದಿರಲಿ ಎನ್ನುವುದು ನಮ್ಮೆಲ್ಲರ ಹಾರೈಕೆ. ನೀರಿನ ಮಹತ್ವವನ್ನು ಅರಿತು ಬಳಸಿದರೆ ಕೊರತೆ ಎದುರಾಗದು’ ಎಂದರು.

ಪಾಲಿಕೆಯ ವಿರೋಧ ಪಕ್ಷದ ನಾಯಕ ನವೀನ್ ಡಿಸೋಜ, ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರಾದ ಶಕೀಲಾ ಕಾವ, ಕಿಶೋರ್ ಕೊಟ್ಟಾರಿ, ಹೇಮಲತಾ ರಘು ಸಾಲ್ಯಾನ್, ನಯನಾ ಕೋಟ್ಯಾನ್, ಪಾಲಿಕೆ ಸದಸ್ಯರಾದ ಶಶಿಧರ ಹೆಗ್ಡೆ, ಲ್ಯಾನ್ಸಿ ಲಾಟ್‌ ಪಿಂಟೊ, ಸುಮಂಗಲಾ, ವೇದಾವತಿ, ತುಂಬೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರವೀಣ್ ಬಿ. ತುಂಬೆ ಹಾಗೂ ಪಾಲಿಕೆ ಅಧಿಕಾರಿಗಳು ಇದ್ದರು. ರಾಜೇಶ್ ಸುವರ್ಣ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.