ADVERTISEMENT

ಕ್ರೆಡಿಟ್ ಕಾರ್ಡ್ ಮಾಹಿತಿ ಪಡೆದು ಹಣ ಕದ್ದ ಇಬ್ಬರು ಟಿಬೇಟಿಯನ್ ಪ್ರಜೆಗಳು ಸೆರೆ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2021, 10:11 IST
Last Updated 11 ನವೆಂಬರ್ 2021, 10:11 IST
   

ಮಂಗಳೂರು: ನಗರದ‌ ವ್ಯಕ್ತಿಯೊಬ್ಬರ ಕ್ರೆಡಿಟ್ ಕಾರ್ಡ್ ಮಾಹಿತಿ ಕದ್ದು, ಅವರ ಬ್ಯಾಂಕ್ ಖಾತೆಯಿಂದ ಹಣ ವರ್ಗಾಯಿಸಿಕೊಂಡು ವಂಚನೆ ಮಾಡಿರುವ‌ ಆರೋಪದಲ್ಲಿ ಇಬ್ಬರು ಟಿಬೇಟಿಯನ್ ಪ್ರಜೆಗಳನ್ನು ನಗರ ಪೊಲೀಸರು ಬಂಧಿಸಿದ್ದಾರೆ.

ಉತ್ತರಕನ್ನಡ ಜಿಲ್ಲೆಯ ಮುಂಟಗೋಡಿನ ಟಿಬೇಟಿಯನ್ ಕಾಲೊನಿಯ ಲೋಬಸಂಗ್ ಸಂಗ್ಯೆ (24) ಹಾಗೂ ದಕಪ ಪುಂದೇ (40) ಬಂಧಿತರು.

ಮಂಗಳೂರು ವೈದ್ಯನಾಥ ನಗರದ ನಿವಾಸಿ ಸಿ.ಡಿ. ಅಲೆಕ್ಸಾಂಡರ್ ಎಂಬುವರು ಎಸ್ ಬಿ ಐ ಬ್ಯಾಂಕ್ ನ ಕ್ರೆಡಿಟ್ ಕಾರ್ಡ್ ಅನ್ನು ಮೂರು ವರ್ಷದಿಂದ ಬಳಸುತ್ತಿದ್ದರು. ಮಾರ್ಚ್ 23ರಂದು ಬ್ಯಾಂಕ್‌ಗೆ ಆ ಕಾರ್ಡ್ ಅನ್ನು ಸರೆಂಡರ್ ಮಾಡಿದ್ದರು. ಆದರೆ ಮಾರ್ಚ್ 27 ರಂದು ಅವರ ಖಾತೆಯಿಂದ ಯಾರೋ ಅಪರಿಚಿತರು ₹1.12 ಲಕ್ಷ ಬೇರೆ ಬೇರೆ ಖಾತೆಗೆ ವರ್ಗಾಯಿಸಿರುವುದು ಬ್ಯಾಂಕ್ ಸ್ಟೇಟ್‌ಮೆಂಟ್‌ನಲ್ಲಿ ತಿಳಿದುಬಂದಿತ್ತು. ಈ ಹಿನ್ನೆಲೆಯಲ್ಲಿ ಅವರು ಮಂಗಳೂರು ಸೆನ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.

ADVERTISEMENT

ತನಿಖೆ ಆರಂಭಿಸಿದ ಪೊಲೀಸರಿಗೆ ಮೊಬೈಲ್‌ನವಿಕಿ ವಾಲೆಟ್ ಆ್ಯಪ್ ಮೂಲಕ ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದ ಫಿನ್ ಕೇರ್ ಸ್ಮಾಲ್ ಫೈನ್ಯಾನ್ಸ್ ಬ್ಯಾಂಕ್‌ನಲ್ಲಿರುವ ಎರಡು ಖಾತೆಗಳಿಗೆ ಮತ್ತು ಆ ಬಳಿಕ ಉತ್ತರ ಕನ್ನಡದ ಟಿಬೇಟಿಯನ್ ಕಾಲೊನಿಯ ಲಾಮಾ ಕ್ಯಾಂಪ್‌ನಲ್ಲಿ ವಾಸವಿರುವ ಲೋಬಸಂಗ್ ಸಂಗ್ಯೆಯ ಅವರ ಕೆನರಾ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಆಗಿರುವುದು ಕಂಡುಬಂದಿತ್ತು.

ತನಿಖೆ ಮುಂದುವರಿಸಿದ ಪೊಲೀಸರಿಗೆ ಆರೋಪಿ ದಕಫಾ ಪುಂಡೆ, ಚೀನಾದ ನಿಷೇಧಿತ ಆ್ಯಪ್‌ಗಳಾದ wechat ಮತ್ತು red pack ಮುಂತಾದವುಗಳ ಮೂಲಕ ಹವಾಲ ರೀತಿಯಲ್ಲಿ ಹಣವನ್ನು ವರ್ಗಾವಣೆ ಮಾಡಿರುವುದು ಕಂಡುಬಂದಿತ್ತು.

ಆರೋಪಿಗಳಿಬ್ಬರನ್ನು ಬಂಧಿಸಿರುವ ಪೊಲೀಸರು ಮಂಗಳೂರಿನ 7ನೇ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು,10 ದಿನ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.