ADVERTISEMENT

ಉಬುಂಟು ಒಕ್ಕೂಟದಿಂದ ಮಹಿಳಾ ಉದ್ಯಮಿಗಳಿಗೆ ಡಿಜಿಟಲ್‌ ಮಾರ್ಕೆಟಿಂಗ್‌ ತರಬೇತಿ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2023, 16:23 IST
Last Updated 1 ಫೆಬ್ರುವರಿ 2023, 16:23 IST
ಕಾರ್ಯಕ್ರಮದಲ್ಲಿ ಕೆ.ರತ್ನಪ್ರಭ ಮಹಿಳಾ ಉದ್ಯಮಿಗಳ ಕುಶಲೋಪರಿ ವಿಚಾರಿಸಿದರು. ವಾಟಿಕಾ ಪೈ, ದೀಪಾಲಿ, ಆತ್ಮಿಕಾ ಅಮೀನ್, ಉಮಾ ರೆಡ್ಡಿ ಇದ್ದಾರೆ - ಪ್ರಜಾವಾಣಿ ಚಿತ್ರ 
ಕಾರ್ಯಕ್ರಮದಲ್ಲಿ ಕೆ.ರತ್ನಪ್ರಭ ಮಹಿಳಾ ಉದ್ಯಮಿಗಳ ಕುಶಲೋಪರಿ ವಿಚಾರಿಸಿದರು. ವಾಟಿಕಾ ಪೈ, ದೀಪಾಲಿ, ಆತ್ಮಿಕಾ ಅಮೀನ್, ಉಮಾ ರೆಡ್ಡಿ ಇದ್ದಾರೆ - ಪ್ರಜಾವಾಣಿ ಚಿತ್ರ    

ಮಂಗಳೂರು: ‘ಪುರುಷರಿಗೆ ಸರಿಸಮಾನವಾದ ಅವಕಾಶಗಳು ಮಹಿಳೆ ಉದ್ಯಮಿಗಳಿಗೆ ಸಿಗುತ್ತಿಲ್ಲ ಎಂಬ ಕೊರಗು ಕೆಲವರಲ್ಲಿ ಇರಬಹುದು. ಮಹಿಳಾ ಉದ್ಯಮಿಗಳ ಪಾಲಿಗೆ ಇದು ಸವಾಲಿನ ವಿಷಯವೂ ಆಗಿದೆ. ಕೊರತೆ ಹಾಗೂ ಸವಾಲುಗಳನ್ನೇ ಅವಕಾಶವನ್ನಾಗಿ ಪರಿವರ್ತಿಸುವುದರಲ್ಲಿ ಉದ್ಯಮಿಯ ಯಶಸ್ಸು ಅಡಗಿದೆ’ ಎಂದು ಕರ್ಣಾಟಕ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಾಬಲೇಶ್ವರ ಎಂ.ಎಸ್‌. ಹೇಳಿದರು.

ಉಬುಂಟು ಒಕ್ಕೂಟವು ಮಹಿಳಾ ಉದ್ಯಮಿಗಳಿಗಾಗಿ ಇಲ್ಲಿ ಬುಧವಾರ ಏರ್ಪಡಿಸಿದ್ದ ಡಿಜಿಟಲ್‌ ಮಾರ್ಕೆಟಿಂಗ್‌ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಕೋವಿಡ್‌ ಕಾಣಿಸಿಕೊಂಡ ಬಳಿಕ ಜಗತ್ತಿನಾದ್ಯಂತ ಡಿಜಿಟಲ್‌ ಪರಿಸರ ಹೊಸರೂಪ ಪಡೆದಿದೆ. ಇದೇ ಒಂದು ಮಾರುಕಟ್ಟೆಯಾಗಿ ಬೆಳೆದಿದೆ. ದೇಶದಲ್ಲಿ ಅಭಿವೃದ್ಧಿಪಡಿಸಲಾದ ಡಿಜಿಟಲ್‌ ವಾಹಿವಾಟುಗಳಿಗಾಗಿರುವ ಮುಕ್ತ ಜಾಲವು (ಒಎನ್‌ಡಿಸಿ) ಉದ್ಯಮಿಗಳಿಗೆ ಹೊಸ ಅವಕಾಶಗಳ ಬಾಗಿಲನ್ನು ತೆರೆದಿದೆ. ವಿಭಿನ್ನವಾಗಿ ಯೋಚಿಸಿ, ತಮ್ಮ ಆಲೋಚನೆಗಳನ್ನು ವಿಭಿನ್ನವಾಗಿ ಅನುಷ್ಠಾನಗೊಳಿಸುವವರ ಪಾಲಿಗೆ ಇದು ವರದಾನ. ಇಂತಹ ಅವಕಾಶಗಳನ್ನು ಬಳಸಿಕೊಂಡು ಉದ್ದಿಮೆಯನ್ನು ಬೆಳೆಸಬೇಕು’ ಎಂದು ಅವರು ಕಿವಿಮಾತು ಹೇಳಿದರು.

ADVERTISEMENT

‘ಮಹಿಳಾ ಉದ್ಯಮಿಗಳಿಗೆ ನೆರವು ಒದಗಿಸಲು ಹಾಗೂ ವಿಶೇಷ ಪ್ಯಾಕೇಜ್‌ ನೀಡಲು ಕರ್ಣಾಟಕ ಬ್ಯಾಂಕ್‌ ಸೇರಿದಂತೆ ವಿವಿಧ ಬ್ಯಾಂಕ್‌ಗಳು ಸನ್ನದ್ಧವಾಗಿವೆ’ ಎಂದರು.

ಉಬುಂಟು ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷೆ ಕೆ.ರತ್ನಪ್ರಭಾ, ‘ಡಿಜಿಟಲ್‌ ಮಾರುಕಟ್ಟೆ ಈಗಿನ ಕಾಲದ ಅಗತ್ಯ. ಪ್ರತಿಯೊಬ್ಬರೂ ಡಿಜಿಟಲ್‌ ವಹಿವಾಟಿನ ಮೊರೆ ಹೋಗುತ್ತಾರೆ. ಮಂಗಳೂರು ಹಾಗೂ ಉಡುಪಿ ಪ್ರದೇಶವು ಶಿಕ್ಷಣ, ವಾಣಿಜ್ಯ ಚಟುವಟಿಕೆಗಳಲ್ಲಿ ಸದಾ ಮುಂದಿದೆ. ಇಲ್ಲಿ ಎಂಎಸ್‌ಎಂಇಗಳಿಗೂ ಹೇರಳ ಅವಕಾಶಗಳಿವೆ. ಇದನ್ನು ಮಹಿಳಾ ಉದ್ಯಮಿಗಳು ಬಳಸಿಕೊಳ್ಳಬೇಕು’ ಎಂದರು.

‘ಡಿಜಿಟಲ್‌ ಮಾರುಕಟ್ಟೆಯ ಪ್ರಯೋಜನಗಳು ಹಾಗೂ ‌ ಅವಕಾಶಗಳನ್ನು ಬಳಸಿಕೊಳ್ಳುವ ವಿಧಾನದ ಬಗ್ಗೆ ಉಬುಂಟು ಒಕ್ಕೂಟವು ಎರಡನೇ ಹಂತದ ನಗರಗಳಲ್ಲಿರುವ ಮಹಿಳಾ ಉದ್ಯಮಿಗಳಿಗೆ ತರಬೇತಿ ಒದಗಿಸುತ್ತಿದೆ’ ಎಂದು ಅವರು ತಿಳಿಸಿದರು.

ಉಬುಂಟು ಒಕ್ಕೂಟದ ಕಾರ್ಯದರ್ಶಿ ಜ್ಯೋತಿ ಬಾಲಕೃಷ್ಣ, ಕಾರ್ಯಾಚರಣೆ ವಿಭಾಗದ ಉಪಾಧ್ಯಕ್ಷೆ ಉಮಾ ರೆಡ್ಡಿ ಮತ್ತಿತರರು ಇದ್ದರು.

ಡಿಜಿಟಲ್‌ ಮಾರ್ಕೆಟಿಂಗ್ ಕುರಿತು ದೀಪಾಲಿ ತರಬೇತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.