ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ಈ ಹಿಂದೆ ಅಪರಾಧ ಕೃತ್ಯಗಳ ಮೃತದೇಹಗಳನ್ನು ಹೂತು ಹಾಕಲಾಗಿದೆ ಎಂದು ಆರೋಪಿಸಲಾದ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಕಾ ತಂಡದ (ಎಸ್‌ಐಟಿ) ಬೆಳ್ತಂಗಡಿ ಕಚೇರಿಗೆ ಧರ್ಮಸ್ಥಳದ ಉದಯ್ ಜೈನ್ ಬುಧವಾರ ಹಾಜರಾದರು.
ಸುದ್ದಿಗಾರರ ಜೊತೆ ಮಾತನಾಡಿದ ಉದಯ್ ಜೈನ್, 'ಬುಧವಾರ 11 ಗಂಟೆಗೆ ಕಚೇರಿಗೆ ಹಾಜರಾಗುವಂತೆ ಎಸ್ಐಟಿ ಅಧಿಕಾರಿಯೊಬ್ಬರು ನಿನ್ನೆ ದೂರವಾಣಿ ಕರೆ ಮಾಡಿ ತಿಳಿಸಿದ್ದರು. ಹಾಗಾಗಿ ಇಲ್ಲಿಗೆ ಬಂದಿದ್ದೇನೆ' ಎಂದು ಹೇಳಿದರು.
ಸೌಜನ್ಯಾ ಕೊಲೆ ಪ್ರಕರಣದಲ್ಲಿ ಉದಯ್ ಜೈನ್, ಮಲ್ಲಿಕ್ ಜೈನ್ ಹಾಗೂ ಧೀರಜ್ ಕೆಲ್ಲ ಅವರ ಹೆಸರು ಕೂಡ ತಳಕು ಹಾಕಿಕೊಂಡಿತ್ತು.
'ಸೌಜನ್ಯ ಕೊಲೆ ಪ್ರಕರಣದ ಎಫ್‌ಐಆರ್ ನಲ್ಲಿ ನಮ್ಮ ಹೆಸರು ಇರಲಿಲ್ಲ. ಆದರೂ ನಮ್ಮನ್ನು ಆರೋಪಿಗಳನ್ನಾಗಿಸುವ ಷಡ್ಯಂತ್ರ ನಡೆದಿತ್ತು. ಸಿಬಿಐ ಮತ್ತು ಸಿಐಡಿ ಅಧಿಕಾರಿಗಳು ನಮ್ಮನ್ನು ವಿಚಾರಣೆಗೆ ಒಳಪಡಿಸಿದ್ದರು. ನಮ್ಮ ಮಂಪರು ಪರೀಕ್ಷೆಯನ್ನೂ ನಡೆಸಲಾಗಿತ್ತು. ಆ ಪ್ರಕರಣದಲ್ಲಿ ನಮ್ಮ ಪಾತ್ರ ಇಲ್ಲ ಎಂದು ಸಾಬೀತಾಗಿತ್ತು. ಈಗ ಎಸ್ಐಟಿಯವರು ಯಾವ ಪ್ರಕರಣ ಸಂಬಂಧ ವಿಚಾರಣೆಗೆ ಕರೆದಿದ್ದಾರೆ ಎಂದು ಗೊತ್ತಿಲ್ಲ. ನನ್ನಂತೆಯೇ, ಇನ್ನಿಬ್ಬರಿಗೂ ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿಯವರು ಕರೆ ಮಾಡಿದ್ದಾರೆ. ನಾನು ಧೀರಜ್ ಕೆಲ್ಲ ಅವರಿಗೆ ಕರೆ ಮಾಡಿದ್ದೆ. ಆಗ ಅವರು ಈ ವಿಚಾರ ತಿಳಿಸಿದ್ದಾರೆ. ಎಸ್ಐಟಿಯವರು ಕರೆದಿದ್ದಾರೆ ಎಂದ ಮೇಲೆ ಅವರು ಕೂಡ ಬರಲೇ ಬೇಕಾಗುತ್ತದೆ ಅಲ್ಲವೇ' ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.