
ಬ್ರಹ್ಮಾವರ (ಉಡುಪಿ): ದೇಶಕ್ಕಾಗಿ ಹೋರಾಡಿ ಅಂಗವೈಕಲ್ಯತೆಗೆ ಒಳಗಾಗಿದ್ದ ಕಾಸರಗೋಡಿನ ಯೋಧ ಶ್ಯಾಮರಾಜ್ ಎಂಬುವರಿಗೆ ಬ್ರಹ್ಮಾವರ ತಾಲ್ಲೂಕಿನ ಸಾಸ್ತಾನ ಟೋಲ್‌ಬೂತ್‌ನಲ್ಲಿ ಟೋಲ್ ವಿನಾಯಿತಿ ನೀಡದೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಪತ್ನಿಯ ಕೆಲಸದ ವಿಚಾರಕ್ಕಾಗಿ ಶನಿವಾರ ಕಾರಿನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಟೋಲ್ ನೀಡುವಂತೆ ಸಿಬ್ಬಂದಿ ಒತ್ತಾಯಿಸಿದ್ದು, ಈ ವಿಚಾರವನ್ನು ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ಬಳಿಕ ಟೋಲ್ ಸಿಬ್ಬಂದಿ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶ ವ್ಯಕ್ತವಾಗಿತ್ತು.
ಶ್ಯಾಮರಾಜ್ ಅವರ ಪತ್ನಿಯೂ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಮಿಲಿಟರಿ ನರ್ಸಿಂಗ್ ವಿಭಾಗದಲ್ಲಿ ಲೆಫ್ಟಿನೆಂಟ್ ಕರ್ನಲ್ ಹುದ್ದೆಯಲ್ಲಿದ್ದಾರೆ.
‘ಪತ್ನಿಯ ಕೆಲಸದ ನಿಯೋಜನೆಗೆ ಸಂಬಂಧಿಸಿದ ಪ್ರಯಾಣಕ್ಕಾಗಿ ಪಡೆದಿದ್ದ ಅಧಿಕೃತ ಟೋಲ್ ವಿನಾಯಿತಿ ಪತ್ರ ಮತ್ತು ಯುದ್ಧದಲ್ಲಿ ಗಾಯಗೊಂಡ ಸೈನಿಕರಿಗೆ ನೀಡಲಾಗುವ ಟೋಲ್ ವಿನಾಯಿತಿ ಪತ್ರವನ್ನು ಸಾಸ್ತಾನ ಟೋಲ್‌ನಲ್ಲಿ ತೋರಿಸಿದ್ದರೂ, ಟೋಲ್ ಸಿಬ್ಬಂದಿ ವಿನಾಯಿತಿ ನೀಡಲು ನಿರಾಕರಿಸಿದ್ದಾರೆ’ ಎಂದು ಶ್ಯಾಮರಾಜ್ ಅವರು ವಿಡಿಯೊದಲ್ಲಿ ಹೇಳಿದ್ದರು.
ಸಾಸ್ತಾನದ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯ ಅಧ್ಯಕ್ಷ ಶ್ಯಾಮಸುಂದರ ನಾಯರಿ ಅವರು ಈ ಘಟನೆಯನ್ನು ಖಂಡಿಸಿ, ‘ವಿನಾಯಿತಿ ಪತ್ರ ಇದ್ದರೂ ಕೂಡ ಸಾಸ್ತಾನ ಟೋಲ್ ಪ್ಲಾಜಾದ ಸಿಬ್ಬಂದಿ ವಿನಾಯಿತಿ ನೀಡದೆ ಸಾರ್ವಜನಿಕರ ಎದುರು ನಿವೃತ್ತ ಯೋಧ ಶ್ಯಾಮರಾಜ್ ಅವರನ್ನು ಅವಮಾನ ಮಾಡಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಎಸ್‌ಪಿಗೆ ಮನವಿ ಸಲ್ಲಿದ್ದರು.
‘ಟೋಲ್ ಬೂತ್‌ನ ಎಲ್ಲಾ ಸಿಬ್ಬಂದಿಯನ್ನು ಠಾಣೆಗೆ ಕರೆಸಿ ಮಾಜಿ ಸೈನಿಕರು ಮತ್ತು ಸೇವೆ ಸಲ್ಲಿಸುತ್ತಿರುವ ಸಶಸ್ತ್ರ ಪಡೆಗಳ ವೃತ್ತಿಪರರೊಂದಿಗೆ ಅಸಭ್ಯ ವರ್ತನೆ ತೋರದಂತೆ ಜಾಗೃತಿ ಮೂಡಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.
ಕ್ಷಮೆಯಾಚನೆ: ಘಟನೆಯ ಕುರಿತು ವಿಡಿಯೊದ ಮೂಲಕ ಟೋಲ್ ಬೂತ್ ಸಿಬ್ಬಂದಿ ಕ್ಷಮೆ ಯಾಚಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.