ADVERTISEMENT

‘ಕಾನೂನು ಸಮಾನ, ಅದರ ಉಪೇಕ್ಷೆ ಸಲ್ಲದು’

ಮಾನಸಿಕ ಆರೋಗ್ಯ ರಕ್ಷಣೆಯಲ್ಲಿ ಮಾನವ ಹಕ್ಕುಗಳ ಪಾತ್ರ ಕುರಿತ ರಾಷ್ಟ್ರೀಯ ವಿಚಾರಸಂಕಿರಣ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2025, 4:28 IST
Last Updated 12 ಡಿಸೆಂಬರ್ 2025, 4:28 IST
ಮಂಗಳೂರಿನ ತಾರನಾಥ ಶೆಟ್ಟಿ ಉಪನ್ಯಾಸ ನೀಡಿದರು
ಮಂಗಳೂರಿನ ತಾರನಾಥ ಶೆಟ್ಟಿ ಉಪನ್ಯಾಸ ನೀಡಿದರು   

ಉಜಿರೆ: ಕಾನೂನು ಎಲ್ಲರಿಗೂ ಸಮಾನವಾಗಿದ್ದು ಅದರ ಉಪೇಕ್ಷೆ ಸಲ್ಲದು ಎಂದು ಮಂಗಳೂರು ಎಸ್‌ಡಿಎಂ ಕಾನೂನು ಕಾಲೇಜಿನ ಪ್ರಾಂಶುಪಾಲ  ತಾರನಾಥ ಶೆಟ್ಟಿ ಹೇಳಿದರು.

ಉಜಿರೆಯ ಎಸ್‌ಡಿಎಂ ಸ್ವಾಯತ್ತ ಕಾಲೇಜಿನ ಮನೋವಿಜ್ಞಾನ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಆಯೋಜಿಸಿರುವ ಎರಡು ದಿನಗಳ ಮಾನಸಿಕ ಆರೋಗ್ಯ ರಕ್ಷಣೆಯಲ್ಲಿ ಮಾನವ ಹಕ್ಕುಗಳ ಪಾತ್ರ ಕುರಿತ ರಾಷ್ಟ್ರೀಯ ವಿಚಾರಸಂಕಿರಣದ ಉದ್ಘಾಟನಾ ಸಮಾರಂಭದಲ್ಲಿ ಗುರುವಾರ ಅವರು ಉಪನ್ಯಾಸ ನೀಡಿದರು.

ಹುಟ್ಟಿನಿಂದ ಸಾವಿನ ವರೆಗೆ ನಾವೆಲ್ಲರೂ ಕಾನೂನಿನ ಚೌಕಟ್ಟಿನೊಳಗೆ ಕಾರ್ಯನಿರ್ವಹಿಸಬೇಕಾದ ಅನಿವಾರ್ಯತೆ ಇರುವುದರಿಂದ ಪ್ರತಿಯೊಬ್ಬರಿಗೂ ಕಾನೂನು ಪಾಲನೆಯ ಅರಿವು ಮತ್ತು ಜಾಗೃತಿ ಇರಬೇಕು ಎಂದರು.

ADVERTISEMENT

ಕಾನೂನು ಪಾಲನೆ ಮಾಡದಿದ್ದರೆ ಅನೇಕ ಸಮಸ್ಯೆ, ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಕಾನೂನು, ಕುರುಡನ ಕೈಯಲ್ಲಿ ಕೊಟ್ಟ ದೊಣ್ಣೆಯಂತಾಗಬಾರದು ಎಂದು ಅವರು ಹೇಳಿದರು.

ವಿಚಾರ ಸಂಕಿರಣ ಉದ್ಘಾಟಿಸಿದ ಉಜಿರೆಯ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊ.ಎಸ್ ಸತೀಶ್ಚಂದ್ರ ಮಾತನಾಡಿ ಮಾನಸಿಕ, ದೈಹಿಕ ಹಾಗೂ ಭಾವನಾತ್ಮಕ ಆರೋಗ್ಯ ರಕ್ಷಣೆಗೆ ಪ್ರತಿಯೊಬ್ಬರಿಗೂ ಮನೋವಿಜ್ಞಾನದ ಅರಿವು ಇರಬೇಕು. ಒತ್ತಡ, ಆಹಾರ ಹಾಗೂ ಆಚಾರದಲ್ಲಿ ಕ್ರಾಂತಿಕಾರಿ ಪರಿವರ್ತನೆಯಿಂದಾಗಿ ಅನೇಕ ಮಂದಿ ಮಾನಸಿಕ ರೋಗಗಳಿಗೆ ಬಲಿಯಾಗುತ್ತಿದ್ದಾರೆ. ಅವರಿಗೆ ಸಕಾಲಿಕವಾಗಿ ಆಪ್ತ ಸಮಾಲೋಚನೆ, ಮಾರ್ಗದರ್ಶನ ಬೇಕಾಗುತ್ತದೆ ಎಂದರು.

ಎಸ್‌ಡಿಎಂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಡೀನ್ ಸೌಮ್ಯಾ ಬಿ.ಪಿ. ವಿಶೇಷ ವಾರ್ಷಿಕ ಸಂಚಿಯನ್ನು ಬಿಡುಗಡೆಗೊಳಿಸಿದರು. ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪ್ರೊ.ಪಿ ವಿಶ್ವನಾಥ, ಆಪ್ತಸಮಾಲೋಚಕರಿಗೆ ಬೇಡಿಕೆ ಇದ್ದು ಅವರು ವಿಶೇಷ ಜ್ಞಾನ, ಕೌಶಲ, ಸಹಾನುಭೂತಿ, ಸಂವಹನ ಕಲೆ ಹಾಗೂ ಮಾನವೀಯತೆ ಹೊಂದಿರಬೇಕು ಎಂದರು.

ಮಹೇಶ್‌ಬಾಬು ಸ್ವಾಗತಿಸಿದರು. ಅಶ್ವಿನಿ ಎಚ್. ಧನ್ಯವಾದ ಹೇಳಿದರು. ಸ್ಮಿತಾ ಮತ್ತು ಜೆಸ್ಲಿನ್ ನಿರ್ವಹಿಸಿದರು. ಶುಕ್ರವಾರ ಸಂಜೆ 4 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಹೈದರಾಬಾದ್‌ನ ಷಣ್ಮುಖಿ ಸಮಾರೋಪ ಭಾಷಣ ಮಾಡುವರು ಎಂದು ಸಂಘಟಕರು ತಿಳಿಸಿದ್ದಾರೆ.

UJIRE

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.