
ಉಜಿರೆ: ‘ಸಾಹಿತ್ಯದ ಬಗ್ಗೆ ಅರಿವು, ಜಾಗೃತಿಯೊಂದಿಗೆ ವಿವೇಕ ಮೂಡಿಸುವುದೇ ಸಾಹಿತ್ಯ ಸಮ್ಮೇಳನದ ಉದ್ದೇಶ. ಸಾಹಿತ್ಯದ ಓದಿನಿಂದ ಸಂಸ್ಕಾರಯುತ ಜೀವನ ಸಾಧ್ಯವಾಗುತ್ತದೆ’ ಎಂದು ಕರ್ನಾಟಕ ಜಾನಪದ ವಿವಿ ಮಾಜಿ ಕುಲಪತಿ ಕೆ. ಚಿನ್ನಪ್ಪ ಗೌಡ ಹೇಳಿದರು.
ಅವರು ಭಾನುವಾರ ಬೆಳ್ತಂಗಡಿ ತಾಲ್ಲೂಕಿನ ಕೊಯ್ಯೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಪ್ರೊ.ಎಸ್. ಪ್ರಭಾಕರ್ ವೇದಿಕೆಯಲ್ಲಿ ನಡೆದ ತಾಲ್ಲೂಕು 19ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಸಾಹಿತ್ಯದ ಮೂಲದ್ರವ್ಯ ಭಾಷೆಯಾಗಿದ್ದು, ಅಭಿವ್ಯಕ್ತಿಯ ಮಾಧ್ಯಮವಾಗಿದೆ. ಬುದ್ಧಿ ಮತ್ತು ಹೃದಯದ ಸಂಸ್ಕಾರಕ್ಕಾಗಿ ಸಾಹಿತಿಗಳು ಕೃತಿಗಳ ಮೂಲಕ ಭಾವನೆಗಳನ್ನು, ವಿಚಾರಗಳನ್ನು ಅಭಿವ್ಯಕ್ತಗೊಳಿಸುತ್ತಾರೆ ಎಂದರು.
ಭಾಷೆ, ಶಿಕ್ಷಣ, ಸಾಹಿತ್ಯ ಮತ್ತು ಸಂಸ್ಕೃತಿಗೆ ಅವಿನಾಭಾವ ಸಂಬಂಧವಿದ್ದು, ಸಾಹಿತ್ಯದ ಮೂಲಕ ಶಿಕ್ಷಣ ನೀಡಿದಾಗ ಮಾನವೀಯ ಮೌಲ್ಯಗಳನ್ನು ಹೊಂದಿರುವಸಭ್ಯ, ಸುಸಂಸ್ಕೃತ ನಾಗರಿಕರನ್ನು ರೂಪಿಸಲು ಸಾಧ್ಯವಾಗುತ್ತದೆ. ಪ್ರೀತಿಯು ಅಮರ ಎಂದು ಸಾಹಿತ್ಯದ ಅಧ್ಯಯನದಿಂದ ತಿಳಿದು ಬರುತ್ತದೆ ಎಂದು ಹೇಳಿದರು.
ಶಾಲೆಯಲ್ಲಿ ‘ಶ್ರದ್ಧಾ’ ವಾಚನಾಲಯವನ್ನು ಉದ್ಘಾಟಿಸಿದ ಅವರು, ತಮ್ಮ ಕೆಲವು ಪುಸ್ತಕಗಳನ್ನು ಕೊಡುಗೆ ನೀಡಿದರು. ಪ್ರೊ.ಎಸ್. ಪ್ರಭಾಕರ್ ಅವರಿಗೆ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ಆಶಯ ಭಾಷಣ ಮಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಪಿ. ಶ್ರೀನಾಥ್, ತಾಲ್ಲೂಕು ಮಟ್ಟದಲ್ಲಿ 13, ಜಿಲ್ಲಾ ಮಟ್ಟದಲ್ಲಿ 3, ಹೋಬಳಿ ಮಟ್ಟದಲ್ಲಿ 2 ಸಮ್ಮೇಳನಗಳನ್ನು ನಡೆಸಲಾಗಿದೆ. ಶಾಲೆ– ಕಾಲೇಜುಗಳಲ್ಲಿ 450ಕ್ಕೂ ಅಧಿಕ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಬಂಟ್ವಾಳದಲ್ಲಿ ಮಾರ್ಚ್‌ನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಕನ್ನಡ ಭಾಷೆ ಬಲವಾದಷ್ಟು ಸಾಹಿತ್ಯ, ಸಂಸ್ಕೃತಿ ಸದೃಢವಾಗುತ್ತದೆ. ಕನ್ನಡವನ್ನು ಹೆಚ್ಚು ಬಳಸಿ, ಬೆಳೆಸಬೇಕು ಎಂದು ಹೇಳಿದರು.
ನಿಕಟಪೂರ್ವ ಸಮ್ಮೇಳನ ಅಧ್ಯಕ್ಷ ಎ. ಕೃಷ್ಣಪ್ಪ ಪೂಜಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ ಮಾತನಾಡಿದರು. ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಯದುಪತಿ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಶೋಕ ಭಟ್ ಅಗ್ರಸಾಲೆ ಸ್ವಾಗತಿಸಿದರು. ರಾಮಕೃಷ್ಣ ಭಟ್ ಚೊಕ್ಕಾಡಿ ವಂದಿಸಿದರು. ರಾಮಕೃಷ್ಣ ದೊಡ್ಡಮನಿ, ದೀಪ್ತಿ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು. ಕಥಾಗೋಷ್ಠಿ, ಕವಿಗೋಷ್ಠಿ, ಚಾವಡಿ ಚಿಂತನೆ, ಸಾಧಕರಿಗೆ ಸನ್ಮಾನ, ಯಕ್ಷಗಾನ ಬಯಲಾಟ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ ಮುಂತಾದ ವೈವಿಧ್ಯಮಯ ಕಾರ್ಯಕ್ರಮಗಳು ನಡೆದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.