ADVERTISEMENT

ಉಳ್ಳಾಲ: ಕುಡಿತದ ನಶೆಯಲ್ಲಿ ಗಾಜಿಗೆ ಒಡೆದ ಯುವಕ ಸಾವು

​ಪ್ರಜಾವಾಣಿ ವಾರ್ತೆ
Published 4 ಜುಲೈ 2025, 15:32 IST
Last Updated 4 ಜುಲೈ 2025, 15:32 IST
ನಿತೇಶ್ ನಾಯಕ್‌
ನಿತೇಶ್ ನಾಯಕ್‌   

ಉಳ್ಳಾಲ: ಕುಡಿದ ನಶೆಯಲ್ಲಿ ಯುವಕನೊಬ್ಬ ಮನೆಯ ಷೋಕೇಸ್ ಗಾಜು ಕೈಯ್ಯಲ್ಲೇ ಹೊಡೆದು ಒಡೆದ ಪರಿಣಾಮ ತೀವ್ರ ರಕ್ತಸ್ರಾವ ಉಂಟಾಗಿ‌ ಸಾವನ್ನಪ್ಪಿರುವ ಘಟನೆ ಮಾಡೂರು ಸೈಟ್‌ನಲ್ಲಿ ಗುರುವಾರ ಸಂಭವಿಸಿದೆ.

ಮಾಡೂರ್ ಸೈಟ್ ನಿವಾಸಿ ಸತೀಶ್ ನಾಯಕ್ ಅವರ ಪುತ್ರ ನಿತೇಶ್ ನಾಯಕ್‌ (38) ಸಾವನ್ನಪ್ಪಿದವರು.

ಕೋಟೆಕಾರು ಬೀರಿ ಜಂಕ್ಷನ್ ಸಮೀಪವೇ ತಂದೆ ಜತೆಗೆ ಗಲಾಟೆ ನಡೆಸುತ್ತಾ ಮನೆಗೆ ಬಂದಿದ್ದ ನಿತೇಶ್, ಮನೆಯಲ್ಲಿಯೂ ಸಹ ನಿತ್ಯದಂತೆ ಗಲಾಟೆ ಆರಂಭಿದ್ದಾನೆ. ಈ ವೇಳೆ ಆಕ್ರೋಶದಿಂದ ಮನೆ ಮಹಡಿಯ ಕಿಟಕಿ ಗಾಜನ್ನು ಕೈಯಲ್ಲೇ ಒಡೆದಿದ್ದರಿಂದ ಕೈ ಪ್ರಮುಖ ನರಕ್ಕೆ ತಗಲಿ ತೀವ್ರ ರಕ್ತಸ್ರಾವ ಉಂಟಾಗಿದೆ. ಬಳಿಕ ತಾಯಿಯನ್ನೂ ಕರೆದರೂ ಯಾರೂ ಗಮನಹರಿಸಿಲ್ಲ.  ಕೆಳ ಮಹಡಿಯಲ್ಲಿದ್ದ ತಂದೆ, ತಾಯಿ ಮತ್ತು ಸಹೋದರ ಕೋಣೆ ಸೇರಿದ್ದಾರೆ. ನೆರೆಮನೆಯ ಚಿಕ್ಕಮ್ಮನ ಮಗಳಿಗೆ ಕೂಗುವ ಸದ್ದು ಕೇಳಿ ಮನೆಯತ್ತ ಧಾವಿಸಿ ಎಲ್ಲರೂ ಮೇಲಿನ ಮಹಡಿಗೆ ತಲುಪಿದಾಗ ನಿತೇಶ್‌ ಅರೆಪ್ರಜ್ಞಾವಸ್ಥೆಯಲ್ಲಿದ್ದ. ತಕ್ಷಣಕ್ಕೆ ಸ್ಥಳೀಯ ಹಿಂದೂ ಸಂಘಟನೆ ಕಾರ್ಯಕರ್ತರು ಆಂಬುಲೆನ್ಸ್‌ ಮೂಲಕ ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ಕೊಂಡೊಯ್ದರಾದರೂ, ದಾರಿಮಧ್ಯೆ ಮೃತಪಟ್ಟಿದ್ದಾರೆ.

ADVERTISEMENT

ಉಳ್ಳಾಲ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಆರಂಭದಲ್ಲಿ ಕೊಲೆ ಪ್ರಕರಣವೆಂದು ಸಂಶಯ ವ್ಯಕ್ತಪಡಿಸಿದ್ದರು. ಇದರಿಂದಾಗಿ ಘಟನಾ ಸ್ಥಳಕ್ಕೆ ರಾತ್ರೋರಾತ್ರಿ ಹಿರಿಯ ಪೊಲೀಸ್‌ ಅಧಿಕಾರಿಗಳ ನೇತೃತ್ವದ ಪೊಲೀಸರ ತಂಡವೇ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ತಾಯಿ, ಸಹೋದರ, ತಂದೆಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಕುಡಿತದ ವ್ಯಸನದಿಂದ ಕೃತ್ಯ ನಡೆದಿರುವುದು ಬೆಳಕಿಗೆ ಬಂದಿದೆ.

ಕುಟುಂಬವು ಬೇಕರಿ ತಿಂಡಿ ತಯಾರಿಸುವುದು, ಅಂಗಡಿಗಳಿಗೆ ಹಾಕುವ ಕಾಯಕವನ್ನು ನಡೆಸುತ್ತಲಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.