ಉಳ್ಳಾಲ: ‘ತಾಲ್ಲೂಕು ವ್ಯಾಪ್ತಿಯಲ್ಲಿ ಹಡಿಲು ಬಿದ್ದ ಕೃಷಿ ಭೂಮಿಗಳನ್ನು ಕಂದಾಯ ಇಲಾಖೆಯ ಮೂಲಕ ಸರ್ವೆ ಮಾಡಿಸಿ ಕೃಷಿ ಇಲಾಖೆ, ಸಹಕಾರ ಸಂಘಗಳು, ಸ್ಥಳೀಯ ಸಂಘ ಸಂಸ್ಥೆಗಳ ಜತೆ ಸೇರಿ ಫಲವತ್ತಾದ ಉಳ್ಳಾಲ ನಿರ್ಮಾಣ ಮಾಡುವ ಯೋಜನೆ ರೂಪಿಸಲಾಗುವುದು’ ಎಂದು ವಿದಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಹೇಳಿದರು.
ವಿವಿಧ ಸಂಘ–ಸಂಸ್ಥೆ, ಇಲಾಖೆಗಳ ಸಹಯೋಗದಲ್ಲಿ ಗ್ರಾಮ ಸಂಪರ್ಕ ಅಭಿಯಾನದ ಅಂಗವಾಗಿ ಸೋಮೇಶ್ವರ ಗ್ರಾಮದ ಪಿಲಾರು ಬೈಲ್‌ನಲ್ಲಿ ‘ಕೃಷಿಯೆಡೆಗೆ ವಿದ್ಯಾರ್ಥಿ ಸಮೂಹ ಹಾಗೂ ಯುವಜನತೆಯ ನಡೆ’ ಕೃಷಿ ಅಧ್ಯಯನ ಹಾಗೂ ಚಟುವಟಿಕೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ರೈತರ ಕಷ್ಟಗಳನ್ನು ಅನುಭವಿಸಿದಾಗಲೇ ನಾವು ತಿನ್ನುವ ಅನ್ನದ ಮೌಲ್ಯ ತಿಳಿಯುತ್ತದೆ. ವಿದ್ಯಾರ್ಥಿಗಳಿಗೆ ಗದ್ದೆಯಲ್ಲಿ ಕೃಷಿ ಚಟುವಟಿಕೆ ನಡೆಸುವುದು ಸಾಮಾಜಿಕ ಕಳಕಳಿಯ ಕಾರ್ಯಕ್ರಮವಾಗಿದೆ. ಇಂಥ ಕಾರ್ಯಕ್ರಮಗಳ ಯಶಸ್ಸಿಗೆ ಸಂಘ ಸಂಸ್ಥೆಗಳ ಬೆಂಬಲ ಅಗತ್ಯವಿದೆ. ಮುಂದಿನ ಜನವರಿಗೂ ಮೊದಲು ಭತ್ತದ ಕೃಷಿ ಬಗ್ಗೆ ಚರ್ಚಿಸಿ ಮಾದರಿ ಯೋಜನೆ ರೂಪಿಸಲಾಗುವುದು ಎಂದರು.
ಕೋಟೆಕಾರು ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಕೃಷ್ಣ ಶೆಟ್ಟಿ ಕೆಳಗಿನ ಕೋಟೆಕಾರುಗುತ್ತು ಅಧ್ಯಕ್ಷತೆ ವಹಿಸಿದ್ದರು.
ಪ್ರಮುಖರಾದ ಸದಾಶಿವ ಉಳ್ಳಾಲ, ಹೊನ್ನಪ್ಪ ಗೋವಿಂದ ಗೌಡ, ಟಿ.ಜೆ.ರಮೇಶ್, ಹರೀಶ್ ಶೆಣೈ, ಸೀತಾರಾಮ ಶೆಟ್ಟಿ ಪಿಲಾರು ಮೇಗಿನಮನೆ, ಪ್ರವೀಣ್ ಶೆಟ್ಟಿ ಪಿಲಾರು ಮೇಗಿನಮನೆ, ಜಯಾನಂದ ಎನ್.ಸುವರ್ಣ, ಜ್ಯೋತಿ ಚೇಳ್ಯಾರು, ಯೂಸುಫ್, ಪೂರ್ಣಿಮಾ ಡಿ., ರವಿಶಂಕರ್ ಸೋಮೇಶ್ವರ, ಸದಸ್ಯರಾದ ಸಪ್ನ ಶೆಟ್ಟಿ, ಪುರುಷೋತ್ತಮ ಶೆಟ್ಟಿ ಪಿಲಾರು, ದೀಪಕ್ ಪಿಲಾರು, ಶ್ರೀಧರ ಆಳ್ವ, ಪುರಂದರ ದಾಸ್, ಈಶ್ವರ ಶೆಟ್ಟಿ ಪಿಲಾರು ಮೇಲ್ಮನೆ, ಗಂಗಯ್ಯ ಗಟ್ಟಿ ಪಿಲಾರು ಹೊಸಮನೆ, ಕೆ.ಬಿ.ಅಬೂಸಾಲಿ ಕಿನ್ಯ, ಹರ್ಷವರ್ಧನ ಉಳ್ಳಾಲ್, ಕೆ.ಕೃಷ್ಣಪ್ಪ ಸಾಲ್ಯಾನ್, ಗಂಗಾಧರ ಯು., ಉದಯ ಕುಮಾರ್ ಶೆಟ್ಟಿ ಕೊಂಡಾಣಗುತ್ತು, ಅರುಣ್ ಕುಮಾರ್ ಯು., ರಾಘವ ಆರ್.ಉಚ್ಚಿಲ್, ಸುರೇಖ ಚಂದ್ರಹಾಸ್ ಭಾಗವಹಿಸಿದ್ದರು.
ಕಿಟ್ಟೆಲ್ ಪಿಯು ಕಾಲೇಜಿನ ಪ್ರಾಂಶುಪಾಲ ವಿಠಲ್ ಎ.ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಉಮೇಶ್ ಮುಡಿಪು ಸ್ವಾಗತಿಸಿ ನಿರೂಪಿಸಿದರು. ಶಶಿಧರ್ ಪೊಯ್ಯತ್ತಬೈಲ್ ವಂದಿಸಿದರು. ಸಂಜೀವ ಪಿಲಾರ್ ಕೃಷಿ ಕಾರ್ಯಕ್ಕೆ ಮಾರ್ಗದರ್ಶನ ನೀಡಿದರು.
ಎತ್ತುಗಳಲ್ಲಿ ಉಳುಮೆ, ಟಿಲ್ಲರ್ ಮೂಲಕ ಉಳುಮೆ, ಭತ್ತದ ಸಸಿ ನಾಟಿ ಮಾಡಿದ ಯು.ಟಿ.ಖಾದರ್, ಸುಮಾರು 11 ಪಿಯು ಕಾಲೇಜುಗಳ 300ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಸ್ಥಳೀಯ ರೈತರೊಂದಿಗೆ ಸೇರಿ ಕೃಷಿ ಪಾಠ ಮಾಡಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ವಿದ್ಯಾರ್ಥಿಗಳೊಂದಿಗೆ ಗದ್ದೆಗೆ ಇಳಿದು, ಎತ್ತುಗಳಿಗೆ ನೊಗ ಕಟ್ಟಿ ಉಳುಮೆ ಮಾಡಿದರು. ವಿದ್ಯಾರ್ಥಿಗಳೊಂದಿಗೆ ಕೃಷಿ ಗೀತೆಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.