ಕೇಶವ ಶೆಟ್ಟಿ
ಉಳ್ಳಾಲ (ದಕ್ಷಿಣ ಕನ್ನಡ): ರಾಜಕಾಲುವೆ ದಾಟುವ ಸಂದರ್ಭದಲ್ಲಿ ಕಾಲುಸಂಕದಿಂದ ನೀರಿಗೆ ಬಿದ್ದು ನಾಪತ್ತೆಯಾಗಿದ್ದ ಕೂಲಿಕಾರ್ಮಿಕರೊಬ್ಬರ ಮೃತದೇಹ ಶುಕ್ರವಾರ ಸೋಮೇಶ್ವರ ಉಚ್ಚಿಲದ ಹೊಳೆಯಲ್ಲಿ ಪತ್ತೆಯಾಗಿದೆ.
ಸೋಮೇಶ್ವರ ಗ್ರಾಮದ ಕುಂಪಲ ಆಶ್ರಯ ಕಾಲೊನಿಯ ಕೇಶವ ಶೆಟ್ಟಿ(64) ಮೃತ ವ್ಯಕ್ತಿ.
ಬುಧವಾರ ಸಂಜೆ 7 ಗಂಟೆಯ ಸುಮಾರು ನಿರಂತರ ಮಳೆ ಸುರಿಯುತ್ತಿತ್ತು. ಕೇಶವ ಅವರು ಮನೆಯ ಕಡೆಗೆ ತೆರಳುತ್ತಿದ್ದರು. ಈ ವೇಳೆ ಉಕ್ಕಿ ಹರಿಯುತ್ತಿದ್ದ ಪಿಲಾರುವಿನ ರಾಜಕಾಲುವೆಯ ಕಾಲುಸಂಕ ದಾಟುತ್ತಿದ್ದ ವೇಳೆ ನೀರುಪಾಲಾಗಿದ್ದರು.
ಮನೆ ಮಂದಿ , ನೆರೆಹೊರೆಯವರು ಸೇರಿ ಕಾಲುವೆಯುದ್ದಕ್ಕೂ ಸಾಕಷ್ಟು ಹುಡುಕಾಟ ನಡೆಸಿದ್ದರೂ ಕೇಶವ ಅವರು ಸಿಕ್ಕಿರಲಿಲ್ಲ. ಕೇಶವ ಅವರ ಕೊಡೆ ಕಾಲುವೆಯಲ್ಲಿ ಪತ್ತೆಯಾಗಿತ್ತು. ಮನೆ ಮಂದಿ ಗುರುವಾರ ಉಳ್ಳಾಲ ಠಾಣೆಯಲ್ಲಿ ಕೇಶವ ಅವರು ನಾಪತ್ತೆಯಾಗಿರುವ ಬಗ್ಗೆ ಪ್ರಕರಣ ದಾಖಲಿಸಿದ್ದರು. ಶುಕ್ರವಾರ ಮಧ್ಯಾಹ್ನ ಮೃತ ದೇಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಉಳ್ಳಾಲ ತಹಶೀಲ್ದಾರ್, ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಭೇಟಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತ ಕೇಶವ ಅವರಿಗೆ ಪತ್ನಿ ಹಾಗೂ ಪುತ್ರ, ಪುತ್ರಿ ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.