ADVERTISEMENT

ಬಿಪಿಎಲ್ ಕಾರ್ಡ್‌ ರದ್ದು ಪುನರ್ ಪರಿಶೀಲಿಸಿ: ಯು.ಟಿ.ಖಾದರ್

ಆಹಾರ ಸಚಿವರ ಹೇಳಿಕೆಗೆ ಶಾಸಕ ಯು.ಟಿ.ಖಾದರ್ ಖಂಡನೆ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2021, 14:27 IST
Last Updated 15 ಫೆಬ್ರುವರಿ 2021, 14:27 IST
ಶಾಸಕ ಯು.ಟಿ.ಖಾದರ್
ಶಾಸಕ ಯು.ಟಿ.ಖಾದರ್   

ಮಂಗಳೂರು: ‘ಬೈಕ್, ಟಿವಿ, ಫ್ರಿಡ್ಜ್ ಇದ್ದವರಿಗೆ ಬಿಪಿಎಲ್ ಕಾರ್ಡ್ ರದ್ದುಪಡಿಸುವ ಬಗ್ಗೆ ರಾಜ್ಯದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರು ನೀಡಿರುವ ಹೇಳಿಕೆಯನ್ನು ಪುನರ್ ಪರಿಶೀಲಿಸಬೇಕು’ ಎಂದು ಶಾಸಕ ಯು.ಟಿ.ಖಾದರ್ ಒತ್ತಾಯಿಸಿದರು.

ನಗರದ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘2008ರಿಂದ 2013ರವರೆಗೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗಲೂ ಇದೇ ರೀತಿ ಆದೇಶ ಮಾಡಿದ್ದರು. ಬಿಪಿಎಲ್ ಕಾರ್ಡ್‌ಗೆ ಜನ ಅರ್ಜಿ ಸಲ್ಲಿಸಲು ಪರದಾಡುವ ಪರಿಸ್ಥಿತಿ ನಿರ್ಮಿಸಿದ್ದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಆಧಾರ್ ಕಾರ್ಡ್ ಇದ್ದವರಿಗೆ ರೇಷನ್ ಕಾರ್ಡ್ ಜಾರಿಗೊಳಿಸಿದ್ದು, ಹಕ್ಕಿಪಿಕ್ಕಿ ಜನಾಂಗ ಸೇರಿದಂತೆ ಅಲೆಮಾರಿಗಳಿಗೂ ಬಿಪಿಎಲ್ ಕಾರ್ಡ್ ದೊರೆಯುವಂತೆ ಮಾಡಿತ್ತು. ಈಗ ಮತ್ತೆ ಬಿಜೆಪಿ ಸರ್ಕಾರದ ಆಹಾರ ಸಚಿವರ ಹೇಳಿಕೆಯು ಜನಸಾಮಾನ್ಯರಿಗೆ ಮುಳುವಾಗಿದೆ. ಈಗಾಗಲೇ 7 ಕೆ.ಜಿ ಅಕ್ಕಿಯನ್ನು 5 ಕೆ.ಜಿಗೆ ಇಳಿಕೆ ಮಾಡಲಾಗಿದೆ. ಯೋಜನೆಗಳಲ್ಲಿ ಶೇ 5ರಷ್ಟು ತಪ್ಪು, ದುರುಪಯೋಗ ಉಂಟಾಗುತ್ತದೆ. ಅದನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳುವುದು ಸರ್ಕಾರದ ಜವಾಬ್ದಾರಿ. ಸರ್ಕಾರ ಬಡವರಿಗೆ ಸಿಗುತ್ತಿರುವ ಪಡಿತರ ವ್ಯವಸ್ಥೆಯನ್ನೇ ಬಂದ್ ಮಾಡಲು ಮುಂದಾಗಿರುವುದನ್ನು ಕಾಂಗ್ರೆಸ್ ಖಂಡಿಸುತ್ತದೆ’ ಎಂದರು.

‘ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು ‘ಗರೀಬಿ ಹಠಾವೊ’ (ಬಡತನ ಓಡಿಸಿ) ಘೋಷಣೆಯೊಂದಿಗೆ ಪಡಿತರ ವ್ಯವಸ್ಥೆ ಜಾರಿ ಮಾಡಿದ್ದರು. ಬಿಜೆಪಿಯು ‘ಗರೀಬೋಂಕೊ ಹಠಾವೊ’ (ಬಡವರನ್ನು ಓಡಿಸಿ) ಮಾಡುತ್ತಿದೆ’ ಎಂದು ವ್ಯಂಗ್ಯವಾಡಿದರು.

ADVERTISEMENT

‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ಕಿ ಬದಲು ರಾಗಿ ನೀಡುವ ಬದಲು ಕುಚ್ಚಲಕ್ಕಿ ನೀಡುವ ವ್ಯವಸ್ಥೆ ಜಾರಿಗೊಳಿಸಬೇಕು’ ಎಂದು ಹೇಳಿದರು.

ಗೋಷ್ಠಿಯಲ್ಲಿ ಟಿ.ಕೆ. ಸುಧೀರ್, ನೀರಜ್ ಪಾಲ್, ಮುಹಮ್ಮದ್ ಕುಂಜತ್ತಬೈಲ್, ದುರ್ಗಾಪ್ರಸಾದ್, ಆರೀಫ್‌ ಇದ್ದರು.

ಟೋಲ್ ಅಲ್ಲ- ಜನಪ್ರತಿನಿಧಿಗಳೇ ಸಮಸ್ಯೆ:

‘ಸುರತ್ಕಲ್‌ನ ಟೋಲ್‌ ಸಮಸ್ಯೆ ಅಲ್ಲ, ಜನಪ್ರತಿನಿಧಿಗಳೇ ಸಮಸ್ಯೆ’ ಎಂದು ಶಾಸಕ ಯು.ಟಿ.ಖಾದರ್ ಲೇವಡಿ ಮಾಡಿದರು.

‘ಸುರತ್ಕಲ್ ಟೋಲ್ ಅನ್ನು ಮೂರು ತಿಂಗಳಲ್ಲಿ ರದ್ದು ಮಾಡುವುದಾಗಿ ಈ ಹಿಂದೆ ಸಂಸದ ನಳಿನ್‌ ಕುಮಾರ್‌ ಕಟೀಲ್ ಹಾಗೂ ಸ್ಥಳೀಯ ಶಾಸಕರು ಭರವಸೆ ನೀಡಿದ್ದರು. ಆ ಹೇಳಿಕೆ ನೀಡಿ ಈಗಾಗಲೇ ಎರಡು ವರ್ಷಗಳಾಗಿವೆ. ಈಗ ಮತ್ತೆ ಸಮಸ್ಯೆ ಬಗೆಹರಿಸುವ ಬದಲು ಜನರನ್ನು ದಿಕ್ಕುತಪ್ಪಿಸಲು ಯತ್ನಿಸುತ್ತಿದ್ದಾರೆ’ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.