ADVERTISEMENT

ಉಳ್ಳಾಲದಲ್ಲಿ ವಿದ್ಯಾರ್ಥಿಗಳಿಗೆ ದಿಢೀರ್ ಡ್ರಗ್ಸ್‌ ಪರೀಕ್ಷೆ ನಡೆಸಿದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 16 ಜನವರಿ 2026, 17:30 IST
Last Updated 16 ಜನವರಿ 2026, 17:30 IST
ತಪಾಸಣೆ ನಡೆಸಿದ ಪೊಲೀಸರು
ತಪಾಸಣೆ ನಡೆಸಿದ ಪೊಲೀಸರು   

ಉಳ್ಳಾಲ (ದಕ್ಷಿಣ ಕನ್ನಡ): ಮಾದಕ ವಸ್ತು ದುರುಪಯೋಗ ತಡೆ ಉದ್ದೇಶದಿಂದ ಉಳ್ಳಾಲ, ಕೊಣಾಜೆ ಪೊಲೀಸರು ಕೇರಳಕ್ಕೆ ತೆರಳುವ ಕಾಲೇಜು ಬಸ್‌ಗಳನ್ನು ತಡೆದು ಬೀರಿ, ಕೋಟೆಕಾರು ಮತ್ತು ಅಸೈಗೋಳಿಯಲ್ಲಿ ದಿಢೀರ್‌ ಮಾದಕ ವಸ್ತು ಪರೀಕ್ಷಾ ಕಾರ್ಯಾಚರಣೆ ನಡೆಸಿದರು.

ಕೊಣಾಜೆ ಪೊಲೀಸ್‌ ಠಾಣಾ ವ್ಯಾಪ್ತಿಯ ಪಿ.ಎ. ಕಾಲೇಜಿನ ಎರಡು ಬಸ್‌ಗಳನ್ನು ತಡೆದು 87 ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಿದ್ದು, ಎಲ್ಲರ ಫಲಿತಾಂಶ ನೆಗೆಟಿವ್‌ ಆಗಿದೆ. ಆದರೂ ಇದು ‘ಪಾಸಿಟಿವ್‌’ ಬೆಳವಣಿಗೆ ಎಂದು ಪೊಲೀಸ್ ಕಮಿಷನರ್ ಸುಧೀರ್‌ ಕುಮಾರ್‌ ರೆಡ್ಡಿ ತಿಳಿಸಿದ್ದಾರೆ.

ಉಳ್ಳಾಲ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಖಾಸಗಿ ಬಸ್‌ಗಳು ಹಾಗೂ ಕಾಲೇಜು ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿಗಳನ್ನು ತಪಾಸಣೆ ನಡೆಸಲಾಯಿತು. ನಿಟ್ಟೆ ವಿಶ್ವವಿದ್ಯಾಲಯ (ಕೆ.ಎಸ್‌. ಹೆಗ್ಡೆ), ಕಣಚೂರು ಇನ್‌ಸ್ಟಿಟ್ಯೂಟ್‌, ಪಿ.ಎ ಕಾಲೇಜ್, ಸೇಂಟ್‌ ಅಲೋಶಿಯಸ್‌ ಕಾಲೇಜ್ ಹಾಗೂ ಎಕ್ಕೂರು ಮೀನುಗಾರಿಕಾ ಕಾಲೇಜಿನ ವಿದ್ಯಾರ್ಥಿಗಳು ಪರೀಕ್ಷೆಗೆ ಒಳಪಟ್ಟರು.

ADVERTISEMENT

ಇದುವರೆಗೆ 103 ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲಾಗಿದ್ದು, ಅವರಲ್ಲಿ 101 ಮಂದಿಯ ವರದಿ ನೆಗೆಟಿವ್‌ ಆಗಿದೆ.  ಒಬ್ಬ ವಿದ್ಯಾರ್ಥಿ ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಆತನ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕಮಿಷನರ್ ವಿವರಿಸಿದ್ದಾರೆ.

ಕೊಣಾಜೆ, ಇನೋಳಿ, ನಡುಪದವು, ದೇರಳಕಟ್ಟೆ ಪ್ರದೇಶಗಳ ಎಂಜಿನಿಯರಿಂಗ್‌, ವೈದ್ಯಕೀಯ, ಡಿಪ್ಲೊಮಾ ಹಾಗೂ ಅರೆವೈದ್ಯಕೀಯ ಕಾಲೇಜುಗಳಲ್ಲಿ ಅಧ್ಯಯನ ಮಾಡುತ್ತಿರುವ ಹಲವರು ಕೇರಳ ಮೂಲದ ವಿದ್ಯಾರ್ಥಿಗಳಾಗಿದ್ದು, ಕೇರಳಕ್ಕೆ ತೆರಳುವ ಸುಮಾರು 10 ಬಸ್‌ಗಳನ್ನು ವಿವಿಧ ಸ್ಥಳಗಳಲ್ಲಿ ತಡೆದು ಪರಿಶೀಲನೆ ನಡೆಸಲಾಗಿದೆ.

ಸೆನ್‌ ಎಸಿಪಿ ಹಾಗೂ ದಕ್ಷಿಣ ವಿಭಾಗದ ಎಸಿಪಿ ಉಳ್ಳಾಲ ಹಾಗೂ ಕೊಣಾಜೆ ಠಾಣಾಧಿಕಾರಿ ಮೇಲ್ವಿಚಾರಣೆಯಲ್ಲಿ ಕಾರ್ಯಾಚರಣೆ ನಡೆದಿದ್ದು, ಮುಂದೆಯೂ ಇಂಥ ಪರಿಶೀಲನೆ ನಡೆಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಮಾದಕ ವಸ್ತು ರಹಿತ ಮಂಗಳೂರು ಮತ್ತು ಮಾದಕ ವಸ್ತು ರಹಿತ ಶೈಕ್ಷಣಿಕ ಕ್ಯಾಂಪಸ್‌ಗಳ ನಿರ್ಮಾಣಕ್ಕೆ ಈ ಪ್ರಯತ್ನ ಮುಂದುವರಿಯಲಿದೆ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.