
ಉಳ್ಳಾಲ: ಕೆಲವು ವರ್ಷಗಳಿಂದ ರಸ್ತೆಯೇ ಇಲ್ಲದ ಊರಿಗೆ ಆರಂಭದಲ್ಲಿ ಸೇತುವೆ ನಿರ್ಮಿಸಲಾಗಿತ್ತು. ಇದೀಗ ರಸ್ತೆಯೂ ನಿರ್ಮಾಣವಾಗಿದೆ. ಊರಿನ ರಸ್ತೆ, ಕುಡಿಯುವ, ನೀರು ದಾರಿದೀಪಕ್ಕೆ ಒತ್ತು ನೀಡುವುದರಿಂದ ಗ್ರಾಮದ ಅಭಿವೃದ್ಧಿ ಸಾಧ್ಯವಾಗಿದೆ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು.
23-24ನೇ ಸಾಲಿನ 15ನೇ ಹಣಕಾಸು ಯೋಜನೆ ಅಡಿಯಲ್ಲಿ ಸೋಮೇಶ್ವರ ಪುರಸಭೆ ವ್ಯಾಪ್ತಿಯ ಉಚ್ಚಿಲ ರಾ.ಹೆ. 66ರಿಂದ ಅಜ್ಜಿನಡ್ಕ ಕೋಟೆಕಾರಿನ ಸೇತುವೆವರೆಗೆ ಕಾಂಕ್ರೀಟ್ ರಸ್ತೆಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಹಿಂದೆ ಊರವರು ದೂರದ ರಸ್ತೆ ಮೂಲಕ ಮನೆ ತಲುಪಬೇಕಿತ್ತು. ಊರಿನ ನಾಗರಿಕರ, ಪುರಸಭೆ, ಪಟ್ಟಣ ಪಂಚಾಯಿತಿ ಸದಸ್ಯರ ಮುತುವರ್ಜಿಯಿಂದಾಗಿ ಸುಸಜ್ಜಿತ ರಸ್ತೆ ನಿರ್ಮಾಣವಾಗಿದೆ. ಉಳ್ಳಾಲ ತಾಲ್ಲೂಕು ಪ್ರದೇಶ ಮಂಗಳೂರಿಗೆ ಹತ್ತಿರವಾಗಿರುವುದರಿಂದ ಅಲ್ಲಿಂದ ಈ ಭಾಗಕ್ಕೆ ಜನ ಬಂದು ಅಭಿವೃದ್ಧಿಗಳಾಗುತ್ತಿವೆ. ಉಚ್ಚಿಲ ಸೌಹಾರ್ದ, ಪ್ರೀತಿಗೆ ಮಾದರಿಯಾದ ಊರು. ಹಲವು ವರ್ಷಗಳಿಂದ ಎಲ್ಲ ಸಮುದಾಯದವರು ಒಗ್ಗಟ್ಟಾಗಿ ಜೊತೆಯಾಗಿ ಬಂದಿರುವುದರಿಂದ ಗ್ರಾಮದ ಅಭಿವೃದ್ಧಿಯಾಗಿದೆ ಎಂದರು.
ಊರಿನ ಹಿರಿಯರಾದ ಸರೋಜಿನಿ, ಸೋಮೇಶ್ವರ ಪುರಸಭೆ ಅಧ್ಯಕ್ಷೆ ಕಮಲ ರಸ್ತೆಯನ್ನು ಉದ್ಘಾಟಿಸಿದರು.
ಸೋಮೇಶ್ವರ ಪುರಸಭೆ ಉಪಾಧ್ಯಕ್ಷ ರವಿಶಂಕರ್ ಸೋಮೇಶ್ವರ, ಕೌನ್ಸಿಲರ್ ಸಲಾಂ, ಕೋಟೆಕಾರು ಪ.ಪಂ.ಕೌನ್ಸಿಲರ್ ಇಸಾಕ್, ಕೋಟೆಕಾರು ವ್ಯವಸಾಯ ಸೇವಾ ಸಹಕಾರ ಸಂಘದ ನಿರ್ದೇಶಕರಾದ ರಾಘವ್ ಉಚ್ಚಿಲ, ರಾಘವ್ ಆರ್. ಉಚ್ಚಿಲ ಭಾಗವಹಿಸಿದ್ದರು.
ಉಳ್ಳಾಲ: ‘ನಕಾರಾತ್ಮಕ ಚಿಂತನೆ ಇರುವವರು ನಕಾರಾತ್ಮಕವಾಗಿಯೇ ಮಾತನಾಡುತ್ತಾರೆ. ಅದು ಅವರಿಗೆ ಬಿಟ್ಟ ವಿಚಾರ’ ಎಂದು ಬಿಜೆಪಿಯವರ ಟೀಕೆಗೆ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಪ್ರತಿಕ್ರಿಯಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಹಿಂದುಳಿದ ವರ್ಗಗಳ ಆಯೋಗವು ಸ್ವತಂತ್ರ ಸಂಸ್ಥೆಯಾಗಿದ್ದು, ಯಾವುದೇ ಸರ್ಕಾರದ ಅಧೀನಕ್ಕೆ ಬರುವುದಿಲ್ಲ. ನಾನು ಸ್ಪೀಕರ್ ಹಾಗೂ ವಿರೋಧ ಪಕ್ಷದ ಮಿತ್ರನಾಗಿದ್ದರೂ ನನ್ನ ಕ್ಷೇತ್ರ ಮತ್ತು ಜಿಲ್ಲೆಗೆ ಬಂದಾಗ ಜನರ ಸೇವೆಯಲ್ಲೇ ಇರುತ್ತೇನೆ. ಕೆಂಪುಕಲ್ಲು ಕ್ವಾರಿ ಕುರಿತು ಜನ ಗೊಂದಲಗಳಿಂದ ಇದ್ದಾರೆ. ಅಧಿಕಾರಿಗಳ ಭಯದಿಂದ ಹಿಂದೆ ಕ್ವಾರಿ ಮಾಲೀಕರು ಕೆಲಸ ಮಾಡುತ್ತಿದ್ದರು. ಆದರೆ, ಸರ್ಕಾರ ಜಾರಿಗೆ ತಂದಿರುವ ಹೊಸ ನೀತಿಯಂತೆ ರಾಯಧನ ದರ ಕಡಿಮೆಯಾಗಿದ್ದು, ಪರವಾನಗಿ ಪಡೆಯುವ ಅವಕಾಶ ದೊರೆತಿದೆ. ಇದರಿಂದ ಮಾಲೀಕರು ಸ್ವಾಭಿಮಾನದಿಂದ ವ್ಯಾಪಾರ ನಡೆಸಲು ಸಾಧ್ಯವಾಗುತ್ತದೆ. ಜನಸಾಮಾನ್ಯರಿಗೂ ಕಡಿಮೆ ದರದಲ್ಲಿ ಕೆಂಪುಕಲ್ಲು ಲಭ್ಯವಾಗಲಿದೆ ಎಂದರು.
ಸರ್ಕಾರ ಯಾವುದೇ ತೀರ್ಮಾನ ಕೈಗೊಂಡರೂ ಅದು ಸಂವಿಧಾನಬದ್ಧವಾಗಿ ನಡೆಯುತ್ತದೆ ಎಂದು ಖಾದರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.