ADVERTISEMENT

ದಕ್ಷಿಣ ಕನ್ನಡ: ನಿಷ್ಕ್ರಿಯ ಖಾತೆಗಳಲ್ಲಿದೆ ₹140 ಕೋಟಿ ಹಣ

‘ನಿಮ್ಮ ಹಣ, ನಿಮ್ಮ ಹಕ್ಕು’ ಅಭಿಯಾನ: ತಮ್ಮ ಹಣ ಹಿಂಪಡೆಯಲು ವಾರಸುದಾರರಿಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2025, 6:45 IST
Last Updated 25 ಡಿಸೆಂಬರ್ 2025, 6:45 IST
‘ನಳ ಜಲ ಮಿತ್ರ’ ಕಾರ್ಯಕ್ರಮದಡಿ ತರಬೇತಿ ಪಡೆದ ಮಹಿಳೆಯರಿಗೆ ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರು ಪರಿಕರಗಳ ಕಿಟ್ ಅನ್ನು ಕಾರ್ಯಕ್ರಮದಲ್ಲಿ ಬುಧವಾರ ಹಸ್ತಾಂತರಿಸಿದರು.  
‘ನಳ ಜಲ ಮಿತ್ರ’ ಕಾರ್ಯಕ್ರಮದಡಿ ತರಬೇತಿ ಪಡೆದ ಮಹಿಳೆಯರಿಗೆ ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರು ಪರಿಕರಗಳ ಕಿಟ್ ಅನ್ನು ಕಾರ್ಯಕ್ರಮದಲ್ಲಿ ಬುಧವಾರ ಹಸ್ತಾಂತರಿಸಿದರು.     

ಮಂಗಳೂರು: ‘ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಬ್ಯಾಂಕ್‌ಗಳಲ್ಲಿ ದೀರ್ಘಾವಧಿಯಿಂದ ನಿಷ್ಕ್ರಿಯವಾಗಿರುವ ಖಾತೆಗಳಲ್ಲಿ ₹ 140 ಕೋಟಿ ಹಣ ಲಭ್ಯವಿದೆ. ‘ನಿಮ್ಮ ಹಣ ನಿಮ್ಮ ಹಕ್ಕು’ ಅಭಿಯಾನದಡಿ ಇಂತಹ ಖಾತೆಗಳ ವಾರಸುದಾರರನ್ನು ಹುಡುಕಿ ಅವರಿಗೆ ಹಣ ಮರಳಿಸಲಾಗುತ್ತಿದೆ’ ಎಂದು ಜಿಲ್ಲಾ ಲೀಡ್ ಬ್ಯಾಂಕ್‌ ವ್ಯವಸ್ಥಾಪಕಿ ಕವಿತಾ ಶೆಟ್ಟಿ ತಿಳಿಸಿದರು.

ಸಂಸದ ಕ್ಯಾ.ಬ್ರಿಜೇಶ್ ಚೌಟ ಅಧ್ಯಕ್ಷತೆಯಲ್ಲಿ ಇಲ್ಲಿ ಬುಧವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ (ಡಿಎಲ್ಆರ್‌ಸಿ) ಮತ್ತು ಬ್ಯಾಂಕಿಂಗ್ ಅಭಿವೃದ್ಧಿ ಸಭೆಯಲ್ಲಿ ಅವರು ಮಾತನಾಡಿದರು.

‘ದೀರ್ಘಾವಧಿಯಿಂದ ನಿಷ್ಕ್ರಿಯವಾಗಿರುವ ಖಾತೆಗಳಲ್ಲಿರುವ ಹಣವನ್ನು ಗ್ರಾಹಕರು ದಾಖಲೆ ಒದಗಿಸಿ ಹಿಂಪಡೆಯಬಹುದು. ಖಾತೆದಾರ ಮೃತಪಟ್ಟಿದ್ದರೆ, ಕಾನೂನುಬದ್ಧ ವಾರಸುದಾರರು ದಾಖಲೆ ಒದಗಿಸಿ ಹಣವನ್ನು ಹಿಂಪಡೆಯಬಹುದು. ಜಿಲ್ಲೆಯ ಬ್ಯಾಂಕ್‌ಗಳಲ್ಲಿ ನಿಷ್ಕ್ರಿಯ ಖಾತೆಗಳಲ್ಲಿ ₹ 160 ಕೋಟಿ ಹಣ ವಿತ್ತು. ಅದರಲ್ಲಿ ಇದುವರೆಗೆ ₹ 20 ಕೋಟಿಯನ್ನು ಮರಳಿಸಲಾಗಿದೆ’ ಎಂದು ಅವರು ಮಾಹಿತಿ ನೀಡಿದರು. 

ADVERTISEMENT

ಸಂಸದ ಕ್ಯಾ.ಬ್ರಿಜೇಶ್ ಚೌಟ, ‘ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಭಾರತೀಯ ರಿಸರ್ವ್ ಬ್ಯಾಂಕ್‌ ಆರಮಭಿಸಿರುವ ‘ನಿಮ್ಮ ಹಣ ನಿಮ್ಮ ಹಕ್ಕು’  ಅಭಿಯಾನದ ಬಗ್ಗೆ ಪ್ರಚಾರ ನೀಡಬೇಕು. ವ್ಯವಸ್ಥಾಪಕರು ಗ್ರಾಹಕರನ್ನು ಸಂಪರ್ಕಿಸಿ ಈ ಬಗ್ಗೆ ಮಾಹಿತಿ ನೀಡಬೇಕು’ ಎಂದರು.   

ಆರ್‌ಬಿಐ ಸಹಾಯಕ ಪ್ರಧಾನ ವ್ಯವಸ್ಥಾ‍ಕ ಅರುಣ್ ಕುಮಾರ್‌, ‘ರಾಜ್ಯದ ಬ್ಯಾಂಕ್‌ಗಳ ನಿಷ್ಕ್ರಿಯ ಖಾತೆಗಳಲ್ಲಿ ₹ 3400 ಕೋಟಿ ಹಣವಿದೆ. ಇಂತಹ ಶೇ 80ರಷ್ಟು ಖಾತೆಗಳಲ್ಲಿ ₹ 1000ಕ್ಕೂ ಕಡಿಮೆ ಹಣವಿದ್ದು, ಆ ಖಾತೆಗಳು 10 ವರ್ಷಗಳಿಗೂ ಹೆಚ್ಚು ಸಮಯದಿಂದ ನಿಷ್ಕ್ರಿಯವಾಗಿವೆ. ಇಂತಹ ಶೇ 70ರಷ್ಟು ಖಾತೆದಾರರ ಮೊಬೈಲ್ ಸಂಖ್ಯೆ ಲಭ್ಯವಿಲ್ಲ. ಹಾಗಾಗಿ ಅವರನ್ನು ಪತ್ತೆಹಚ್ಚುವುದು ಕಷ್ಟವಾಗಿದೆ’ ಎಂದರು.   

‘ಆರ್‌ಬಿಐಯು ಠೇವಣಿದಾರರ ಶಿಕ್ಷಣ ಮತ್ತು ಜಾಗೃತಿ (ಡಿಇಎ) ನಿಧಿಯನ್ನು ಸ್ಥಾಪಿಸಿದೆ. 10 ವರ್ಷ ಅಥವಾ ಅದಕ್ಕಿಂತ ಹೆಚ್ಚು ಸಮಯದಿಂದ ನಿಷ್ಕ್ರಿಯವಾಗಿರುವ ಬ್ಯಾಂಕ್ ಖಾತೆಗಳಲ್ಲಿನ ಹಣವನ್ನು ನಿಗದಿತ ಬಡ್ಡಿಯೊಂದಿಗೆ ಬ್ಯಾಂಕ್‌ಗಳು ಈ ನಿಧಿಗೆ ವರ್ಗಾಯಿಸಬೇಕು.  ಠೇವಣಿದಾರರು ಅಥವಾ ಅವರ ಕಾನೂನುಬದ್ಧ ವಾರಸುದಾರರು ಯಾವುದೇ ಸಮಯದಲ್ಲಿ ತಮ್ಮ ಹಣವನ್ನು ಬ್ಯಾಂಕಿನಿಂದ ಹಿಂಪಡೆಯುವ ಹಕ್ಕನ್ನು ಹೊಂದಿರುತ್ತಾರೆ. ಬ್ಯಾಂಕ್ ಠೇವಣಿಗಳು, ಮ್ಯುಚುವಲ್‌ ಫಂಡ್‌ ಹಾಗೂ ವಿಮೆ ಸೇರಿದಂತೆ ಮೆರೆತು ಹೋದ ಚರಾಸ್ತಿಗಳನ್ನು ಮರಳಿಸಲು ಕೇಂದ್ರ ಸರ್ಕಾರ ರಾಷ್ಟ್ರೀಯ ಅಭಿಯಾನವನ್ನು ಆರಂಭಿಸಿದೆ’ ಎಂದು ವಿವರಿಸಿದರು. 

‘ದೀರ್ಘಾವಧಿಯಿಂದ ನಿಷ್ಕ್ರಿಯವಾಗಿರುವ ಖಾತೆಗಳಲ್ಲಿನ ಹಣವನ್ನು ವಾರಸುದಾರರಿಗೆ ಮರಳಿಸುವುದಕ್ಕೆ ಆರ್‌ಬಿಐ ಪ್ರೋತ್ಸಾಹಧನ ನೀಡಿ ಉತ್ತೇಜಿಸುತ್ತಿದೆ. ಅಂತಹವರಿಗೆ ನೆರವಾಗಲು ಉದ್ಗಮ್‌ (ಯುಡಿಜಿಎಎಂ) ಪೋರ್ಟಲ್ ಅನ್ನು ಪ್ರಾರಂಭಿಸಿದೆ. ನೋಂದಾಯಿತಿ ಬಳಕೆದಾರರು ಬೇರೆ ಬೇರೆ ಬ್ಯಾಂಕ್‌ಗಳಲ್ಲಿನ ದೀರ್ಘಕಾಲದಿಂದ ಉಳಿದ ಠೇವಣಿಗಳ ಮಾಹಿತಿಯನ್ನು ಇದರಲ್ಲಿ ಹುಡುಕಬಹುದು. ಮೃತಪಟ್ಟ ಖಾತೆದಾರರ ಹಣವನ್ನು ವಾರಸುದಾರರಿಗೆ  ಮರಳಿಸುವ ನಿಯಮ ಸರಳಗೊಳಿಸಲಾಗಿದೆ’ ಎಂದರು.  

‘ಜಿಲ್ಲೆಯಲ್ಲಿ ಪ್ರಧಾನ ಮಂತ್ರಿ ಜನ ಧನ ಯೋಜನೆ (ಪಿಎಂಜೆಡಿವೈ) ಅಡಿ 20,769 ಖಾತೆಗಳನ್ನು ಏ.1ರಿಂದ ಸೆ.30ರ ನಡುವೆ ಆರಂಭಿಸಲಾಗಿದೆ. ಈ ಅವಧಿಯಲ್ಲಿ ಪ್ರಧಾನ ಮಂತ್ರಿ ಜೀವನಜ್ಯೋತಿ ವಿಮೆ ಯೋಜನೆ (ಪಿಎಂಜೆಜೆಬಿವೈ) ಅಡಿ 25,564 ಖಾತೆಗಳನ್ನು, ಪ್ರಧಾನ ಮಂತ್ರಿ ಸುರಕ್ಷಾ ವಿಮೆ ಯೋಜನೆ (ಪಿಎಂಎಸ್‌ಬಿವೈ)  ಅಡಿ 52,239 ಖಾತೆಗಳನ್ನು, ಅಟಲ್ ಪಿಂಚಣಿ ಯೋಜನೆಯಡಿ 16,668 ಖಾತೆಗಳನ್ನು ಆರಂಭಿಸಲಾಗಿದೆ ಎಂದು ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕಿ ಮಾಹಿತಿ ನೀಡಿದರು.  

ಪಿಎಂಜೆಜೆಬಿವೈ, ಪಿಎಂಎಸ್‌ಬಿವೈ ಹಾಗೂ ಅಟಲ್ ಪಿಂಚಣಿ ಯೋಜನೆಯಡಿ ಕೆಲವು ಬ್ಯಾಂಕ್‌ಗಳ ಕಳಪೆ ನಿರ್ವಹಣೆಗೆ ಸಂಸದ ಚೌಟ ಅಸಮಾಧಾನ ವ್ಯಕ್ತಪಡಿಸಿದರು. ಅಟಲ್ ಪಿಂಚಣಿ ಯೋಜನೆಯಡಿ ನೋಂದಣಿ ಸುಧಾರಿಸಲು ವಿಸ್ತೃತ ಕಾರ್ಯಯೋಜನೆ ರೂಪಿಸಿ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವಂತೆ ಸೂಚಿಸಿದರು.

ಕೆನರಾ ಬ್ಯಾಂಕಿನ ಡಿಜಿಎಂ ಶೈಲೇಂದ್ರನಾಥ ಶೀತ್‌ ಹಾಗೂ ನಬಾರ್ಡ್‌ ಡಿಜಿಎಂ ಸಂಗೀತಾ ಭಾಗವಹಿಸಿದ್ದರು.  

ನಳ–ಜಲ ಮಿತ್ರ: 161 ಮಹಿಳೆಯರಿಗೆ ತರಬೇತಿ

ಕೇಂದ್ರ ಜಲಶಕ್ತಿ ಸಚಿವಾಲಯವು ಕುಡಿಯುವ ನೀರು ಮತ್ತು ಸ್ವಚ್ಛತೆ ಸಚಿವಾಲಯ ಮತ್ತು ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತಾ ಸಚಿವಾಲಯಗಳ ನೆರವಿನಿಂದ ಜಲಜೀವನ ಅಭಿಯಾನದ ಅಡಿ ‘ನಳ ಜಲ ಮಿತ್ರ’ ಕಾರ್ಯಕ್ರಮವನ್ನು ಆರಂಭಿಸಿದೆ. ಈ ಕಾರ್ಯಕ್ರಮದಡಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಜೀವಿನಿ ಒಕ್ಕೂಟದ 161 ಮಹಿಳೆಯರಿಗೆ ನೀರು ಪೂರೈಕೆ ವ್ಯವಸ್ಥೆ ನಿರ್ವಹಣೆಗಾಗಿ ಪ್ಲಂಬಿಂಗ್‌ ತರಬೇತಿ ನೀಡಲಾಗಿದೆ ಎಂದು ಜಿಲ್ಲಾ ಕೌಶಲ ಅಭಿವೃದಧಿ ಅಧಿಕಾರಿ ಪ್ರದೀಪ್ ಡಿಸೋಜ ತಿಳಿಸಿದರು.  

‘ತರಬೇತಿ ಪೂರ್ಣಗೊಳಿಸಿರುವ 72 ಫಲಾನುಭವಿಗಳಿಗೆ ಪರಿಕರಗಳ ಕಿಟ್‌ ಹಾಗೂ ಪ್ರಮಾಣಪತ್ರವನ್ನು ನೀಡಲಾಗುತ್ತಿದೆ’ ಎಂದರು. ಆಯ್ದ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಪರಿಕರಗಳ ಕಿಟ್‌ ನ್ನು ಸಂಸದ ಕ್ಯಾ.ಬ್ರಿಜೇಶ್ ಚೌಟ ವಿತರಿಸಿದರು.   ಗ್ರಾಮೀಣ ಅಭಿವೃದ್ಧಿ ಸಚಿವಾಲಯವು ದೀನದಯಾಳ್‌ ಉಪಾಧ್ಯಾಯ ಗ್ರಾಮೀಣ ಕೌಶಲ ಯೋಜನೆಯಡಿ ಕೌಶಲ ಅಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ  ಇಲಾಖೆ ಹಾಗೂ ವಿವೇಕಾನಂದ ವಿದ್ಯಾವರ್ಧಕ ಸಂಘದ ನೆರವಿನಿಂದ ಆಯೋಜಿಸಿರುವ ‘ವಿವೇಕ ಉದ್ಯೋಗ 2026’ ಜಿಲ್ಲಾಮಟ್ಟದ ಉದ್ಯೋಗ ಮೇಳವನ್ನು ಪುತ್ತೂರಿನಲ್ಲಿ 2026ರ ಫೆ 21ರಂದು ಆಯೋಜಿಸಿದೆ. ಇದ ಭಿತ್ತಿಪತ್ರವನ್ನು ಸಂಸದ ಬಿಡುಗಡೆ ಮಾಡಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.