ಸಾವು (ಪ್ರಾತಿನಿಧಿಕ ಚಿತ್ರ)
ಮಂಗಳೂರು: ಇಲ್ಲಿನ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯೊಬ್ಬ ಶೌಚಾಲಯದ ಕಿಟಕಿಗೆ ಶಾಲಿನಲ್ಲಿ ನೇಣುಬಿಗಿದುಕೊಂಡು ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಲೈಂಗಿಕ ಕಿರುಕುಳದಿಂದ ಮಕ್ಕಳ ರಕ್ಷಣೆ ಕಾಯ್ದೆಯಡಿ ಬುಧವಾರವಷ್ಟೇ ಬಂಧನಕ್ಕೊಳಗಾಗಿದ್ದ ಮೂಡುಬಿದಿರೆಯ ಮಾರಿಗುಡಿ ದೇವಸ್ಥಾನ ಬಳಿಯ ನಿವಾಸಿ ಪ್ರಕಾಶ್ ಗೋಪಾಲ ಮೂಲ್ಯ (43) ಆತ್ಮಹತ್ಯೆ ಮಾಡಿಕೊಂಡ ಆರೋಪಿ.
ಜೈಲಿನ ಬಿ ಬ್ಯಾರಕಿನ ಶೌಚಾಲಯದ ಕಿಟಕಿಯ ಸರಳುಗಳಿಗೆ ಆರೋಪಿ ಮುಂಜಾನೆ ಶಾಲಿನಿಂದ ನೇಣುಬಿಗಿದುಕೊಂಡಿದ್ದನ್ನು ಜೈಲಿನ ಭದ್ರತಾ ಸಿಬ್ಬಂದಿ ಗಮನಿಸಿದ್ದರು. ಆತನನ್ನು ತಕ್ಷಣವೇ ಜಿಲ್ಲಾ ಸರ್ಕಾರಿ ವೆನ್ಲಾಕ್ ಆಸ್ಪತ್ರೆಗೆ ಜೈಲಿನ ವಾಹನದಲ್ಲಿ ಕರೆದೊಯ್ದಿದ್ದರು. ಆತ ಅಸುನೀಗಿರುವುದಾಗಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದರು.
‘ಆರೋಪಿ ಪ್ರಕಾಶ್ ವಿಪರೀತ ಕುಡಿತದ ಚಟ ಹೊಂದಿದ್ದ. ಬಾಲಕಿಗೆ ಲೈಂಗಿಕ ದೌರ್ಜನ್ಯ ನೀಡಿದ ಆರೋಪದಲ್ಲಿ ಬಂಧನಕ್ಕೊಳಗಾದ ಆತನಿಗೆ ಈ ಪ್ರಕರಣದಲ್ಲಿ ಜಾಮೀನು ಸಿಕ್ಕಿರಲಿಲ್ಲ. ಜೈಲಿನಿಂದ ತನ್ನನ್ನು ಬಿಡಿಸುವುದಕ್ಕೆ ಕುಟುಂಬಸ್ಥರು ಯಾರೂ ಬರುವುದಿಲ್ಲ ಎಂಬ ಕಾರಣಕ್ಕೆ ನೊಂದಿದ್ದ’ ಎಂದು ಜೈಲಿನ ಮೂಲಗಳು ತಿಳಿಸಿವೆ.
ಆತ್ಮಹತ್ಯೆ ಕುರಿತು ಬರ್ಕೆ ಪೊಲೀಸ್‌ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.