
ಮಂಗಳೂರು: ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಉಳ್ಳಾಲ ನಗರದಲ್ಲಿ ಭೂಗತ ವಿದ್ಯುತ್ ಕೇಬಲ್ ಅಳವಡಿಕೆಗೆ ರಾಜ್ಯ ಸರ್ಕಾರದಿಂದ ₹186 ಕೋಟಿ ವೆಚ್ಚದ ಯೋಜನೆ ಮಂಜೂರು ಆಗಿದೆ. ಟೆಂಡರ್ ಪ್ರಕ್ರಿಯೆ ನಡೆಸಿ, ಶೀಘ್ರ ಕೆಲಸ ಪ್ರಾರಂಭಿಸಲಾಗುವುದು ಎಂದು ಸ್ಪೀಕರ್ ಯು.ಟಿ.ಖಾದರ್ ಹೇಳಿದರು.
ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ (ಕೆಪಿಟಿಸಿಎಲ್) ಮೂಲಕ ಕಾಮಗಾರಿ ನಡೆಯಲಿದೆ. ಉಳ್ಳಾಲ ನಗರದ ಕೆಲವು ಕಡೆ ಮನೆಗಳ ಮೇಲೆ ಎಸ್‌ಟಿ, ಎಲ್‌ಟಿ ವಿದ್ಯುತ್ ಮಾರ್ಗಗಳು ಹಾದು ಹೋಗಿವೆ. ಇನ್ನು ಕೆಲವು ಕಡೆಗಳಲ್ಲಿ ಕಾಂಪೌಂಡ್ ಒಳಗೆ ವಿದ್ಯುತ್ ಕಂಬಗಳು ಇವೆ. ಭೂಗತ ವಿದ್ಯುತ್ ಕೇಬಲ್ ಜಾಲದಿಂದ ಇವೆಲ್ಲ ಸಮಸ್ಯೆಗಳು ಪರಿಹಾರವಾಗಲಿವೆ. ಈ ಯೋಜನೆಯಿಂದ ಉಳ್ಳಾಲ ಕ್ಷೇತ್ರಕ್ಕೆ ಹೊಂದಿಕೊಂಡಿರುವ ಮಂಗಳೂರು ನಗರದ ಒಂದು ಭಾಗಕ್ಕೆ ಲಾಭವಾಗಲಿದ್ದು, ₹60 ಕೋಟಿ ವೆಚ್ಚದ ಹೆಚ್ಚುವರಿ ಯೋಜನೆ ಇದಾಗಿದೆ’ ಎಂದರು.
ಭವಿಷ್ಯದಲ್ಲಿ ಜನವಸತಿ, ಕೈಗಾರಿಕೆಗಳ ಹೆಚ್ಚಳವಾದರೂ ಉಳ್ಳಾಲ ಕ್ಷೇತ್ರದಲ್ಲಿ ವಿದ್ಯುತ್ ಪೂರೈಕೆ ಅಬಾಧಿತವಾಗಿರಬೇಕೆಂಬ ಉದ್ದೇಶದಿಂದ 32 ಕೆ.ವಿ. ಸಾಮರ್ಥ್ಯದ ಗ್ರಿಡ್ ಅನ್ನು 131 ಕೆ.ವಿ. ಸಾಮರ್ಥ್ಯದ ಗ್ರಿಡ್ ಆಗಿ ರೂಪಿಸಲು ₹96 ಕೋಟಿ ವೆಚ್ಚದ ಯೋಜನೆ ಮಂಜೂರು ಆಗಿದೆ. ಕ್ಷೇತ್ರ ಮರುವಿಂಗಡಣೆಯಲ್ಲಿ ತುಂಬೆ, ಮೇರಮಜಲು ಭಾಗಗಳು ಮಂಗಳೂರು ವಿಧಾನಸಭಾ ಕ್ಷೇತ್ರಕ್ಕೆ ಸೇರಿವೆ. ಈ ಭಾಗದ ಜನರ ಅನುಕೂಲಕ್ಕಾಗಿ ಹರೇಕಳ ಸೇತುವೆ ಮಾದರಿಯಲ್ಲಿ ಸಜಿಪದಿಂದ ತುಂಬೆ ನಡುವೆ ₹62 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಿಸಲು ಸರ್ಕಾರದಿಂದ ಅನುದಾನ ಮಂಜೂರು ಆಗಿದೆ ಎಂದು ಹೇಳಿದರು.
ಕೋಟೆಪುರದಿಂದ ಬೋಳಾರದವರೆಗೆ ಸಂಪರ್ಕ ಕಲ್ಪಿಸುವ ₹256 ಕೋಟಿ ವೆಚ್ಚದ ಐತಿಹಾಸಿಕ ಸೇತುವೆ ನಿರ್ಮಾಣಕ್ಕೆ, ಸಿಆರ್‌ಝಡ್ ಅನುಮತಿ ದೊರೆತಿದ್ದು, ಟೆಂಡರ್ ಕರೆಯಲು ಸೂಚಿಸಲಾಗಿದೆ. ಹೆದ್ದಾರಿಯ ಅವಲಂಬನೆ ಇಲ್ಲದೆ ಗ್ರಾಮಗಳ ನಡುವೆ ಸಂಪರ್ಕ ಕಲ್ಪಿಸುವ ಸೇತುವೆ ಇದಾಗಲಿದೆ. ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಿಂದ ಈ ಸೇತುವೆಯ ಕೆಳಭಾಗದಲ್ಲಿ ಹೋಟೆಲ್, ಉದ್ಯಾನ ಇನ್ನಿತರ ಆಕರ್ಷಕ ವ್ಯವಸ್ಥೆ ರೂಪಿಸಲಾಗುವುದು. ಸಮುದ್ರ ವೀಕ್ಷಣೆ ವ್ಯವಸ್ಥೆ, ದ್ವೀಪಕ್ಕೆ ತೆರಳಲು ಮಾರ್ಗ ನಿರ್ಮಾಣ ಇನ್ನಿತರ ಕಾಮಗಾರಿಗಳಿಗೆ ₹30 ಕೋಟಿ ವೆಚ್ಚದ ಯೋಜನೆ ತಯಾರಿಸಲಾಗಿದ್ದು, ಮುಂದಿನ ಹಂತದಲ್ಲಿ ಮಂಜೂರು ದೊರೆಯಲಿದೆ ಎಂದು ಖಾದರ್ ತಿಳಿಸಿದರು.
ಅಬ್ಬಕ್ಕ ಭವನಕ್ಕೆ ₹8 ಕೋಟಿ ಬ್ಯಾರಿ ಭವನಕ್ಕೆ ₹6 ಕೋಟಿ ಮಂಜೂರು
ಕರಾವಳಿ ಶಾಸಕರಿಗೆ ಕಿವಿಮಾತು
‘ಈ ಹಿಂದಿನಿಂದಲೂ ಕರಾವಳಿಯ ಶಾಸಕರಿಗೆ ವಿಧಾನಸಭೆಯಲ್ಲಿ ವಿಶೇಷ ಗೌರವ ಇದೆ. ಜಿಲ್ಲೆಯ ಶಾಸಕರು ಪ್ರಾಣಿಗಳ ಹೆಸರಿನಲ್ಲಿ ಕರೆಸಿಕೊಂಡಿರುವುದು ನೋವಿನ ವಿಚಾರ. ಜಿಲ್ಲೆಯ ಪರಂಪರೆಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ದಿನಗಳಲ್ಲಿ ಅವರು ನಡವಳಿಕೆ ಸರಿಪಡಿಸಿಕೊಳ್ಳುವ ವಿಶ್ವಾಸವಿದೆ’ ಎಂದು ಯು.ಟಿ.ಖಾದರ್ ಹೇಳಿದರು.