ADVERTISEMENT

Union Budget: ಕೇಂದ್ರ ಬಜೆಟ್‌ನಲ್ಲಿ ಕರಾವಳಿಗೆ ಸಿಗದ ಆರ್ಥಿಕ ಕಾರಿಡಾರ್

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2026, 2:09 IST
Last Updated 2 ಫೆಬ್ರುವರಿ 2026, 2:09 IST
<div class="paragraphs"><p>ಕೇಂದ್ರ ಬಜೆಟ್</p></div>

ಕೇಂದ್ರ ಬಜೆಟ್

   

ಮಂಗಳೂರು: ಕೇಂದ್ರ ಸರ್ಕಾರದ 2026–27ನೇ ಸಾಲಿನ ಬಜೆಟ್‌ನಲ್ಲಿ  ಪಶ್ಚಿಮ ಕರಾವಳಿಗಾಗಿ ಮೀಸಲಾದ 'ಕರಾವಳಿ ಆರ್ಥಿಕ ಕಾರಿಡಾರ್' ಇಲ್ಲದಿರುವುದು ಹಾಗೂ ಪ್ರಸ್ತಾವಿತ 'ಸಿಲಿಕಾನ್ ಬೀಚ್' ಯೋಜನೆಗೆ  ಹಣಕಾಸಿನ ಬೆಂಬಲ ಸಿಗದೇ ಇರುವುದು ಮಂಗಳೂರು ಮತ್ತು ಕರಾವಳಿ ಕರ್ನಾಟಕಕ್ಕೆ ದೊಡ್ಡ ನಿರಾಶೆ ಮೂಡಿಸಿದೆ ಎಂದು ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಕೆಸಿಸಿಐ) ಹೇಳಿದೆ. 

ಬಂದರುಗಳಲ್ಲಿ ಹೆಚ್ಚಿನ ಹೂಡಿಕೆ, ಮತ್ತು ಜಾಗತಿಕ ಪೂರೈಕೆ ಸರಪಳಿಗಳೊಂದಿಗೆ ಈ ಪ್ರದೇಶವನ್ನು ಸಂಯೋಜಿಸಲು 'ಬ್ಲೂ ಎಕಾನಮಿ'ಗೆ  ಹೆಚ್ಚಿನ ಒತ್ತು ನೀಡಬೇಕೆಂಬ ನಿರೀಕ್ಷೆ ಇತ್ತು. ಅದು ಈಡೇರಿಲ್ಲ.  

ADVERTISEMENT

ಪ್ರಸ್ತಾವಿತ ಹೈ-ಸ್ಪೀಡ್ ರೈಲು ಕಾರಿಡಾರ್‌ಗಳಿಂದ ಕರಾವಳಿ ಕರ್ನಾಟಕವನ್ನು ಹೊರಗಿಟ್ಟಿರುವುದು ಸಂಪರ್ಕ-ಆಧಾರಿತ ಅಭಿವೃದ್ಧಿಯನ್ನು ಮಿತಿಗೊಳಿಸುತ್ತದೆ. ಕರಾವಳಿಯಲ್ಲಿರುವ ಎರಡನೇ ಹಂತದ ನಗರಗಳಲ್ಲಿ ಜಿಸಿಸಿ, ತಂತ್ರಜ್ಞಾನ ಕ್ಲಸ್ಟರ್‌ಗಳು ಮತ್ತು ಬಂದರು ಆಧಾರಿತ ಕೈಗಾರಿಕೆಗಳಿಗೆ ಪ್ರೋತ್ಸಾಹದ ಕೊರತೆಯಿಂದಾಗಿ, ಈ ಪ್ರದೇಶವನ್ನು ಸಾಮರ್ಥ್ಯಕ್ಕೆ ತಕ್ಕಂತೆ ಬಳಸಲು ಸಾಧ್ಯವಾಗಿಲ್ಲ  ಎಂದು ಕೆಸಿಸಿಐ ಅಭಿಪ್ರಾಯಪಟ್ಟಿದೆ.

ಕೃಷಿ ಮತ್ತು ಸಮುದ್ರ ವಲಯಗಳನ್ನು ಆಧರಿಸಿ ಈ ಪ್ರದೇಶದ ಅಭಿವೃದ್ಧಿಗೆ ನಿರ್ದಿಷ್ಟ ಯೋಜನೆಗಳ ಕೊರತೆ ಎದ್ದುಕಾಣುತ್ತಿದೆ. ತೆಂಗು ಮತ್ತು ಗೋಡಂಬಿ ಬೆಳೆಗೆ ಉತ್ತೇಜನ ನೀಡಿದ್ದರೂ, ಅಡಿಕೆ ಬೆಳೆಗಾರರ ಸಮಸ್ಯೆಯನ್ನು ನಿರ್ಲಕ್ಷಿಸಲಾಗಿದೆ. ಸಮುದ್ರ ವಿಜ್ಞಾನಕ್ಕೆ ಸಂಬಂಧಿಸಿದ ಶಿಕ್ಷಣ ಸಂಸ್ಥೆಯ ಬೇಡಿಕೆ ಈಡೇರಿಲ್ಲ ಮತ್ತು ಕೈಗಾರಿಕಾ ಕ್ಲಸ್ಟರ್‌ಗಳ ಬಗ್ಗೆ ಸ್ಪಷ್ಟತೆ ಇಲ್ಲ. ಮಂಗಳೂರಿನಲ್ಲಿ ಕೇಂದ್ರೀಯ ಮೆರೈನ್‌ ವಿಶ್ವವಿದ್ಯಾಲಯ ಸ್ಥಾಪಿಸುವ ಕುರಿತು ಯಾವುದೇ ಘೋಷಣೆ ಮಾಡಲಾಗಿಲ್ಲ. ಇದು ದೀರ್ಘಕಾಲದ ಸ್ಥಳೀಯ ಬೇಡಿಕೆಯಾಗಿತ್ತು. 

ಭಾರತ-ಆಧಾರಿತ ಡೇಟಾ ಸೆಂಟರ್‌ಗಳಿಂದ ಜಾಗತಿಕ ಕ್ಲೌಡ್‌ ಸೇವೆಗಳನ್ನು ಒದಗಿಸುವ ವಿದೇಶಿ ಸಂಸ್ಥೆಗಳಿಗೆ 2047 ರವರೆಗೆ ತೆರಿಗೆ ರಜೆ ಪ್ರಸ್ತಾಪಿಸಲಾಗಿದೆ. ಜಮೀನು, ವಿದ್ಯುತ್ ವೆಚ್ಚ ಕಡಿಮೆ ಇರುವುದು ಮತ್ತು ವಿಶ್ವಾಸಾರ್ಹ ವಿದ್ಯುತ್ ಸರಬರಾಜು ವ್ಯವಸ್ಥೆ ಹೊಂದಿರುವುದರಿಂದಾಗಿ ಮಂಗಳೂರು ಡೇಟಾ ಸೆಂಟರ್ ಸ್ಥಾಪನೆಗೆ ಪ್ರಶಸ್ತ ಸ್ಥಳ ಎಂದು ಕೆಸಿಸಿಐ ಹೇಳಿದೆ.

ಖಾಸಗಿ ಸಹಭಾಗಿತ್ವದ ಮಾದರಿಯ ಮೂಲಕ ಐದು ಪ್ರಾದೇಶಿಕ ವೈದ್ಯಕೀಯ ಕೇಂದ್ರಗಳನ್ನು  ಸ್ಥಾಪಿಸುವ ಪ್ರಸ್ತಾಪವು, ಮಂಗಳೂರು ಪ್ರಮುಖ ಜಾಗತಿಕ ಆರೋಗ್ಯ ತಾಣವಾಗಿ ಹೊರಹೊಮ್ಮಲು  ಉತ್ತಮ ಅವಕಾಶ ಎಂದು ಸಂಸ್ಥೆ ಅಭಿಪ್ರಾಯಪಟ್ಟಿದೆ.

ಸಾರ್ವಜನಿಕ ಬಂಡವಾಳ ವೆಚ್ಚ ಹೆಚ್ಚಳ ಮತ್ತು ಪ್ರಸ್ತಾವಿತ 'ಮೂಲಸೌಕರ್ಯ ಅಪಾಯ ಖಾತರಿ ನಿಧಿ'ಯು ಖಾಸಗಿ ಹೂಡಿಕೆಯನ್ನು ಆಕರ್ಷಿಸುವ ನಿರೀಕ್ಷೆಯಿದೆ. ಇದು ನಿರ್ಮಾಣ, ಸರಕು ಸಾಗಾಟ,  ಉತ್ಪಾದನೆ ಮತ್ತು ಸೇವಾ ವಲಯಗಳಲ್ಲಿ ಬಹುಮುಖಿ ಆರ್ಥಿಕ ಪರಿಣಾಮಗಳನ್ನು ಉಂಟುಮಾಡಲಿದೆ.  ಎಂಎಸ್ಎಂಇಗಳಿಗೆ ಬೆಂಬಲ ಮತ್ತು ‘ಚಾಂಪಿಯನ್ ಎಸ್‌ಎಂಇ’ಗಳ ಸೃಷ್ಟಿ: ಪ್ರಸ್ತಾವಿತ 'ಎಸ್‌ಎಂಇ ಬೆಳವಣಿಗೆ ನಿಧಿ', 'ಆತ್ಮನಿರ್ಭರ ಭಾರತ ನಿಧಿ'ಯ ಬಲವರ್ಧನೆ ಎಂಎಸ್ಎಂಇಗಳಿಗೆ ಸಹಕಾರಿ ಎಂದೂ ಕೆಸಿಸಿಐ ಅಭಿಪ್ರಾಯಪಟ್ಟಿದೆ.  

2025ರ ಆದಾಯ ತೆರಿಗೆ ಕಾಯ್ದೆಯ ಪೂರಕ ನಿಯಮಗಳನ್ನು ಮತ್ತು ನಮೂನೆಗಳನ್ನು  ಮುಂಚಿತವಾಗಿ ಬಿಡುಗಡೆ ಮಾಡಬೇಕು. ಅಸ್ಪಷ್ಟತೆ ಇರುವ ನಿಯಮಗಳಿಂದ ಎದುರಾಗುವ ಗೊಂದಲ ನಿವಾರಣೆಗೆ ಕ್ರಮವಹಿಸಬೇಕು ಎಂದು ಒತ್ತಾಯಿಸಿದೆ.