ADVERTISEMENT

ಉಪ್ಪಿನಂಗಡಿ: ಧರೆ ಕುಸಿತ: ಮನೆಗೆ ಹಾನಿ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2025, 6:51 IST
Last Updated 28 ನವೆಂಬರ್ 2025, 6:51 IST
ಉಪ್ಪಿನಂಗಡಿ ಸಮೀಪ ನೆಕ್ಕಿಲಾಡಿಯ ಸುಭಾಶ್‌ನಗರದ ಜನತಾ ಕಾಲೊನಿಯಲ್ಲಿ ಧರೆ ಕುಸಿದು ಮನೆ ಹಾನಿಗೊಂಡಿದೆ 
ಉಪ್ಪಿನಂಗಡಿ ಸಮೀಪ ನೆಕ್ಕಿಲಾಡಿಯ ಸುಭಾಶ್‌ನಗರದ ಜನತಾ ಕಾಲೊನಿಯಲ್ಲಿ ಧರೆ ಕುಸಿದು ಮನೆ ಹಾನಿಗೊಂಡಿದೆ    

ಉಪ್ಪಿನಂಗಡಿ: ನೆಕ್ಕಿಲಾಡಿಯ ಸುಭಾಶ್‌ನಗರದ ಜನತಾ ಕಾಲೊನಿಯಲ್ಲಿ ಮಂಗಳವಾರ ಧರೆ ಸಹಿತ ಮನೆಯೊಂದರ ಆವರಣ ಗೋಡೆ ಕುಸಿದು ಪಕ್ಕದ ಮನೆಯ ಅಡುಗೆ ಕೋಣೆ ಹಾನಿಯಾಗಿದ್ದು, ಮನೆ ಮಂದಿ ಅಪಾಯದಿಂದ ಪಾರಾಗಿದ್ದಾರೆ.

ಸುಭಾಶ್‌ನಗರದ ಜಬ್ಬಾರ್ ಅವರು ತಮ್ಮ ಮನೆಯನ್ನು ನಂದಾವರದ ಇಲ್ಯಾಸ್ ಅವರಿಗೆ ಬಾಡಿಗೆ ನೀಡಿದ್ದರು. ನ.24ರಂದು ಇಲ್ಯಾಸ್ ಕುಟುಂಬ ಈ ಮನೆಗೆ ಬಂದಿದ್ದು, ಬೆಳಿಗ್ಗೆ ಧಾರ್ಮಿಕ ವಿಧಿ-ವಿಧಾನಗಳು ನಡೆಸಿ ಅಡುಗೆ ಕೋಣೆಯಲ್ಲಿ ಔತಣದ ತಯಾರಿ ನಡೆಸಿತ್ತು. ಈ ವೇಳೆ ಮನೆಯ ಹಿಂಬದಿ ಎತ್ತರದ ಜಾಗದಲ್ಲಿ ಸುಶೀಲಾ ಎಂಬವರಿಗೆ ಸೇರಿದ ಮನೆಯ ಆವರಣ ಗೋಡೆ ಕುಸಿದಿದೆ.

ಸುಮಾರು 10 ದಿನಗಳಿಂದ ಆವರಣಗೋಡೆ ಕಟ್ಟುವ ಕೆಲಸ ನಡೆಯುತ್ತಿತ್ತು. ಗೋಡೆ ಕುಸಿಯುವ ಲಕ್ಷಣ ಗೋಚರಿಸುವುದನ್ನು ಗಮನಿಸಿದ ಕಾಮಗಾರಿ ನಿರ್ವಹಿಸುತ್ತಿದ್ದ ಮೇಸ್ತ್ರಿ ಬೊಬ್ಬೆ ಹಾಕಿ ಮನೆಯಿಂದ ಹೊರಗೆ ಓಡುವಂತೆ ಎಚ್ಚರಿಸಿದ್ದಾರೆ. ಆಗ ಅಡುಗೆ ಕೋಣೆಯಲ್ಲಿದ್ದವರೆಲ್ಲಾ ಹೊರಗೆ ಓಡಿ ಬಂದಿದ್ದಾರೆ. ಕೆಲವೇ ಕ್ಷಣಗಳಲ್ಲಿ ಧರೆ ಸಹಿತ ಆವರಣಗೋಡೆ ಕುಸಿದು ಕೆಳಗಿನ ಮನೆಯ ಮೇಲೆ ಬಿದ್ದಿದೆ. ಇದರಿಂದ ಜಬ್ಬಾರ್ ಅವರ ಮನೆಯ ಅಡುಗೆ ಕೋಣೆ ಸಂಪೂರ್ಣ ಹಾನಿಯಾಗಿದೆ. 

ADVERTISEMENT

ಮನೆಯಲ್ಲಿದ್ದ ಫ್ರಿಡ್ಜ್, ಗ್ಯಾಸ್, ಗ್ಯಾಸ್ ಸ್ಟವ್, ಪಾತ್ರೆಗಳು ಮಣ್ಣಿನಡಿ ಸಿಲುಕಿಕೊಂಡಿವೆ. ಮನೆಯಲ್ಲಿ ಇಲ್ಯಾಸ್ ಅವರ ಕುಟುಂಬ ಸದಸ್ಯರಲ್ಲದೇ ನೆಂಟರಿಷ್ಟರೂ ಇದ್ದು, 7-8 ಮಕ್ಕಳೂ ಇದ್ದರು. ಅದೃಷ್ಟವಶಾತ್ ಯಾವುದೇ ಅಪಾಯ ಇಲ್ಲದೇ ಮನೆ ಮಂದಿ ಪಾರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.