ಉಪ್ಪಿನಂಗಡಿ: ವಿವಿಧ ಶುಭ ಸಮಾರಂಭಗಳು, ಸರ್ಕಾರಿ ರಜಾ ದಿನ, ಚತುಷ್ಪಥ ರಸ್ತೆ ಕಾಮಗಾರಿ ಹೀಗೆ ಹಲವು ಕಾರಣಗಳಿಂದ ಗುರುವಾರ ಉಪ್ಪಿನಂಗಡಿ ಪೇಟೆಯಲ್ಲಿ ಭಾರಿ ವಾಹನ ದಟ್ಟಣೆ ಉಂಟಾಗಿ ಪ್ರಯಾಣಿಕರು, ಪಾದಚಾರಿಗಳು, ವಾಹನ ಸವಾರರು ಅಕ್ಷರಶಃ ನರಳಿದರು.
ಹೆದ್ದಾರಿಯ ಅಂಡರ್‌ಪಾಸ್‌ನಿಂದ ಉಪ್ಪಿನಂಗಡಿ ಬಸ್ ನಿಲ್ದಾಣದ ಕಡೆಗೆ ತಿರುವು ಪಡೆಯುವ ಮಾರ್ಗ, ಹೆದ್ದಾರಿಯ ಮತ್ತೊಂದು ಬದಿಯಿಂದ ನೇರವಾಗಿ ಹಾಸನದತ್ತ ಸಾಗುವ ರಸ್ತೆ, ಬಸ್ ನಿಲ್ದಾಣದ ಕಡೆಯಿಂದ ಹೆದ್ದಾರಿಯ ಮತ್ತೊಂದು ಕಡೆಗೆ ಅಂಡರ್‌ಪಾಸ್‌ನಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಬೆಳಿಗ್ಗೆ 11 ಗಂಟೆ ಸುಮಾರಿಗೆ ಕಾಣಿಸಿಕೊಂಡ ವಾಹನ ದಟ್ಟಣೆ ಸಹಜ ಸ್ಥಿತಿಗೆ ಮರಳಲು 2 ಗಂಟೆ ತೆಗೆದುಕೊಂಡಿತು. ಮಧ್ಯಾಹ್ನ 1 ಗಂಟೆ ವೇಳಗೆ ವಾಹನಗಳು ನಿಧಾನವಾಗಿ ಮುಂದೆ ಚಲಿಸಲು ಆರಂಭಿಸಿದವು. ವಾಹನದೊಳಗಿದ್ದ ಸವಾರರು ಒಂದಡಿ ಕದಲಲೂ ಆಗದೆ ಹೈರಾಣಾದರು.
ಮಧ್ಯಾಹ್ನ 12 ಗಂಟೆ ಹೊತ್ತಿಗೆ ಉಪ್ಪಿನಂಗಡಿ-ಗುರುವಾಯನಕೆರೆ ಹೆದ್ದಾರಿಯಲ್ಲಿ, ಪುತ್ತೂರು ರಸ್ತೆಯಲ್ಲಿ ನೆಕ್ಕಿಲಾಡಿಯ ಯುನಿಕ್ ಕಾಂಪೌಂಡ್‌ವರೆಗೆ, ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾಸನ ಕಡೆಗೆ ಹೋಗುವ ಮಾರ್ಗದಲ್ಲಿ ಹಳೆಗೇಟ್‌ವರೆಗೆ ಹಾಗೂ ಮಂಗಳೂರಿಗೆ ಹೋಗುವ ರಸ್ತೆಯಲ್ಲಿ ಬೊಳ್ಳಾರು ತನಕ ವಾಹನಗಳ ಉದ್ದನೆಯ ಸಾಲು ಕಂಡುಬಂತು. ನಾಲ್ಕೂ ಕಡೆಯಿಂದ ಪಟ್ಟಣ ಸಂಪರ್ಕಿಸುವ ರಸ್ತೆಗಳಲ್ಲಿ 2 ಕಿ.ಮೀ ಉದ್ದದವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು.
ಉಪ್ಪಿನಂಗಡಿ ಪೇಟೆಯಲ್ಲಿ ವಾಹನ ದಟ್ಟಣೆ ಉಂಟಾಗಿರುವ ಕುರಿತು ಸಾರ್ವಜನಿಕರೊಬ್ಬರು ವಿಡಿಯೊ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟರು. ದಟ್ಟಣೆ ನಿಯಂತ್ರಿಸಲು ಇಬ್ಬರು ಸಂಚಾರ ಪೊಲೀಸರು ಹರಸಾಹಸ ಪಡುತ್ತಿದ್ದರು. ಉಪ್ಪಿನಂಗಡಿ ಪೊಲೀಸ್ ಠಾಣೆ ಎದುರಿನ ರಸ್ತೆಯಲ್ಲೇ ವಾಹನಗಳು ಕಿಕ್ಕಿರಿದು ನಿಂತಿದ್ದವು. ‘ಠಾಣೆಯ ಒಳಗಡೆ ಪೊಲೀಸ್ ಅಧಿಕಾರಿಯೊಬ್ಬರ ಬೀಳ್ಕೊಡುಗಡೆ ಸಮಾರಂಭ ನಡೆಯುತ್ತಿತ್ತು, ಹೀಗಾಗಿ ಠಾಣೆ ಎದುರೇ ವಾಹನ ದಟ್ಟಣೆ ಆಗಿದ್ದರೂ ಸುಗಮ ಸಂಚಾರಕ್ಕೆ ಪೊಲೀಸರು ಮುಂದಾಗಲಿಲ್ಲ’ ಎಂದು ದಟ್ಟಣೆಯಲ್ಲಿ ಸಿಲುಕಿದ ಸವಾರರು, ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.