ಉಪ್ಪಿನಂಗಡಿ: ಇಲ್ಲಿನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಯು.ಟಿ.ತೌಸೀಫ್ ಎಂದು ಘೋಷಣೆಯಾಗಿ 5 ತಿಂಗಳ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಂದ ನೇಮಕಾತಿ ಆದೇಶ ಬಂದಿದೆ.
ತಕ್ಷಣದಿಂದ ಪಕ್ಷದ ಕಾರ್ಯಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಆದೇಶದಲ್ಲಿ ತಿಳಿಸಲಾಗಿದೆ. ಈ ಹಿಂದೆ ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ಪುತ್ತೂರು ಬ್ಲಾಕ್ ಮತ್ತು ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಮಾತ್ರ ಇತ್ತು. ಪಕ್ಷದ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಕಷ್ಟ ಎಂದು ತೀರ್ಮಾನಿಸಿದ್ದ ಶಾಸಕ ಅಶೋಕ್ ಕುಮಾರ್ ರೈ ಅವರು ವಿಟ್ಲ ಮತ್ತು ಉಪ್ಪಿನಂಗಡಿ ಬ್ಲಾಕ್ ವಿಂಗಡಿಸಿ ಎರಡು ಬ್ಲಾಕ್ ಮಾಡಿದ್ದರು. ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ಈಗ 3 ಬ್ಲಾಕ್ ರಚನೆಯಾಗಿದೆ.
ವಿಟ್ಲ ಬ್ಲಾಕ್ ಅಧ್ಯಕ್ಷರಾಗಿ ಪದ್ಮನಾಭ ಪೂಜಾರಿ, ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷರಾಗಿ ಯು.ಟಿ.ತೌಸೀಫ್ ಅವರನ್ನು ನೇಮಿಸಲಾಗಿತ್ತು. ವಿಟ್ಲ ಬ್ಲಾಕ್ ಅಧ್ಯಕ್ಷರಿಗೆ ಆದೇಶ ಪತ್ರ ನೀಡಲಾಗಿತ್ತು. ಉಪ್ಪಿನಂಗಡಿ ಬ್ಲಾಕ್ ಹೊಸದಾಗಿ ಆಗಿರುವುದರಿಂದಾಗಿ ಎಐಸಿಸಿ ಅನುಮೋದನೆ ಪಡೆದು ಕೆಪಿಸಿಸಿಯಿಂದ ಆದೇಶ ಪತ್ರ ಬರುವಾಗ ತಡವಾಗಬಹುದು ಎಂದು ಶಾಸಕ ತಿಳಿಸಿದ್ದರು. ಹೀಗಾಗಿ ಅಧಿಕಾರ ಸ್ವೀಕಾರ ನಡೆದಿರಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.