ADVERTISEMENT

ಉಪ್ಪಿನಂಗಡಿ: ಸಾಂಸ್ಕೃತಿಕ ವೈಭವ, ಹಬ್ಬದ ಸಡಗರ

ಸೆ.27, 28: ರಾಮಕುಂಜದಲ್ಲಿ ಕಬಡ್ಡಿ ಟೂರ್ನಿ

ಸಿದ್ದಿಕ್ ನೀರಾಜೆ
Published 23 ಸೆಪ್ಟೆಂಬರ್ 2025, 5:03 IST
Last Updated 23 ಸೆಪ್ಟೆಂಬರ್ 2025, 5:03 IST
ಉಪ್ಪಿನಂಗಡಿ ಸಮೀಪದ ರಾಮಕುಂಜದಲ್ಲಿ ನಡೆಯುವ ವಿಭಾಗ ಮಟ್ಟದ ಕಬಡ್ಡಿ ಟೂರ್ನಿಯ ಸಿದ್ಧತೆ ನಡೆಯುತ್ತಿದೆ
ಉಪ್ಪಿನಂಗಡಿ ಸಮೀಪದ ರಾಮಕುಂಜದಲ್ಲಿ ನಡೆಯುವ ವಿಭಾಗ ಮಟ್ಟದ ಕಬಡ್ಡಿ ಟೂರ್ನಿಯ ಸಿದ್ಧತೆ ನಡೆಯುತ್ತಿದೆ   

ಉಪ್ಪಿನಂಗಡಿ: ಕಡಬ ತಾಲ್ಲೂಕಿನ ರಾಮಕುಂಜದಲ್ಲಿ ಸೆ.27 ಮತ್ತು 28ರಂದು ಮೈಸೂರು ವಿಭಾಗ ಮಟ್ಟದ 14ಮತ್ತು 17ರ ವಯೋಮಾನದ ಬಾಲಕ– ಮತ್ತು ಬಾಲಕಿಯರ ಕಬಡ್ಡಿ ಟೂರ್ನಿ 2025 ನಡೆಯಲಿದ್ದು, ಸಿದ್ಧತೆಗಳು ಭರದಿಂದ ಸಾಗುತ್ತಿವೆ.

ಟೂರ್ನಿಯೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳೂ ಮೇಳೈಸಲಿದ್ದು, ಗ್ರಾಮ ಹಬ್ಬದ ಸಡಗರಕ್ಕೆ ಅಣಿಯಾಗುತ್ತಿದೆ. ದಕ್ಷಿಣ ಕನ್ನಡ, ಉಡುಪಿ, ಕೊಡಗು, ಹಾಸನ, ಮಂಡ್ಯ, ಮೈಸೂರು, ಚಾಮರಾಜನಗರ, ಚಿಕ್ಕಮಗಳೂರು ಜಿಲ್ಲೆಯ 14 ಹಾಗೂ 17 ವರ್ಷ ವಯೋಮಾನದವರ 32 ತಂಡಗಳು ಭಾಗವಹಿಸಲಿವೆ. 8 ಜಿಲ್ಲೆಗಳ ಆಟಗಾರರು, ಅವರ ತರಬೇತುದಾರರು, ಅಧಿಕಾರಿಗಳು ಸೇರಿದಂತೆ ಸುಮಾರು 600 ಮಂದಿ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದು, ಅವರಿಗೆ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲೆಯ ವಸತಿ ನಿಲಯ ಹಾಗೂ ರಾಮಕುಂಜೇಶ್ವರ ಸಿಬಿಎಸ್ಇ ವಿದ್ಯಾಲಯದಲ್ಲಿ ವಾಸ್ತವ್ಯ ಹಾಗೂ ಊಟೋಪಚಾರದ ವ್ಯವಸ್ಥೆ ಮಾಡಲಾಗಿದೆ.

ಆಳ್ವಾಸ್ ಸಾಂಸ್ಕೃತಿಕ ವೈಭವ: ಸೆ.27ರಂದು ಸಂಜೆ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ 350 ವಿದ್ಯಾರ್ಥಿಗಳಿಂದ 3 ಗಂಟೆ ಅವಧಿಯಲ್ಲಿ ಸಾಂಸ್ಕೃತಿಕ ವೈಭವ ನಡೆಯಲಿದೆ. ಗುಜರಾತಿನ ಗಾರ್ಭನೃತ್ಯ ಮತ್ತು ದಾಂಡಿಯ, ಬಡಗುತಿಟ್ಟು ಯಕ್ಷಗಾನ ಶ್ರೀರಾಮ ಪಟ್ಟಾಭಿಷೇಕ, ಮಣಿಪುರಿ ಸ್ಟಿಕ್ ಡ್ಯಾನ್ಸ್, ಪುರುಲಿಯಾ, ಮಲ್ಲಕಂಬ ಹಾಗೂ ರೋಪ್ ಕಸರತ್ತು, ಡೊಳ್ಳು ಕುಣಿತ, ಸೃಜನಾತ್ಮಕ ನೃತ್ಯ, ಕಥಕ್ ನೃತ್ಯ ವರ್ಷಧಾರೆ, ಶಾಸ್ತ್ರೀಯ ನೃತ್ಯ-ನವದುರ್ಗೆಯರು ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ADVERTISEMENT

3 ಎಕರೆಯಲ್ಲಿ ವ್ಯವಸ್ಥೆ: ಕಾರ್ಯಕ್ರಮಗಳಿಗೆ ಕಾಲೇಜಿನ 3 ಎಕರೆಯ ಮೈದಾನವನ್ನು ಬಳಸಿಕೊಳ್ಳಲಾಗುತ್ತಿದೆ. ಇದರಲ್ಲಿ 120 ಅಡಿ ಅಗಲ ಮತ್ತು 220 ಅಡಿ ಅಗಲದಲ್ಲಿ ಚಪ್ಪರ ನಿರ್ಮಿಸಲಾಗುತ್ತಿದೆ. ಅದರ ಒಳಗೆ ಅರ್ಧ ಎಕರೆ ಜಾಗದಲ್ಲಿ ಆಟದ ಅಂಕಣ ಮತ್ತು ವೇದಿಕೆ ಇದೆ. ಸುಮಾರು 5 ಸಾವಿರ ಮಂದಿ ಕುಳಿತು ನೋಡಲು ಅವಕಾಶ ಇದೆ. ಒಟ್ಟು 10 ಸಾವಿರ ಮಂದಿಗೆ ವ್ಯವಸ್ಥೆ ಮಡಲಾಗುತ್ತಿದೆ. ‌2 ದಿನ ನಡೆಯುವ ಕಾರ್ಯಕ್ರಮದಲ್ಲಿ ಕೃಷಿ, ವಾಣಿಜ್ಯ, ಶೈಕ್ಷಣಿಕ, ವಿಜ್ಞಾನ ಮೇಳ ಇರಲಿದೆ. ಒಟ್ಟು 25 ಸಾವಿರ ಜನ ಸೇರುವ ನಿರೀಕ್ಷೆ ಇದ್ದು, ರಾಮಕುಂಜೇಶ್ವರ ಸಂಸ್ಕೃತ ಶಾಲೆ ಹಾಗೂ ರಾಮಕುಂಜೇಶ್ವರ ವಿದ್ಯಾಲಯದ ಮೈದಾನದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗುವುದು ಎಂದು ಆಯೋಜನಾ ಸಮಿತಿ ಸಂಚಾಲಕ ಕೇಶವ ಅಮೈ ತಿಳಿಸಿದರು.

ಸಭಾ ಕಾರ್ಯಕ್ರಮ: ಕಬಡ್ಡಿ ಪಂದ್ಯಾಟವನ್ನು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಉದ್ಘಾಟಿಸಿ, ಆಶೀರ್ವಚನ ನೀಡಲಿದ್ದಾರೆ. ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್, ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಶಿಕ್ಷಣ ಸಚಿವ ಮಧು ಎಸ್.ಬಂಗಾರಪ್ಪ, ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕರಾದ ಭಾಗೀರಥಿ ಮುರುಳ್ಯ, ಅಶೋಕ್ ಕುಮಾರ್ ರೈ ಭಾಗವಹಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.