ADVERTISEMENT

ಪೂರ್ವಭಾವಿ ಬೆಂಬಲ ಬೆಲೆ ಘೋಷಿಸಿ

ಕೃಷಿಕ ಸಮಾಜದ ಅಧ್ಯಕ್ಷ ಎಸ್‌.ಡಿ. ಸಂಪತ್ ಸಾಮ್ರಾಜ್ಯ ಆಗ್ರಹ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2022, 16:22 IST
Last Updated 26 ಏಪ್ರಿಲ್ 2022, 16:22 IST
ಮಂಗಳೂರಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಮಂಗಳವಾರ ಆಯೋಜಿಸಿದ್ದ ಕೃಷಿ ಮೇಳ, ವಸ್ತು ಪ್ರದರ್ಶನವನ್ನು (ಎಡದಿಂದ) ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಸೀತಾ, ನಬಾರ್ಡ್‌ನ ಡಿಡಿಎಂ ಸಂಗೀತಾ ಕರ್ತ, ರಾಜ್ಯ ರೈತ ಸಂಘ ಹಸಿರು ಸೇನೆಯ ಮನೋಹರ್‌ ಶೆಟ್ಟಿ, ಕೃಷಿಕ್ ಸಮಾಜದ ಅಧ್ಯಕ್ಷ ಸಂಪತ್‌ ಸಾಮ್ರಾಜ್ಯ ವೀಕ್ಷಿಸಿದರು. –ಪ್ರಜಾವಾಣಿ ಚಿತ್ರ
ಮಂಗಳೂರಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಮಂಗಳವಾರ ಆಯೋಜಿಸಿದ್ದ ಕೃಷಿ ಮೇಳ, ವಸ್ತು ಪ್ರದರ್ಶನವನ್ನು (ಎಡದಿಂದ) ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಸೀತಾ, ನಬಾರ್ಡ್‌ನ ಡಿಡಿಎಂ ಸಂಗೀತಾ ಕರ್ತ, ರಾಜ್ಯ ರೈತ ಸಂಘ ಹಸಿರು ಸೇನೆಯ ಮನೋಹರ್‌ ಶೆಟ್ಟಿ, ಕೃಷಿಕ್ ಸಮಾಜದ ಅಧ್ಯಕ್ಷ ಸಂಪತ್‌ ಸಾಮ್ರಾಜ್ಯ ವೀಕ್ಷಿಸಿದರು. –ಪ್ರಜಾವಾಣಿ ಚಿತ್ರ   

ಮಂಗಳೂರು: ‘ಬಿತ್ತನೆ ವೇಳೆಯಲ್ಲೇ ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಘೋಷಿಸಲು ಸರ್ಕಾರ ಕ್ರಮವಹಿಸಬೇಕು. ಇದರಿಂದ ಬೆಳೆಗಾರರು ತಮ್ಮ ಉತ್ಪನ್ನಗಳಿಗೆ ಉತ್ತಮ ಬೆಲೆ ಪಡೆಯಲು ಸಾಧ್ಯವಾಗುತ್ತದೆ’ ಎಂದು ಕೃಷಿಕ ಸಮಾಜ ಜಿಲ್ಲಾ ಘಟಕದ ಅಧ್ಯಕ್ಷ ಎಸ್‌.ಡಿ. ಸಂಪತ್ ಸಾಮ್ರಾಜ್ಯ ಅಭಿಪ್ರಾಯಪಟ್ಟರು.

ಕೃಷಿ ವಿಜ್ಞಾನ ಕೇಂದ್ರ, ಕೃಷಿ ತಂತ್ರಜ್ಞಾನ ನಿರ್ವಹಣಾ ಸಂಸ್ಥೆ ಹಾಗೂ ಕೃಷಿ ಇಲಾಖೆ ಆಶ್ರಯದಲ್ಲಿ ‘ಕಿಸಾನ್ ಭಾಗಿಧಾರಿ ಪ್ರಾಥಮಿಕತಾ ಹಮಾರಿ’ ಅಭಿಯಾನದ ಅಂಗವಾಗಿ ಇಲ್ಲಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಮಂಗಳವಾರ ಆಯೋಜಿಸಿದ್ದ ಕೃಷಿ ಮೇಳ, ವಸ್ತು ಪ್ರದರ್ಶನ, ರೈತ–ವಿಜ್ಞಾನಿ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಆರ್ಥಿಕ ಅನಿವಾರ್ಯತೆ, ಮಾರುಕಟ್ಟೆ ಅನಿಶ್ಚಿತತೆಯ ಕಾರಣಕ್ಕೆ ಬೆಳೆ ಕಟಾವು ಆದ ತಕ್ಷಣ ರೈತರು ಖಾಸಗಿ ವ್ಯಾಪಾರಿಗಳಿಗೆ ತಾವು ಬೆಳೆದ ಉತ್ಪನ್ನಗಳನ್ನು ಮಾರಾಟ ಮಾಡುತ್ತಾರೆ. ಸರ್ಕಾರ ಕನಿಷ್ಠ ಬೆಂಬಲ ಬೆಲೆ ಘೋಷಿಸುವಷ್ಟರಲ್ಲಿ ಸಣ್ಣ ರೈತರ ಬಳಿ ಇರುವ ಉತ್ಪನ್ನ ಖಾಲಿಯಾಗಿರುತ್ತದೆ. ಎಲ್ಲ ರೈತರಿಗೆ ಬೆಂಬಲ ಬೆಲೆಯ ಸೌಲಭ್ಯ ಸಿಗುವಂತಾಗಲು, ಬಿತ್ತನೆಯ ಸಂದರ್ಭದಲ್ಲೇ ಸರ್ಕಾರ ಬೆಂಬಲ ಬೆಲೆ ಘೋಷಿಸಬೇಕು. ಇದೇ ರೀತಿಯಲ್ಲಿ ಖರೀದಿ ಕೇಂದ್ರಗಳನ್ನು ಕೂಡ ಮುಂಚಿತವಾಗಿ ಘೋಷಿಸಬೇಕು. ಇದರಿಂದ ಮಾರುಕಟ್ಟೆಯಲ್ಲಿ ಸ್ಥಿರತೆ ಬರಲು ಸಾಧ್ಯವಾಗುತ್ತದೆ ಎಂದರು.

ADVERTISEMENT

ರಾಸಾಯನಿಕ ರಸಗೊಬ್ಬರದ ದರ ಗಣನೀಯವಾಗಿ ಏರಿಕೆಯಾಗಿದೆ. ಸರ್ಕಾರದ ಸಹಾಯಧನ ಹಾಗೂ ಗೊಬ್ಬರದ ಖರೀದಿ ದರಕ್ಕೆ ಬಹಳಷ್ಟು ವ್ಯತ್ಯಾಸವಿದ್ದು, ಕೇಂದ್ರ ಸರ್ಕಾರ ಸಹಾಯಧನದ ಮೊತ್ತ ಏರಿಕೆ ಮಾಡಲು ಮುಂದಾಗಬೇಕು ಎಂದು ಆಗ್ರಹಿಸಿದರು.

ಕೃಷಿಯಲ್ಲಿ ಭದ್ರತೆ ಇಲ್ಲದ ಕಾರಣ ಕೃಷಿಕರ ಮಕ್ಕಳು ಕುಟುಂಬದ ಮೂಲ ವೃತ್ತಿ ಬಿಟ್ಟು, ಉದ್ಯೋಗಕ್ಕಾಗಿ ನಗರಕ್ಕೆ ಹೋಗುತ್ತಾರೆ. ರೈತರ ಬಗ್ಗೆ ಸರ್ಕಾರ ಕಾಳಜಿ ತೋರುವ ಮೂಲಕ ಯುವಜನಾಂಗ ಕೃಷಿಯಲ್ಲಿ ಹೆಚ್ಚು ತೊಡಗುವಂತೆ ಮಾಡಬೇಕು ಎಂದರು.

ನಬಾರ್ಡ್ ಡಿಡಿಎಂ ಸಂಗೀತಾ ಕರ್ತ ಮಾತನಾಡಿ, ‘ಜಿಲ್ಲೆಯಲ್ಲಿ 1.63 ಲಕ್ಷ ರೈತರು ಪ್ರಧಾನಮಂತ್ರಿ ಕಿಸಾನ್ ಕ್ರೆಡಿಟ್‌ ಕಾರ್ಡ್ ಮಾಡಿಸಿದ್ದು, ಇನ್ನೂ 97 ಸಾವಿರ ರೈತರು ಮಾಡಿಸಬೇಕಾಗಿದೆ. ಆರ್‌ಟಿಸಿ, ಆಧಾರ್‌ ಕಾರ್ಡ್‌, ಭಾವಚಿತ್ರದೊಂದಿಗೆ ರೈತರು ಯಾವುದೇ ಬ್ಯಾಂಕ್‌ನಲ್ಲಿ ನೋಂದಾಯಿಸಿ, ಕಾರ್ಡ್ ಪಡೆಯಬಹುದು’ ಎಂದರು.

ಕಾರ್ಪೊರೇಟರ್ ಭರತ್ ಕುಮಾರ್, ಕೃಷಿ ವಿಜ್ಞಾನ ಕೇಂದ್ರ ಮುಖ್ಯಸ್ಥ ಡಿ.ಜೆ. ರಮೇಶ್, ರೈತ ಮುಖಂಡ ಮನೋಹರ ಶೆಟ್ಟಿ, ಹಿರಿಯ ತೋಟಗಾರಿಕಾ ನಿರ್ದೇಶಕ ಪ್ರವೀಣಕುಮಾರ್ ಇದ್ದರು. ಜಿಲ್ಲೆಯ ವಿವಿಧ ಭಾಗಗಳ ಸ್ವ ಸಹಾಯ ಗುಂಪುಗಳು ವಸ್ತು ಪ್ರದರ್ಶನದಲ್ಲಿ ಭಾಗವಹಿಸಿದ್ದವು.

ಸಂಜೀವಿನಿ ಸಂಘಕ್ಕೆ ಸನ್ಮಾನ

ಮೀನಿನಿಂದ ಹಪ್ಪಳ, ಸಂಡಿಗೆ, ಉಪ್ಪಿನಕಾಯಿ, ಬಗೆಬಗೆಯ ಚಕ್ಕುಲಿ ತಯಾರಿಸುವ ಬೆಳ್ತಂಗಡಿ ಲಾಯಿಲದ ಸಂಜೀವಿನಿ ಸ್ವ ಸಹಾಯ ಸಂಘದ ಪರವಾಗಿ ಸದಸ್ಯೆ ಸಾವಿತ್ರಿ ಎಚ್.ಎಸ್ ಅವರನ್ನು ಸನ್ಮಾನಿಸಲಾಯಿತು. ‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ವರದಿಯಿಂದ ವಿವಿಧ ಜಿಲ್ಲೆಗಳ ಜನರು ನಮ್ಮ ಸಂಘವನ್ನು ಸಂಪರ್ಕಿಸಿದರು. ಹೆಚ್ಚು ಉತ್ಪನ್ನಗಳು ಮಾರಾಟವಾಗಲು ಪತ್ರಿಕೆಯ ವರದಿ ಸಹಕಾರಿಯಾಯಿತು’ ಎಂದು ಸಾವಿತ್ರಿ ತಮ್ಮ ಮಾತಿನಲ್ಲಿ ಸ್ಮರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.