ADVERTISEMENT

ಉಚಿತ ಲಸಿಕೆ ನೀಡುವ ಯೋಜನೆ ಆರಂಭಿಸಿ: ಜಿಲ್ಲಾಧಿಕಾರಿಗೆ ಕೆಸಿವಿಟಿ ಪತ್ರ

​ಪ್ರಜಾವಾಣಿ ವಾರ್ತೆ
Published 5 ಜೂನ್ 2021, 6:12 IST
Last Updated 5 ಜೂನ್ 2021, 6:12 IST

ಮಂಗಳೂರು: ಖಾಸಗಿ ಆಸ್ಪತ್ರೆಗಳ ಕೋವಿಡ್ ಲಸಿಕೆ ದಂಧೆಯನ್ನು ನಿಲ್ಲಿಸಿ, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಜಿಲ್ಲಾಡಳಿತದ ವತಿಯಿಂದ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡುವ ಯೋಜನೆ ರೂಪಿಸಬೇಕು ಎಂದು ಜನಸಹಾಯ - ಕರ್ನಾಟಕ ಕೋವಿಡ್ ವಾಲೆಂಟಿಯರ್ಸ್ ಟೀಮ್‌ನ ಜಿಲ್ಲಾ ಸಂಯೋಜಕ ಉಮರ್ ಯು.ಎಚ್ ಒತ್ತಾಯಿಸಿದ್ದಾರೆ.

ಈ ಸಂಬಂಧ ಜಿಲ್ಲಾಧಿಕಾರಿಗೆ ಪತ್ರ ಬರೆದಿರುವ ಅವರು, ‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 45 ವರ್ಷಕ್ಕಿಂತ ಮೇಲಿನ ಶೇ 90ಕ್ಕೂ ಹೆಚ್ಚು ಜನರಿಗೆ ಇನ್ನೂ ಲಸಿಕೆ ನೀಡಲಾಗಿಲ್ಲ. ಜನರ ಜೀವ ಮತ್ತು ಜೀವನೋಪಾಯ ಎರಡೂ ಅಪಾಯದಲ್ಲಿದೆ. ಈ ವರ್ಷ ಮತ್ತೆ ಲಾಕ್‍ಡೌನ್‍ ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ’ ಎಂದು ತಿಳಿಸಿದ್ದಾರೆ.

ಸರ್ಕಾರಿ ಆಸ್ಪತ್ರೆಗಳಿಗೆ ಕಡಿಮೆ ಸಂಖ್ಯೆಯಲ್ಲಿ ಲಸಿಕೆ ಪೂರೈಕೆ ಆಗುತ್ತಿದ್ದು, ಖಾಸಗಿ ಆಸ್ಪತ್ರೆಗಳಿಗೆ ಧಾರಾಳವಾಗಿ ಲಭ್ಯವಾಗುತ್ತಿದೆ. ಆಸ್ಪತ್ರೆಗಳಲ್ಲಿ ದರದಲ್ಲೂ ವ್ಯತ್ಯಾಸವಿದೆ. ಜಿಲ್ಲೆಗೆ ಪೂರೈಕೆಯಾಗುತ್ತಿರುವ ಒಟ್ಟು ಲಸಿಕೆಗಳ ಲೆಕ್ಕಾಚಾರಗಳನ್ನು ಜಿಲ್ಲಾಡಳಿತ ಬಹಿರಂಗಪಡಿಸುತ್ತಿಲ್ಲ. ಸರ್ಕಾರಿ ಲಸಿಕೆಯನ್ನು ಖಾಸಗಿಯವರಿಗೆ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪ, ಗೊಂದಲಗಳಿಗೆ ಕಾರಣವಾಗುತ್ತಿದೆ ಎಂದು ವಿವರಿಸಿದ್ದಾರೆ.

ADVERTISEMENT

‘ಸರ್ಕಾರದಿಂದ ಎಲ್ಲರಿಗೂ ಉಚಿತ ಲಸಿಕೆ ನೀಡಲು ಸಾಧ್ಯವಿಲ್ಲ ಎಂದಾದಲ್ಲಿ, ಜಿಲ್ಲಾಡಳಿತ ಖರೀದಿಗೆ ಮುಂದಾಗಬಹುದು. ಕೇಂದ್ರ ಸರ್ಕಾರದಿಂದ ನೇರವಾಗಿ ಖರೀದಿಸಿದರೆ ಪ್ರತಿ ಲಸಿಕೆಗೆ ₹ 150ರಂತೆ, 10 ಲಕ್ಷ ಡೋಸ್‌ಗಳಿಗೆ ₹ 15 ಕೋಟಿ ಖರ್ಚಾಗಬಹುದು. ಜನಪ್ರತಿನಿಧಿಗಳು, ಉದ್ಯಮಿಗಳು, ಎನ್‌ಜಿಒಗಳು ಈ ಯೋಜನೆಗೆ ಕೈಜೋಡಿಸಬಹುದು ಎಂದು ಸಲಹೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.