ADVERTISEMENT

ಕೋವಿಡ್ ಲಸಿಕೆ: ಬೂಸ್ಟರ್ ಡೋಸ್ ಪ್ರಾರಂಭಿಸಿ: ಶಾಸಕ ಯು.ಟಿ. ಖಾದರ್

ಶಾಸಕ ಯು.ಟಿ.ಖಾದರ್ ಆಗ್ರಹ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2021, 11:41 IST
Last Updated 29 ನವೆಂಬರ್ 2021, 11:41 IST
ಯು.ಟಿ.ಖಾದರ್
ಯು.ಟಿ.ಖಾದರ್   

ಮಂಗಳೂರು: ರೂಪಾಂತರಿ ಓಮಿಕ್ರಾನ್ ವೈರಸ್ ಹೊರದೇಶಗಳಲ್ಲಿ ಹರಡುತ್ತಿದ್ದು, ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ, ರಾಜ್ಯದಲ್ಲಿ ಲಸಿಕೆ ಅಭಿಯಾನವನ್ನು ಚುರುಕುಗೊಳಿಸಬೇಕು ಎಂದು ಶಾಸಕ ಯು.ಟಿ. ಖಾದರ್ ಆಗ್ರಹಿಸಿದರು.

ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೋವಿಡ್ ಮುಂಚೂಣಿ ಕಾರ್ಯಕರ್ತರು, ಆಸಕ್ತ ಸಾರ್ವಜನಿಕರಿಗೆ ಬೂಸ್ಟರ್‌ ಡೋಸ್ ನೀಡಲು ಸರ್ಕಾರ ಮುಂದಾಗಬೇಕು. ಮಕ್ಕಳಿಗೆ ಆದಷ್ಟು ಶೀಘ್ರ ಲಸಿಕೆ ನೀಡಬೇಕು. ಎರಡನೇ ಡೋಸ್ ಬಾಕಿ ಇದ್ದವರನ್ನು ಗುರುತಿಸಿ, ಲಸಿಕೆ ನೀಡಬೇಕು’ ಎಂದು ಒತ್ತಾಯಿಸಿದರು.

ವೈರಾಣು ಹರಡುವುದನ್ನು ನಿಯಂತ್ರಿಸಲಾಗದು. ಹೀಗಾಗಿ, ಸರ್ಕಾರ ಈಗಲೇ ಎಲ್ಲ ಸಿದ್ಧತೆ ಮಾಡಿಕೊಂಡು, ಜನರ ಜೀವಕ್ಕೆ ಅಪಾಯವಾಗುವುದನ್ನು ತಪ್ಪಿಸಬೇಕು. ಆರೋಗ್ಯ ಇಲಾಖೆಯಲ್ಲಿ ಹೆಚ್ಚು ಸಿಬ್ಬಂದಿ ಅಗತ್ಯ ಇರುವುದರಿಂದ, ಈಗಾಗಲೇ ನೇಮಕ ಮಾಡಿಕೊಂಡಿರುವ ನರ್ಸ್, ಪ್ರಯೋಗಾಲಯ ತಂತ್ರಜ್ಞರ ಗುತ್ತಿಗೆ ಅವಧಿಯನ್ನು ಮುಂದುವರಿಸಬೇಕು. ಆಶಾ ಕಾರ್ಯಕರ್ತೆಯರು ಮತ್ತು ಪ್ರಯೋಗಾಲಯ ತಂತ್ರಜ್ಞರಿಗೆ ಸರ್ಕಾರದ ವತಿಯಿಂದ ಟ್ಯಾಬ್ಲೆಟ್‌ಗಳನ್ನು ನೀಡಿದರೆ, ದಾಖಲೆ ಸಂಗ್ರಹಕ್ಕೆ ಅನುಕೂಲವಾಗುತ್ತದೆ ಎಂದು ಹೇಳಿದರು.

ADVERTISEMENT

ರಾಜ್ಯ ಸರ್ಕಾರ ಕರಾವಳಿ ಜಿಲ್ಲೆಗೆ ವಿಶೇಷ ಆದ್ಯತೆ ನೀಡುವ ಜತೆಗೆ, ಜಿಲ್ಲಾಡಳಿತವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಸಿಕೆ ಅಭಿಯಾನಕ್ಕೆ ಒತ್ತು ನೀಡಿ, ಶೇ 100ರ ಸಾಧನೆ ಮಾಡಬೇಕು. ಜಿಲ್ಲೆಯಲ್ಲಿ ಈವರೆಗೆ ಮೊದಲನೇ ಡೋಸ್ ಶೇ 90ರಷ್ಟು ಜನರಿಗೆ, ಎರಡನೇ ಡೋಸ್ ಶೇ 60ರಷ್ಟು ಜನರಿಗೆ ಮಾತ್ರ ನೀಡಲಾಗಿದೆ. ಎರಡನೇ ಡೋಸ್ ಪಡೆಯದವರನ್ನು ಪತ್ತೆ ಮಾಡಲು ಕ್ರಮವಹಿಸಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಹರೀಶ್‌ಕುಮಾರ್, ಪ್ರಮುಖರಾದ ಸದಾಶಿವ ಉಳ್ಳಾಲ, ಫಾರೂಕ್, ಸಲೀಂ, ನಜೀರ್ ಬಝಾಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.