ADVERTISEMENT

'ವಾದಿರಾಜ ವಾಲಗ ಮಂಡಳಿ'ಗೆ ಇಂದು ಮುಹೂರ್ತ

ಎಂ.ಎನ್.ಆರ್ ಪ್ರೊಡಕ್ಷನ್ ಸಂಸ್ಥೆಯ 3ನೇ ಸಿನಿಮಾ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2025, 6:06 IST
Last Updated 21 ನವೆಂಬರ್ 2025, 6:06 IST
ಎಂ. ಎನ್ ರಾಜೇಂದ್ರ ಕುಮಾರ್
ಎಂ. ಎನ್ ರಾಜೇಂದ್ರ ಕುಮಾರ್   

ಮಂಗಳೂರು: ಎಂ.ಎನ್.ಆರ್ ಪ್ರೊಡಕ್ಷನ್ ಸಂಸ್ಥೆಯು ನಿರ್ಮಿಸಲಿರುವ ಕನ್ನಡ ಸಿನಿಮಾ ‘ವಾದಿರಾಜ ವಾಲಗ ಮಂಡಳಿ’ಯ ಮುಹೂರ್ತ ಇದೇ 21ರಂದು ಬೆಳಿಗ್ಗೆ 9ಕ್ಕೆ ಉರ್ವ ಮಾರಿಯಮ್ಮ ದೇವಸ್ಥಾನದಲ್ಲಿ ನಡೆಯಲಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾಹಿತಿ ನೀಡಿದ ಎಂ.ಎನ್.ಆರ್ ಪ್ರೊಡಕ್ಷನ್ ಸಂಸ್ಥೆಯ ಎಂ.ಎನ್‌.ರಾಜೇಂದ್ರ ಕುಮಾರ್‌, ‘ಇದು ನಮ್ಮ ಸಂಸ್ಥೆಯ ಮೂರನೇ ಸಿನಿಮಾ. ಕಾಂತಾರ ಸಿನಿಮಾದ ‘ವರಾಹ ರೂಪಂ’ ಮತ್ತು ‘ಕಾಂತಾರ-1’ ಸಿನಿಮಾದ ‘ಗೊತ್ತಿಲ್ಲಾ ಶಿವನೇ ಭಕ್ತಿ ದಾರಿಯು’ ಗೀತೆಗಳನ್ನು ರಚಿಸಿರುವ ಶಶಿರಾಜ್ ರಾವ್ ಕಾವೂರು ಈ ಸಿನಿಮಾವನ್ನು ನಿರ್ದೇಶಿಸಲಿದ್ದಾರೆ. ಇದರ ಕಥೆ, ಚಿತ್ರಕಥೆ, ಸಂಭಾಷಣೆ ಕೂಡ ಅವರದೇ’ ಎಂದರು.  

‘ಉತ್ತಮ ಕಥಾ ಹಂದರವಿರುವ, ಸಂಪೂರ್ಣ ಹಾಸ್ಯ ಪ್ರಧಾನವಾದ ಈ ಸಿನಿಮಾ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಲಿದೆ. ನವೀನ್ ಡಿ. ಪಡೀಲ್, ಮೈಮ್ ರಾಮದಾಸ್, ಲಕ್ಷ್ಮಣ ಕುಮಾರ್ ಮಲ್ಲೂರು, ಪ್ರಕಾಶ ತುಮಿನಾಡು, ದೀಪಕ್ ರೈ ಪಾಣಾಜೆ, ಪುಷ್ಪರಾಜ್ ಬೊಳ್ಳೂರ್, ಶೋಭರಾಜ್ ಪಾವೂರು, ತನ್ವಿ ರಾವ್, ವೇನ್ಯಾ ರೈ, ಚೈತ್ರಾ ಶೆಟ್ಟಿ, ಕೀರ್ತನಾ ಮುಂತಾದವರು ಮುಖ್ಯ ಭೂಮಿಕೆಯಲ್ಲಿದ್ದಾರೆ’ ಎಂದರು.

ADVERTISEMENT

‘ನಮ್ಮ ಪ್ರೊಡಕ್ಷನ‌್ ವತಿಯಿಂದ ವಿನು ಬಳಂಜ ನಿರ್ದೇಶನದಲ್ಲಿ 2009ರಲ್ಲಿ ನಿರ್ಮಿಸಿದ್ದ ‘ಜೋಗುಳ’ ಮೆಗಾ ಧಾರಾವಾಹಿ 600 ಕಂತುಗಳಲ್ಲಿ ಜೀ–ಕನ್ನಡ ವಾಹಿನಿಯಲ್ಲಿ ಪ್ರಸಾರಗೊಂಡಿತ್ತು. ನಿರ್ದೇಶಕ ಎಂ.ಡಿ.ಶ್ರೀಧರ ನಿರ್ದೇಶನದಲ್ಲಿ ನಿರ್ಮಿಸಿದ್ದ ಪ್ರಜ್ವಲ್ ದೇವರಾಜ್ ಅಭಿನಯದ ‘ಗಲಾಟೆ’ ಸಿನಿಮಾಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ವಿಜಯಕುಮಾರ್ ಕೊಡಿಯಾಲ್‌ ಬೈಲ್ ನಿರ್ದೇಶನದ ‘ಡಾಕ್ಟ್ರಾ ಭಟ್ರಾ?’ ತುಳು ಸಿನಿಮಾ ಚಿತ್ರೀಕರಣ ಪ್ರಗತಿಯಲ್ಲಿದ್ದು ಮುಂದಿನ ವರ್ಷ ತೆರೆಕಾಣಲಿದೆ’ ಎಂದರು.

ಶಶಿರಾಜ್ ಕಾವೂರು, ‘ಈ ಸಿನಿಮಾದಲ್ಲಿ ಕಥೆಯೇ ನಾಯಕ. 8 ವರ್ಷ ಹಿಂದೆಯೇ ಕಥೆ ಸಿದ್ಧವಾಗಿತ್ತು. ಯಾವ ಕಲಾವಿದರನ್ನು ಬಳಸಿಕೊಳ್ಳಬೇಕು ಎಂದು ಆಗಲೇ ನಿರ್ಧರಿಸಿದ್ದೆವು. ಮಂಗಳೂರು ಕನ್ನಡ ಭಾಷೆ ಬಳಸಲಿದ್ದೇವೆ. ಎಸ್. ಚಂದ್ರಶೇಖರನ್ ಛಾಯಾಗ್ರಹಣ, ಮಣಿಕಾಂತ ಕದ್ರಿ ಅವರ ಸಂಗೀತವಿದೆ. ಕಾಸರಗೋಡು, ಮಂಗಳೂರು, ಉಡುಪಿ, ಕುಂದಾಪುರ ಸುತ್ತಮುತ್ತ ಸುಮಾರು 40 ದಿನ ಚಿತ್ರೀಕರಣ ನಡೆಯಲಿದೆ’ ಎಂದರು.

ಸುದ್ದಿಗೋಷ್ಠಿಯಲ್ಲಿ ಸಿನಿಮಾದ ಸಹ ನಿರ್ಮಾಪಕ ಜಯಪ್ರಕಾಶ ತುಂಬೆ, ಕಾರ್ಯಕಾರಿ ನಿರ್ಮಾಪಕ ಸಂತೋಷ್ ಶೆಟ್ಟಿ, ಕಾರ್ಯಕಾರಿ ನಿರ್ಮಾಪಕ ಸುನಿಲ್ ಬಜಗೋಳಿ, ಎಸ್‌ಸಿಡಿಸಿಸಿ ಬ್ಯಾಂಕಿನ ಸಿಇಒ ಗೋಪಾಲಕೃಷ್ಣ ಭಟ್‌, ಎಸ್‌.ಚಂದ್ರಶೇಖರ್‌, ನಟ ಲಕ್ಷ್ಮಣ ಕುಮಾರ್ ಮಲ್ಲೂರು ಮೊದಲಾದವರು ಭಾಗವಹಿಸಿದ್ದರು. 

ಶಶಿರಾಜ್ ಕಾವೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.