
ಬಂಟ್ವಾಳ: ಇಲ್ಲಿನ ಸಿದ್ಧಕಟ್ಟೆ ಸಮೀಪದ ಎಲಿಯನಡುಗೋಡು ಗ್ರಾಮದ ಕೊಡಂಗೆ ಎಂಬಲ್ಲಿ 2 ವರ್ಷಗಳ ಹಿಂದೆ ನಿರ್ಮಾಣಗೊಂಡ ಸರ್ವಋತು ವೀರ-ವಿಕ್ರಮ ಜೋಡುಕರೆಯಲ್ಲಿ ನ.22ರಂದು 3ನೇ ವರ್ಷದ ಹೊನಲು ಬೆಳಕಿನ ‘ವೀರ-ವಿಕ್ರಮ ಜೋಡುಕರೆ ಬಯಲು ಕಂಬಳ’ ನಡೆಯಲಿದ್ದು, ಸಿದ್ಧತೆ ಭರದಿಂದ ಸಾಗಿದೆ.
ಶಾಸಕ ರಾಜೇಶ ನಾಯ್ಕ್ ಉಳಿಪಾಡಿ, ಕಾಂಗ್ರೆಸ್ ಮುಖಂಡ ಬಿ.ರಮಾನಾಥ ರೈ ಗೌರವಾಧ್ಯಕ್ಷತೆಯಲ್ಲಿ ನಡೆಯುವ ಈ ಕಂಬಳ ಕೂಟಕ್ಕೆ ಅಂದು ಬೆಳಿಗ್ಗೆ 8 ಗಂಟೆಗೆ ಪೂಂಜ ಕ್ಷೇತ್ರದ ಅಸ್ರಣ್ಣ ಕೃಷ್ಣ ಪ್ರಸಾದ್ ಆಚಾರ್ಯ ಚಾಲನೆ ನೀಡುವರು. ಪ್ರಧಾನ ಅರ್ಚಕ ಪ್ರಕಾಶ ಆಚಾರ್ಯ ಕಂಬಳ ಧ್ವಜಾರೋಹಣ ನೆರವೇರಿಸುವರು. ಮೂಡುಬಿದಿರೆ ಎಕ್ಸಲೆಂಟ್ ಶಿಕ್ಷಣ ಸಂಸ್ಥೆ ಮುಖ್ಯಸ್ಥ ಯುವರಾಜ್ ಜೈನ್ ಕಂಬಳ ಕರೆ ಉದ್ಘಾಟಿಸಲಿದ್ದು, ಕುಡುಂಬೂರುಗುತ್ತು ಕನಿಲ ಕ್ಷೇತ್ರದ ಗುತ್ತಿನಾರ್ ಜಯರಾಮ ಶೆಟ್ಟಿ, ರೋಟರಿ ಮಾಜಿ ಜಿಲ್ಲಾ ಗವರ್ನರ್ ಎನ್.ಪ್ರಕಾಶ್ ಕಾರಂತ್, ಮಾಜಿ ಸಹಾಯಕ ಗವರ್ನರ್ ಇಲ್ಯಾಸ್ ಸ್ಯಾಂಕ್ಟಿಸ್ ಭಾಗವಹಿಸುವರು.
ಸಂಜೆ 7 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮವನ್ನು ಬಿ.ರಮಾನಾಥ ರೈ ಉದ್ಘಾಟಿಸಲಿದ್ದು, ಶಾಸಕ ರಾಜೇಶ ನಾಯ್ಕ್ ಉಳಿಪಾಡಿ ಅಧ್ಯಕ್ಷತೆ ವಹಿಸುವರು. ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಕೇಂದ್ರ ರೈಲ್ವೆ ಸಚಿವ ವಿ.ಸೋಮಣ್ಣ, ಸಂಸದ ಕ್ಯಾ.ಬ್ರಿಜೇಶ್ ಚೌಟ, ಪ್ರಮುಖರಾದ ಕೆ.ಪ್ರಭಾಕರ ಭಟ್, ಡಾ.ಎಂ.ಮೋಹನ ಆಳ್ವ, ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್, ಬಿಜೆಪಿ ಮುಖಂಡ ನಳಿನ್ ಕುಮಾರ್ ಕಟೀಲ್, ಶಾಸಕ ಹರೀಶ ಪೂಂಜ, ರಾಜ್ಯ ಕಂಬಳ ಎಸೋಸಿಯೇಶನ್ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಬೆಳಪು, ಉಡುಪಿ ಅದಾನಿ ಸಂಸ್ಥೆ ಅಧ್ಯಕ್ಷ ಕಿಶೋರ್ ಆಳ್ವ, ಶಾಸಕರು ಮತ್ತು ಉದ್ಯಮಿಗಳು ಹಾಗೂ ಭಾಗವಹಿಸುವರು.
175ಕ್ಕೂ ಮಿಕ್ಕಿ ಜೋಡಿ ಕೋಣಗಳು ಭಾಗವಹಿಸುವ ನಿರೀಕ್ಷೆಯಿದ್ದು, ಈ ಬಾರಿ ಸಮಯಪಾಲನೆ ಸಂಬಂಧ ಸಬ್ ಜೂನಿಯರ್ ಕೋಣಗಳಿಗೆ ಅವಕಾಶ ನೀಡಿಲ್ಲ ಎಂದು ಕಂಬಳ ಸಮಿತಿ ಅಧ್ಯಕ್ಷ ಸಂದೀಪ್ ಶೆಟ್ಟಿ ಪೊಡುಂಬ ‘ಪ್ರಜಾವಾಣಿ’ಗೆ ತಿಳಿಸಿದರು.
ಎರಡೇ ವರ್ಷದಲ್ಲಿ ಋತುವಿನ ಕಂಬಳ ಸೇರಿದಂತೆ ರೋಟರಿ ಕಂಬಳ ಮತ್ತು ಸ್ನೇಹಕೂಟಗಳ ಮೂಲಕ 6 ಕಂಬಳ ನಡೆಸಿದ ಹೆಗ್ಗಳಿಕೆಯನ್ನು ಸಮಿತಿ ಹೊಂದಿದೆ. ಮೂಡುಬಿದಿರೆ ಮತ್ತು ಕಾರ್ಕಳ ಮೀಯಾರು ಕರೆ ಮಾದರಿಯಲ್ಲಿ ವರ್ಷವಿಡೀ ಕುದಿ ಕಂಬಳ ನಡೆಸಲು ಅವಕಾಶ ಇಲ್ಲಿದೆ. ವಾಹನ ನಿಲುಗಡೆಗೆ 4 ಎಕರೆ ಜಮೀನು ಮತ್ತು ಕೋಣಗಳ ವಿಶ್ರಾಂತಿಗೆ 3.50 ಎಕರೆ ಜಮೀನು ಮೀಸಲಿಡಲಾಗಿದೆ. ಸಿದ್ಧಕಟ್ಟೆ ಪೇಟೆಯಿಂದ ಹೊರಗಿದ್ದು, ಪ್ರಕೃತಿ ಸೌಂದರ್ಯಗಳ ನಡುವೆ ಈ ಕಂಬಳ ನಡೆಯುತ್ತಿದೆ. ಸಂಗೀತ ನಿರ್ದೇಶಕ ಗುರುಕಿರಣ್, ಸಿನಿಮಾ ನಟ ರಾಜ್ ಬಿ.ಶೆಟ್ಟಿ, ನಿರ್ಮಾಪಕ ರವಿ ರೈ ಕಳಸ, ಕಲಾವಿದರಾದ ಭೋಜರಾಜ ವಾಮಂಜೂರು, ಜೆ.ಪಿ.ತೂಮಿನಾಡು, ಉಮೇಶ್ ಮಿಜಾರು, ಪುಷ್ಪರಾಜ್ ಬೋಳಾರ್ ಭಾಗವಹಿಸುವ ನಿರೀಕ್ಷೆ ಇದೆ ಎಂದು ಸಮಿತಿ ಕಾರ್ಯದರ್ಶಿ ಶಶಿಧರ ಶೆಟ್ಟಿ ಕಲ್ಲಾಪು ಮಾಹಿತಿ ನೀಡಿದ್ದಾರೆ.
ಇಲ್ಲಿನ ಕಂಬಳ ಸಮಿತಿ ಕಂಬಳ ಕೂಟಕ್ಕೆ ಸೀಮಿತವಾಗದೆ ಸ್ಥಳೀಯ ಶಾಲೆ ಮತ್ತು ವಿವಿಧ ಸಂಘ ಸಂಸ್ಥೆಗಳ ರಂಗಮಂದಿರ ರಚನೆ, ಆಂಬುಲೆನ್ಸ್ ಸೇವೆ, ವೈದ್ಯಕೀಯ ಚಿಕಿತ್ಸೆಗೆ ಆರ್ಥಿಕ ನೆರವು ನೀಡುವ ಮೂಲಕ ₹ 3 ಲಕ್ಷಕ್ಕೂ ಮಿಕ್ಕಿ ವೆಚ್ಚದಲ್ಲಿ ಸಮಾಜಮುಖಿ ಚಟುವಟಿಕೆಗಳಿಗೆ ಸ್ಪಂದಿಸಿದೆ ಎಂದು ಕಂಬಳ ಸಮಿತಿ ಗೌರವ ಸಲಹೆಗಾರ ಕಿರಣ್ ಕುಮಾರ್ ಮಂಜಿಲ ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.