ADVERTISEMENT

ರೋಟರಿ ನೇತೃತ್ವದ ವೀರ ವಿಕ್ರಮ ಕಂಬಳ 12ರಂದು

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2025, 7:19 IST
Last Updated 8 ಅಕ್ಟೋಬರ್ 2025, 7:19 IST
ಸುದ್ದಿಗೋಷ್ಠಿಯಲ್ಲಿ ಎಲಿಯಾಸ್‌ ಸಾಂಕ್ಟಿಸ್ ಮಾತನಾಡಿದರು. ಭಾಸ್ಕರ್ ರೈ ಕಟ್ಟ, ಅವಿಲ್  ಮಿನೇಜಸ್‌, ರಾಜಗೋಪಾಲ ರೈ ಮೊದಲಾದವರು ಭಾಗವಹಿಸಿದ್ದರು
ಸುದ್ದಿಗೋಷ್ಠಿಯಲ್ಲಿ ಎಲಿಯಾಸ್‌ ಸಾಂಕ್ಟಿಸ್ ಮಾತನಾಡಿದರು. ಭಾಸ್ಕರ್ ರೈ ಕಟ್ಟ, ಅವಿಲ್  ಮಿನೇಜಸ್‌, ರಾಜಗೋಪಾಲ ರೈ ಮೊದಲಾದವರು ಭಾಗವಹಿಸಿದ್ದರು   

ಮಂಗಳೂರು: ಕಂಬಳ ಕ್ರೀಡೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಜಿಲ್ಲೆಯ ಐದು ರೋಟರಿ ಕ್ಲಬ್‌ಗಳು ಸೇರಿಕೊಂಡು ಬಂಟ್ವಾಳ ತಾಲ್ಲೂಕಿನ ಸಿದ್ದಕಟ್ಟೆ ಕೊಡಂಗೆಯ ವೀರ ವಿಕ್ರಮ ಜೋಡುಕರೆ ಕಂಬಳ ಸಮಿತಿ ಸಹಕಾರದೊಂದಿಗೆ ಇದೇ 12ರಂದು ಕೊಡಂಗೆಯಲ್ಲಿ ಕಂಬಳವನ್ನು ಏರ್ಪಡಿಸಿವೆ. 

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾಹಿತಿ ನೀಡಿದ ಮೊಡಂಕಾಪು ರೋಟರಿ ಕ್ಲಬ್‌ನ ಸ್ಥಾಪಕಾಧ್ಯಕ್ಷ ಎಲಿಯಾಸ್ ಸಾಂಕ್ಟಿಸ್‌, ‘ಲೊರೆಟೊ ಹಿಲ್ಸ್, ಬಂಟ್ವಾಳ, ಸಿದ್ದಕಟ್ಟೆ–ಫಲ್ಗುಣಿ, ಮೊಡಂಕಾಪು ಮತ್ತು ಮಂಗಳೂರು ಸೆಂಟ್ರಲ್ ರೋಟರಿ ಕ್ಲಬ್‌ಗಳು ಸೇರಿಕೊಂಡು ಏರ್ಪಡಿಸಿರುವ ಈ ಕಂಬಳದಲ್ಲಿ ಜೂನಿಯರ್ ಮತ್ತು ಸಬ್ ಜೂನಿಯ‌ರ್‌ ಕೋಣಗಳಿಗೆ ಹಗ್ಗ ಕಿರಿಯ, ನೇಗಿಲು ಕಿರಿಯ ಮತ್ತು ನೇಗಿಲು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಸುಮಾರು 170 ಜೊತೆ ಕೋಣಗಳು ಭಾಗವಹಿಸುವ ನಿರೀಕ್ಷೆಯಿದೆ’ ಎಂದರು. 

‘ಕಂಬಳದ ಕರೆಯನ್ನು ಇದೇ 12ರಂದು ಬೆಳಿಗ್ಗೆ 8ಕ್ಕೆ ಪದ್ಮರಾಜ್ ಬಲ್ಲಾಳ ಮಾವಂತೂರು ಉದ್ಘಾಟಿಸುವರು. ಶಾಸಕ ರಾಜೇಶ್ ನಾಯ್ಕ್ ಉಳೆಪಾಡಿ ಅಧ್ಯಕ್ಷತೆ  ವಹಿಸಲಿರುವರು. ರೋಟರಿ ಜಿಲ್ಲೆ 3181ರ ಗವರ್ನರ್ ರಾಮಕೃಷ್ಣ ಪಿ.ಕೆ ಕಾರ್ಯಕ್ರಮ ಉದ್ಘಾಟಿಸುವರು. ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಬೆಳಪು ಅಧ್ಯಕ್ಷತೆಯಲ್ಲಿ ರಾತ್ರಿ 8ಕ್ಕೆ  ಸಮಾರೋಪ ನಡೆಯಲಿದೆ. ಕಾಂಗ್ರೆಸ್ ಮುಖಂಡ ಬಿ.ರಮಾನಾಥ ರೈ ಬಹುಮಾನ ವಿತರಿಸುವರು. ಬಹುಮಾನ ವಿಜೇತ ಕೋಣಗಳ ಮಾಲೀಕರಿಗೆ ಅರ್ಧ ಪವನ್ (4 ಗ್ರಾಂ) ಹಾಗೂ ಕಾಲು ಪವನ್ (2 ಗ್ರಾಂ) ಚಿನ್ನವನ್ನು ನೀಡಲಾಗುತ್ತದೆ’ ಎಂದರು.

ADVERTISEMENT

‘ಭವಿಷ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ ಕಂಬಳ ಆಯೋಜಿಸುವ ಆಶಯ ನಮ್ಮದು. ಆಗ ಜಿಲ್ಲಾ ಕಂಬಳ ಸಮಿತಿಯ ವೇಳಾಪಟ್ಟಿಯಲ್ಲಿ ನಮ್ಮ ಕಂಬಳಕ್ಕೂ ಸ್ಥಾನ ಸಿಗಲಿದೆ. ಈ ಸಲ ಕಂಬಳಕ್ಕೆ ಬರುವವರಿಗೆ ಊಟೋಪಚಾರದ ವ್ಯವಸ್ಥೆ ಮಾಡಲಿದ್ದೇವೆ’ ಎಂದು ಅವಿಲ್‌ ಮಿನೇಜಸ್ ತಿಳಿಸಿದರು.

‘ರೋಟರಿ ಕ್ಲಬ್ ವತಿಯಿಂದ ಕಂಬಳ ಹಮ್ಮಿಕೊಳ್ಳುತ್ತಿರುವುದು ಇದೇ ಮೊದಲು. 220 ದೇಶಗಳಲ್ಲಿ ವ್ಯಾಪಿಸಿರುವ ಅಂತರರಾಷ್ಟ್ರೀಯ ರೋಟರಿ ಸಂಸ್ಥೆ 35ಸಾವಿರಕ್ಕೂ ಹೆಚ್ಚು ಕ್ಲಬ್‌ಗಳನ್ನು ಹಾಗೂ ಸುಮಾರು 12ಲಕ್ಷ ಸದಸ್ಯರನ್ನು ಹೊಂದಿದೆ. ರೋಟರಿ ವತಿಯಿಂದ ಹಮ್ಮಿಕೊಳ್ಳುವ ಕಂಬಳವು, ಈ ಕ್ರೀಡೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ದೊರಕಿಸುವುದಕ್ಕೆ ನೆರವಾಗಲಿದೆ’ ಎಂದು ರಾಜಗೋಪಾಲ ರೈ ತಿಳಿಸಿದರು. 

ಸುದ್ದಿಗೋಷ್ಠಿಯಲ್ಲಿ ವಿಜಯ ಫರ್ನಾಂಡಿಸ್, ಬಸ್ತಿ ಮಾಧವ ಶೆಣೈ, ದುರ್ಗಾದಾಸ್ ಶೆಟ್ಟಿ, ಪ್ರೀಮಾ ವೈಲೆಟ್ ಫರ್ನಾಂಡಿಸ್,  ಭಾಸ್ಕರ್ ರೈ ಕಟ್ಟ, ಸುರೇಶ್ ಶೆಟ್ಟಿ, ಮೊಹಮ್ಮದ್ ಯಾಸಿರ್‌, ನಾರಾಯಣ ಹೆಗ್ಡೆ, ರಾಜೇಶ್‌ ಶೆಟ್ಟಿ, ಪದ್ಮರಾಜ ಬಲ್ಲಾಳ್‌ ಮೊದಲಾದವರು ಭಾಗವಹಿಸಿದ್ದರು.   

Highlights - ರೋಟರಿ ಕ್ಲಬ್‌ ನೇತೃತ್ವದಲ್ಲಿ ಹಮ್ಮಿಕೊಂಡ ಮೊದಲ ಕಂಬಳ ಹಗ್ಗ ಕಿರಿಯ, ನೇಗಿಲು ಕಿರಿಯ ಮತ್ತು ನೇಗಿಲು ವಿಭಾಗಗಳಲ್ಲಿ ಸ್ಪರ್ಧೆ ಗೆದ್ದ ಕೋಣದ ಮಾಲೀಕರಿಗೆ ಅರ್ಧ ಪವನ್ ಚಿನ್ನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.