ADVERTISEMENT

ಮಂಗಳೂರು| ಪ್ರಾದೇಶಿಕ ಆಸ್ಪತ್ರೆಯಾಗಲಿದೆ ವೆನ್ಲಾಕ್‌: ದಿನೇಶ್ ಗುಂಡೂರಾವ್

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2025, 5:01 IST
Last Updated 22 ಸೆಪ್ಟೆಂಬರ್ 2025, 5:01 IST
ಮಾಹೆ ವಿವಿ ಸಹಕುಲಾಧಿಪತಿ ಡಾ.ಎಚ್ ಎಸ್ ಬಲ್ಲಾಳ್, ಮುಖಂಡರಾದ ವೀರಪ್ಪ ಮೊಯಿಲಿ ಮತ್ತು ಜನಾರ್ದನ ಪೂಜಾರಿ ಅವರನ್ನು ಗೌರವಿಸಲಾಯಿತು  ಪ್ರಜಾವಾಣಿ ಚಿತ್ರ 
ಮಾಹೆ ವಿವಿ ಸಹಕುಲಾಧಿಪತಿ ಡಾ.ಎಚ್ ಎಸ್ ಬಲ್ಲಾಳ್, ಮುಖಂಡರಾದ ವೀರಪ್ಪ ಮೊಯಿಲಿ ಮತ್ತು ಜನಾರ್ದನ ಪೂಜಾರಿ ಅವರನ್ನು ಗೌರವಿಸಲಾಯಿತು  ಪ್ರಜಾವಾಣಿ ಚಿತ್ರ    

ಮಂಗಳೂರು: ಹಳೆಯ ಆಸ್ಪತ್ರೆಯಾಗಿದ್ದರೂ ಜನಸೇವೆಯಲ್ಲಿ ಹೊಸತನವನ್ನು ತೋರುತ್ತ  ಹಲವು ಜಿಲ್ಲೆಗಳ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಮತ್ತು ಜನರ ವಿಶ್ವಾಸ ಗಳಿಸಿರುವ ವೆನ್ಲಾಕ್ ಆಸ್ಪತ್ರೆಯನ್ನು ಪ್ರಾದೇಶಿಕ ಆಸ್ಪತ್ರೆಯಾಗಿ ಘೋಷಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ನಗರದ ಫಾದರ್ ಮುಲ್ಲರ್ ಸಭಾಂಗಣದಲ್ಲಿ ವೆನ್ಲಾಕ್, ಲೇಡಿಗೋಷನ್ ಮತ್ತು ಕೆಎಂಎಸಿ ಆಸ್ಪತ್ರೆಗಳ ಹಳೆ ವಿದ್ಯಾರ್ಥಿ ಸಂಘದ 175ನೇ ವರ್ಷದ ಸಂಭ್ರಮಾಚರಣೆಗೆ ಭಾನುವಾರ ಚಾಲನೆ ನೀಡಿದ ಅವರು ಪ್ರಾದೇಶಿಕ ಆಸ್ಪತ್ರೆಯಾಗಿ ಘೋಷಿಸಬೇಕು ಎಂಬ ಒತ್ತಾಯ ಕೇಳಿಬಂದಿರುವ ಕಾರಣ ಅದಕ್ಕೆ ಸಂಬಂಧಿಸಿದ ಪ್ರಸ್ತಾಪವನ್ನು ಸರ್ಕಾರಕ್ಕೆ ಸಿದ್ಧಪಡಿಸಲಾಗಿದೆ. ಅದನ್ನು ಸದ್ಯದಲ್ಲೇ ಸರ್ಕಾರಕ್ಕೆ ಕಳುಹಿಸಲಾಗುವುದು ಎಂದರು.

ವೆನ್ಲಾಕ್ ಆಸ್ಪತ್ರೆಯ ಉನ್ನತೀಕರಣಕ್ಕೆ ನಿರಂತರ ಪ್ರಯತ್ನ ನಡೆಯುತ್ತಿದ್ದು ಹೊರರೋಗಿಗಳ ವಿಭಾಗದ ಹೊಸ ಬ್ಲಾಕ್ ನಿರ್ಮಾಣಕ್ಕೆ ಟೆಂಟರ್ ಪ್ರಕ್ರಿಯೆ ಆರಂಭವಾಗಿದೆ. ಒಂದೂವರೆ ತಿಂಗಳ ಒಳಗೆ ಕಾಮಗಾರಿ ಆರಂಭವಾಗುವ ಸಾಧ್ಯತೆ ಇದೆ. ಖಾಸಗಿ–ಸರ್ಕಾರಿ ಸಹಭಾಗಿತ್ವದ ಒಪ್ಪಂದದಡಿ ಕೆಎಂಸಿ ಆಸ್ಪತ್ರೆಯಿಂದ ವೆನ್ಲಾಕ್‌ ಮತ್ತು ಲೇಡಿ ಗೋಶನ್ ಆಸ್ಪತ್ರೆಗೆ ಉತ್ತಮ ಬೆಂಬಲ ಸಿಗುತ್ತಿದ್ದು ಕ್ಯಾತ್ ಲ್ಯಾಬ್‌ಗೆ ₹ 5 ಕೋಟಿ ಲಭಿಸಿದೆ. ಆಸ್ಪತ್ರೆಯ ಅಭಿವೃದ್ಧಿಗೆ ₹ 35 ಕೋಟಿ ಕೊಡಲು ಒಪ್ಪಿಗೆ ಲಭಿಸಿದೆ ಎಂದು ಅವರು ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಸರ್ಜನ್‌ ಡಾ.ಶಿವಪ್ರಕಾಶ್ ಡಿ.ಎಸ್, ಮಿಲಿಟರಿ ಆಸ್ಪತ್ರೆ ಮತ್ತು ಟಿಬಿ ಆಸ್ಪತ್ರೆಯಾಗಿದ್ದ ವೆನ್ಲಾಕ್ ಆರಂಭ ಕಾಲದಲ್ಲಿ 32 ಹಾಸಿಗೆಗಳನ್ನು ಹೊಂದಿತ್ತು. ಈಗ ಬಹಳಷ್ಟು ಅಭಿವೃದ್ಧಿ ಸಾಧಿಸಿದೆ. ₹ 70 ಕೋಟಿ ವ್ಯಯಿಸಿ ಸುಸಜ್ಜಿತ ಒಪಿಡಿ ಬ್ಲಾಕ್ ಆರಂಭಿಸುವ ಯೋಜನೆ ಇದೆ ಎಂದರು.  

175ನೇ ವರ್ಷಾಚಣೆ ವರ್ಷಪೂರ್ತಿ ನಡೆಯಲಿದ್ದು 2026ರ ಮಾರ್ಚ್‌ನಲ್ಲಿ ಕೊನೆಗೊಳ್ಳಲಿದೆ. ವೆನ್ಲಾಕ್ ಮತ್ತು ಲೇಡಿಗೋಶನ್ ದೇಶದ ಮೂರನೇ ಸರ್ಕಾರಿ ಆಸ್ಪತ್ರೆಗಳಾಗಿದ್ದು ಇವುಗಳ ಅಭಿವೃದ್ಧಿಗೆ ವಿಸ್ತೃತ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಾ.ಶಾಂತಾರಾಮ ಶೆಟ್ಟಿ ತಿಳಿಸಿದರು. 

ವಿಧಾನಸಭಾಧ್ಯಕ್ಷ ಯು.ಟಿ‌ ಖಾದರ್, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕರಾದ ಭಾಗೀರಥಿ ಮುರುಳ್ಯ, ವೇದವ್ಯಾಸ ಕಾಮತ್, ಐವನ್ ಡಿಸೋಜ, ಮುಡಾ ಅಧ್ಯಕ್ಷ ಸದಾಶಿವ‌ ಉಳ್ಳಾಲ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ, ಬ್ಯಾರಿ ಅಕಾಡೆಮಿ ಅಧ್ಯಕ್ಷ ಉಮರ್ ಯು.ಎಚ್‌, ಕರ್ನಾಟಕ ಗೇರು ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಮುಖಂಡರಾದ ವೀರಪ್ಪ ಮೊಯಿಲಿ, ಜನಾರ್ದನ ಪೂಜಾರಿ, ಜೆ.ಆರ್ ಲೋಬೊ, ಹರೀಶ್ ಕುಮಾರ್, ಮಾಹೆ ವಿಶ್ವವಿದ್ಯಾಲಯದ ಸಹಕುಲಾಧಿಪತಿ ಡಾ.ಎಚ್ ಎಸ್ ಬಲ್ಲಾಳ್, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್‌.ಆರ್‌ ತಿಮ್ಮಯ್ಯ ಪಾಲ್ಗೊಂಡಿದ್ದರು. 

ಕ್ಯಾಥ್‌ಲ್ಯಾಬ್‌ ಉದ್ಘಾಟನೆ

ವೆನ್‌ಲಾಕ್‌ನ ನೆಲಮಹಡಿಯಲ್ಲಿ ಸುಸಜ್ಜಿತ ಕ್ಯಾಥ್‌ಲ್ಯಾಬ್‌ಗೆ ದಿನೇಶ್ ಗುಂಡೂರಾವ್ ಭಾನುವಾರ ಚಾಲನೆ ನೀಡಿದರು. ನಾಲ್ಕನೇ ಮಹಡಿಯಲ್ಲಿ 24 ಆಸನಗಳ ಡಯಾಲಿಸಿಸ್ ಕೇಂದ್ರಕ್ಕೂ ಚಾಲನೆ ನೀಡಿದರು. 

ಕ್ಯಾಥ್‌ಲ್ಯಾಬ್ ಆರಂಭವಾಗುವ ಮೂಲಕ ಆರ್ಥಿಕವಾಗಿ ಹಿಂದುಳಿದವರು ಹೃದ್ರೋಗಕ್ಕೆ ಸಂಬಂಧಿಸಿದ ಆ್ಯಂಜಿಯೋಪ್ಲಾಸ್ಟಿ ಮತ್ತು ಆ್ಯಂಜಿಯೋಗ್ರಾಂನಂಥ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವುದು ಸುಲಭವಾಗಿದೆ. ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಉಚಿತ ಚಿಕಿತ್ಸೆ ಸಿಗಲಿದೆ. ಡಯಾಲಿಸಿಸ್ ಕೇಂದ್ರದ ಒಂದು ಬೆಡ್‌ನಲ್ಲಿ ದಿನದಲ್ಲಿ ನಾಲ್ಕು ಮಂದಿಗೆ ಸೌಲಭ್ಯ ಸಿಗಲಿದೆ ಎಂದು ಸಚಿವರು ತಿಳಿಸಿದರು. 

ವೆನ್‌ಲಾಕ್ ನರ್ಸಿಂಗ್ ವಿದ್ಯಾರ್ಥಿಗಳಿಗೆ 4 ವರ್ಷಗಳಿಂದ ಶಿಷ್ಯವೇತನ ಸಿಗುತ್ತಿಲ್ಲ ಎಂಬ ವಿಷಯ ಗಮನಕ್ಕೆ ಬಂದಿದೆ. ಈ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿವರ ಜೊತೆ ಸೋಮವಾರ ಮಾತನಾಡುವೆ.
ದಿನೇಶ್ ಗುಂಡೂರಾವ್‌, ಆರೋಗ್ಯ ಸಚಿವ
ಆಸ್ಪತ್ರೆಯಲ್ಲಿ ಕರುಣೆಯ ತೊಟ್ಟಿಲು
ವೆನ್ಲಾಕ್ ಆಸ್ಪತ್ರೆಗೆ ಚಿಕಿತ್ಸೆಗೆ ದೂರದ ಊರುಗಳಿಂದ ಬರುವವರರಿಗೆ ಬಟ್ಟೆಗಳನ್ನು ಕೊಡುವುದಕ್ಕಾಗಿ ಎಂ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್ ಸ್ಥಾಪಿಸಿರುವ ಕರುಣೆಯ ತೊಟ್ಟಿಲು ಕ್ಲೋತ್ ಬ್ಯಾಂಕ್‌ಗೆ ಭಾನುವಾರ ಚಾಲನೆ ನೀಡಲಾಯಿತು. ಜನರು ಹೊಸ ಅಥವಾ ಬಳಸಿ ಶುಚಿಗೊಳಿಸಿದ ಬಟ್ಟೆಗಳನ್ನು ಕ್ಲೋತ್‌ ಬ್ಯಾಂಕ್‌ನಲ್ಲಿ ಇಡಬಹುದು. ಇದನ್ನು ಅಗತ್ಯವಿರುವ ರೋಗಿಗಳು ಅಥವಾ ಅವರ ಜೊತೆ ಬಂದವರು ಕೊಂಡೊಯ್ಯಲಿದ್ದಾರೆ ಎಂದು ಟ್ರಸ್ಟ್ ಅಧ್ಯಕ್ಷ ಝಕರಿಯಾ ಜೋಕಟ್ಟೆ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.