
ಉಜಿರೆ: ವೇಣೂರು ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿ ಆಶ್ರಯದಲ್ಲಿ ಮಾರ್ಚ್ 3ರಂದು ಸಂಜೆ 7ಗಂಟೆಯಿದ ಮೂಡುಬಿದಿರೆ ಜೈನಮಠದ ಚಾರುಕೀರ್ತಿ ಭಟ್ಟಾರಕರ ಉಪಸ್ಥಿತಿಯಲ್ಲಿ ಭಗವಾನ್ ಬಾಹುಬಲಿಸ್ವಾಮಿ ಸನ್ನಿಧಿಯಲ್ಲಿ ರಥಯಾತ್ರಾ ಮಹೋತ್ಸವ ನಡೆಯಲಿದೆ ಎಂದು ತೀರ್ಥಕ್ಷೇತ್ರ ಸಮಿತಿ ಕಾರ್ಯದರ್ಶಿ ಪ್ರವೀಣಕುಮಾರ್ ಇಂದ್ರ ತಿಳಿಸಿದ್ದಾರೆ.
ಪೂರ್ವಭಾವಿಯಾಗಿ ಅಂದು ಬೆಳಿಗ್ಗೆ 9ರಿಂದ ಬಾಹುಬಲಿ ಬೆಟ್ಟದ ಅಕ್ಕಂಗಳ ಮತ್ತು ಬಿನ್ನಾಣಿ ಬಸದಿಯಲ್ಲಿ ವಿಮಾನಶುದ್ಧಿ ನಡೆಯಲಿದೆ. 11ರಿಂದ ರಥಶುದ್ಧಿ ಬಳಿಕ ರಥಾರೋಹಣ ನಡೆಯಲಿದೆ. ಸಂಜೆ 7ಕ್ಕೆ ಸಮವಸರಣ ಪೂಜೆ ಬಳಿಕ ಮಂಗಲ ಪ್ರವಚನ ನೀಡುವರು. ಅಳದಂಗಡಿ ಅರಮನೆಯ ಡಾ.ಪದ್ಮಪ್ರಸಾದ ಅಜಿಲ ಅಧ್ಯಕ್ಷತೆ ವಹಿಸುವರು.
ಗುರುವಾಯನಕೆರೆ ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಮಂತ್‌ಕುಮಾರ್ ಜೈನ್, ಬೆಂಗಳೂರಿನ ಉದ್ಯಮಿ ಕಿರಣ್‌ರಾಜ್ ಜೈನ್ ಭಾಗವಹಿಸುವರು. ಸಮವಸರಣ ಪೂಜೆಯ ಬಳಿಕ ರಥಯಾತ್ರಾ ಮಹೋತ್ಸವ ನಡೆಯಲಿದೆ.
‘ಸಮಾಜಸೇವೆ, ನೈತಿಕ ಮೌಲ್ಯ ಅಗತ್ಯ’
ಉಜಿರೆ: ಧನಾತ್ಮಕ ಚಿಂತನೆಯೊಂದಿಗೆ ಸಮಾಜಸೇವೆ ಮತ್ತು ನೈತಿಕಮೌಲ್ಯಗಳ ಮೂಲಕ ವಿದ್ಯಾರ್ಥಿಗಳು ರಾಷ್ಟ್ರನಿರ್ಮಾಣ ಕಾರ್ಯದಲ್ಲಿ ಶಕ್ತಿ, ಸಾಮರ್ಥ್ಯ, ಪ್ರತಿಭೆ ಹಾಗೂ ಕೌಶಲವನ್ನು ಬಳಸಬೇಕು ಎಂದು ಉಜಿರೆ ಪಿಡಿಒ ಪ್ರಕಾಶ್ ಶೆಟ್ಟಿ ಹೇಳಿದರು.
ಉಜಿರೆ ಎಸ್‌ಡಿಎಂ ಸ್ವಾಯತ್ತ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಮತ್ತು ಸಾಮಾಜಿಕ ಕಾರ್ಯ ಸಂಶೋಧನಾ ವಿಭಾಗದ ಆಶ್ರಯದಲ್ಲಿ ಆಯೋಜಿಸಿರುವ ‘ಡಿಜಿಟಲೀಕರಣ ಮತ್ತು ಸುಸ್ಥಿರತೆ’ ಕುರಿತ ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿದ್ದ ನಿಟ್ಟೆ ಸ್ವಾಯತ್ತ ವಿ.ವಿ.ಯ ಭಾರತೀಯ ಜ್ಞಾನವ್ಯವಸ್ಥೆ ಕೇಂದ್ರದ ನಿರ್ದೇಶಕ ಪ್ರೊ.ಸುಧೀರ್‌ರಾಜ್ ಕೆ. ಮಾತನಾಡಿ, ನಮ್ಮ ಪರಿಸರ, ಸಂಸ್ಕೃತಿ, ಸಂಪ್ರದಾಯ, ಆರ್ಥಿಕ ಸಾಮಾಜಿಕ ಹಾಗೂ ಕೌಟುಂಬಿಕ ವ್ಯವಸ್ಥೆಯ ಸಂರಕ್ಷಣೆಗೆ ಸುಸ್ಥಿರ ಅಭಿವೃದ್ಧಿ ಅನಿವಾರ್ಯವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ ಎಸ್‌ಡಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ.ಪಿ.ವಿಶ್ವನಾಥ, ವಿದ್ಯಾರ್ಥಿಗಳು ಆದರ್ಶ, ಸುಸ್ಥಿರ ರಾಷ್ಟ್ರನಿರ್ಮಾಣದ ರೂವಾರಿಗಳಾಗಬೇಕು ಎಂದು ಸಲಹೆ ನೀಡಿದರು.
ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಮತ್ತು ಸಾಮಾಜಿಕ ಕಾರ್ಯ ಸಂಶೋಧನಾ ವಿಭಾಗವು ರಜತಮಹೋತ್ಸವ ಸಂಭ್ರಮಾಚರಣೆಯ ಸಂದರ್ಭದಲ್ಲಿದ್ದು ವಿಶೇಷ ಲಾಂಛನವನ್ನು ಬಿಡುಗಡೆಗೊಳಿಸಿದರು.
ಸ್ನಾತಕೋತ್ತರ ಅಧ್ಯಯನ ಕೇಂದ್ರದ ಡೀನ್ ಸೌಮ್ಯ ಬಿ.ಪಿ., ಸಮಾಜಕಾರ್ಯ ಸಂಶೋಧನಾ ವಿಭಾಗದ ಮುಖ್ಯಸ್ಥ ರವಿಶಂಕರ್ ಕೆ.ಆರ್., ಉಪನ್ಯಾಸಕರಾದ ಧಾನೇಶ್ವರಿ, ಅತುಲ್, ಸುವೀರ್ ಜೈನ್, ವಿದ್ಯಾರ್ಥಿ ಸಂಯೋಜಕರಾದ ದೀಕ್ಷಿತ್ ಜೈನ್, ನಿಶ್ಮಿತಾ, ಅನುಷಾ ಭಾಗವಹಿಸಿದ್ದರು.
ಅಥುಲ್ ಎಸ್. ವಂದಿಸಿದರು. ಅನಿಶಾ, ವಂದಿತಾ ಕಾರ್ಯಕ್ರಮ ನಿರ್ವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.