ADVERTISEMENT

ಉದ್ಯಮಿ ಸಿದ್ಧಾರ್ಥ ನಿಗೂಢ ಕಣ್ಮರೆ | ಶೋಧಕ್ಕೆ ಹೆಲಿಕಾಪ್ಟರ್‌, ಹಡಗು ಸಜ್ಜು

ಮತ್ತಷ್ಟು ನೌಕೆಗಳನ್ನು ನೀರಿಗಿಳಿಸಿದ ನೌಕಾ ಪಡೆ,

​ಪ್ರಜಾವಾಣಿ ವಾರ್ತೆ
Published 30 ಜುಲೈ 2019, 20:09 IST
Last Updated 30 ಜುಲೈ 2019, 20:09 IST
ಉದ್ಯಮಿ ಸಿದ್ದಾರ್ಥ ಹೆಗ್ಡೆ
ಉದ್ಯಮಿ ಸಿದ್ದಾರ್ಥ ಹೆಗ್ಡೆ   

ಮಂಗಳೂರು: ಸೋಮವಾರ ಸಂಜೆಯಿಂದ ನಿಗೂಢವಾಗಿ ಕಣ್ಮರೆಯಾಗಿರುವ ಕೆಫೆ ಕಾಫಿ ಡೇ ಸಂಸ್ಥಾಪಕ ವಿ.ಜಿ. ಸಿದ್ಧಾರ್ಥ ಹೆಗ್ಡೆ ಅವರ ಪತ್ತೆಗೆ ನಡೆಯುತ್ತಿರುವ ಶೋಧ ಕಾರ್ಯಾಚರಣೆಯಲ್ಲಿ ಮಂಗಳವಾರ ಸಂಜೆಯ ವೇಳೆಗೆ ಭಾರತೀಯ ನೌಕಾ ಪಡೆ ಮತ್ತಷ್ಟು ನೌಕೆಗಳನ್ನು ನೀರಿಗಿಳಿಸಿದೆ.

ಇಲ್ಲಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿರುವ ನೇತ್ರಾವತಿ ಸೇತುವೆಯಿಂದ ಸಿದ್ಧಾರ್ಥ ಸೋಮವಾರ ಸಂಜೆ ನಾಪತ್ತೆಯಾಗಿದ್ದರು. ಪೊಲೀಸರು, ಕೋಸ್ಟ್‌ ಗಾರ್ಡ್‌, ಕರಾವಳಿ ಕಾವಲುಪಡೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ರಾಜ್ಯ ವಿಪತ್ತು ನಿರ್ವಹಣಾ ಪಡೆ, ಅಗ್ನಿಶಾಮಕ ದಳ, ಗೃಹರಕ್ಷಕ ದಳ ಮತ್ತು ಮುಳುಗು ತಜ್ಞರು ಮಂಗಳವಾರ ಇಡೀ ದಿನ ಕಾರ್ಯಾಚರಣೆ ನಡೆಸಿದರೂ ಯಾವುದೇ ಸುಳಿವು ಲಭ್ಯವಾಗಿಲ್ಲ.

ಮಂಗಳವಾರ ಬೆಳಿಗ್ಗೆಯಿಂದ ಎರಡು ಕಣ್ಗಾವಲು ಹಡಗುಗಳು ಮತ್ತು ಒಂದು ಹೋವರ್‌ ಕ್ರಾಫ್ಟ್‌ ನೌಕೆಯನ್ನು ಶೋಧ ಕಾರ್ಯಕ್ಕೆ ನಿಯೋಜಿಸಲಾಗಿತ್ತು. ಭಾರತೀಯ ಕೋಸ್ಟ್‌ ಗಾರ್ಡ್‌ನಿಂದ ರಾತ್ರಿ ಗಸ್ತಿಗೆ ನಿಯೋಜಿಸಿದ್ದ ಸಾವಿತ್ರಿ ಬಾಯಿ ಫುಲೆ ನೌಕೆಯನ್ನು ಶೋಧಕ್ಕಾಗಿ ಪಣಂಬೂರಿನ ನವ ಮಂಗಳೂರು ಬಂದರಿನಲ್ಲಿ ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ಕಾರ್ಯಾಚರಣೆಗೆ ಬಲ ತುಂಬಲು 75 ಎಸಿವಿ ಸ್ಕ್ವಾಡ್ರನ್‌ ಅನ್ನು ಸಜ್ಜಾಗಿ ಇರಿಸಲಾಗಿದೆ ಎಂದು ಕೋಸ್ಟ್‌ ಗಾರ್ಡ್‌ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಕೋಸ್ಟ್‌ ಗಾರ್ಡ್‌ನ ಮುಳುಗು ತಜ್ಞರ ತಂಡಗಳು ಕೂಡ ಸಿದ್ಧವಾಗಿವೆ. ಅಗತ್ಯ ಕಂಡುಬಂದಲ್ಲಿ ಈ ತಂಡ ಗಳನ್ನೂ ಇಳಿಸಲಾಗುವುದು. ಗಸ್ತು ನೌಕೆ ಕಸ್ತೂರಬಾ ಕೂಡ ಮಂಗಳೂರು ಬಂದರಿನಲ್ಲಿ ಲಂಗರು ಹಾಕಿ ಕಾಯ್ದಿರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ನೂರಾರು ಪೊಲೀಸರ ನಿಯೋಜನೆ: ಪೊಲೀಸ್‌ ಕಮಿಷನರ್‌ ಸಂದೀಪ್‌ ಪಾಟೀಲ್‌ ಮಾರ್ಗದರ್ಶನದಲ್ಲಿ ನಡೆ ಯುತ್ತಿರುವ ಕಾರ್ಯಾಚರಣೆಯ ನೇತೃತ್ವ ವನ್ನು ಡಿಸಿಪಿಗಳಾದ ಹನುಮಂತರಾಯ, ಲಕ್ಷ್ಮೀಗಣೇಶ್‌ ವಹಿಸಿದ್ದಾರೆ. ಇಬ್ಬರು ಎಸಿಪಿಗಳು, ಇಬ್ಬರು ಇನ್‌ಸ್ಪೆಕ್ಟರ್‌ಗಳು, 50 ಕಾನ್‌ಸ್ಟೆಬಲ್‌ಗಳು ಮತ್ತು 50 ಸಶಸ್ತ್ರ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಅಗ್ನಿಶಾಮಕ ದಳ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆಯ 45 ಮಂದಿಯ ತಂಡ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್‌) 27 ಮಂದಿಯ ತಂಡ ಮತ್ತು ನಾಲ್ಕು ಸುಸಜ್ಜಿತ ದೋಣಿಗಳು ಕಾರ್ಯಾಚರಣೆಯಲ್ಲಿವೆ.

ಗೃಹರಕ್ಷಕ ದಳದ ಎಂಟು ಸಿಬ್ಬಂದಿ ಒಂದು ದೋಣಿಯೊಂದಿಗೆ ಕಾರ್ಯಾಚರಣೆಯಲ್ಲಿದ್ದಾರೆ. ಸ್ಥಳೀಯ ಮೀನುಗಾರರ ಹಲವು ದೋಣಿಗಳನ್ನು ಕಾರ್ಯಾಚರಣೆಗೆ ಇಳಿಸಲಾಗಿದೆ. ತಣ್ಣೀರುಬಾವಿಯ ಮುಳುಗು ತಜ್ಞರ ತಂಡದ ಏಳು ಮಂದಿ ಮಂಗಳವಾರ ಬೆಳಿಗ್ಗೆಯಿಂದಲೂ ನದಿಯಲ್ಲಿ ಶೋಧದಲ್ಲಿ ತೊಡಗಿದ್ದಾರೆ.

ಜಿಲ್ಲಾಧಿಕಾರಿ ಸಸಿಕಾಂತ್‌ ಸೆಂಥಿಲ್‌, ಮಂಗಳೂರು ಉಪ ವಿಭಾಗಾಧಿಕಾರಿ ರವಿಚಂದ್ರ ನಾಯಕ್‌ ಸೇರಿದಂತೆ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳು ಕಾರ್ಯಾಚರಣೆ ತಂಡ ದೊಂದಿಗೆ ಸತತ ಸಂಪರ್ಕದಲ್ಲಿದ್ದಾರೆ.

ಪ್ರತಿಕೂಲ ಹವಾಮಾನ ಅಡ್ಡಿ

ಪೊಲೀಸರ ಕೋರಿಕೆಯಂತೆ ನೌಕಾಪಡೆಯ ಹೆಲಿಕಾಪ್ಟರ್‌ ಅನ್ನು ಮಂಗಳವಾರ ಮಧ್ಯಾಹ್ನವೇ ಕಾರ್ಯಾಚರಣೆಗಾಗಿ ಸಜ್ಜುಗೊಳಿಸಲಾಗಿತ್ತು. ಆದರೆ, ಪ್ರತಿಕೂಲ ಹವಾಮಾನದ ಕಾರಣದಿಂದ ಮಂಗಳವಾರ ಹೆಲಿಕಾಪ್ಟರ್‌ ಬಳಸಲು ಸಾಧ್ಯ ವಾಗಿಲ್ಲ. ಬುಧವಾರ ಹೆಲಿಕಾಪ್ಟರ್‌ನಲ್ಲಿ ಶೋಧ ನಡೆಯುವ ಸಾಧ್ಯತೆ ಇದೆ.

‘ಹಾರುವುದನ್ನು ಕಂಡಿದ್ದೆ‘

‘ಸೋಮವಾರ ಸಂಜೆ ನೇತ್ರಾವತಿ ಸೇತುವೆ ಬಳಿ ಮೀನು ಹಿಡಿಯುತ್ತಿದ್ದೆ. ಸಂಜೆ 7 ಗಂಟೆ ಸುಮಾರಿಗೆ ಸೇತುವೆ ಮೇಲಿನಿಂದ ವ್ಯಕ್ತಿಯೊಬ್ಬರು ನದಿಗೆ ಹಾರುವುದು ಕಾಣಿಸಿತು. ನಾನು ಸ್ವಲ್ಪ ದೂರದಲ್ಲಿ ಇದ್ದ ಕಾರಣ ರಕ್ಷಣೆಗೆ ಹೋಗಲಾಗಲಿಲ್ಲ. ಐದು ನಿಮಿಷ ಬಿಟ್ಟು ಮೇಲೆದ್ದ ವ್ಯಕ್ತಿ ಮತ್ತೆ ಮುಳುಗಿದರು’ ಉಳ್ಳಾಲ ರೈಲ್ವೆ ಬ್ರಿಡ್ಜ್‌ ಬಳಿಯ ನಿವಾಸಿ ಸೈಮನ್‌ ಡಿಸೋಜ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.