ADVERTISEMENT

ಕರಾವಳಿಯಲ್ಲಿ ಭಯೋತ್ಪಾದಕ ಶಕ್ತಿಯ ಬೇರು: ಶ್ರೀಕಾಂತ್ ಶೆಟ್ಟಿ

ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಖೆ ಎನ್‌ಐಎಗೆ ವಹಿಸಲು ಜನಾಗ್ರಹ ಸಭೆ; ಶ್ರೀಕಾಂತ್ ಶೆಟ್ಟಿ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 26 ಮೇ 2025, 4:01 IST
Last Updated 26 ಮೇ 2025, 4:01 IST
ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ಒಪ್ಪಿಸುವಂತೆ ಆಗ್ರಹಿಸಿ ಬಜಪೆಯಲ್ಲಿ ಭಾನುವಾರ ನಡೆದ ಜನಾಗ್ರಹ ಸಭೆಯಲ್ಲಿ ಪಾಲ್ಗೊಂಡಿದ್ದ ಕಾರ್ಯಕರ್ತರು
ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ಒಪ್ಪಿಸುವಂತೆ ಆಗ್ರಹಿಸಿ ಬಜಪೆಯಲ್ಲಿ ಭಾನುವಾರ ನಡೆದ ಜನಾಗ್ರಹ ಸಭೆಯಲ್ಲಿ ಪಾಲ್ಗೊಂಡಿದ್ದ ಕಾರ್ಯಕರ್ತರು   

ಮಂಗಳೂರು: ಕರಾವಳಿ ಭಾಗದಲ್ಲಿ, ವಿಶೇಷವಾಗಿ ಕೇರಳದಲ್ಲಿ ಭಯೋತ್ಪಾದಕ ಶಕ್ತಿಗಳು ಆಳವಾಗಿ ಬೇರೂರಿವೆ. ಈ ಶಕ್ತಿಗಳಿಗೆ ವಿದೇಶದಿಂದ ಆರ್ಥಿಕ ಬಲ ಸಿಗುತ್ತಿದೆ ಎಂದು ಹಿಂದು ಜಾಗರಣ ವೇದಿಕೆಯ ಪ್ರಾಂತ ಕಾರ್ಯಕಾರಿ ಸದಸ್ಯ ಶ್ರೀಕಾಂತ್ ಶೆಟ್ಟಿ ಅಭಿಪ್ರಾಯಪಟ್ಟರು.

ಹಿಂದುತ್ವವಾದಿ ಕಾರ್ಯಕರ್ತ, ಬಜರಂಗ ದಳ ಕಲವಾರು ಘಟಕದ ಗೋರಕ್ಷಾ ಪ್ರಮುಖ್‌ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ಒಪ್ಪಿಸುವಂತೆ ಆಗ್ರಹಿಸಿ ಬಜಪೆಯಲ್ಲಿ ಭಾನುವಾರ ನಡೆದ ಜನಾಗ್ರಹ ಸಭೆ ಮತ್ತು ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮುಖ್ಯ ಭಾಷಣ ಮಾಡಿದರು.

ದಶಕಗಳ ಹಿಂದೆ ಕೊಲ್ಲಿ ದೇಶಕ್ಕೆ ಹೋದವರು ಅಲ್ಲಿನವರ ಜೊತೆ ಬೆರೆತು ಪಾನ್ ಇಸ್ಲಾಂ ಮನಸ್ಥಿತಿ ಬೆಳೆಸಿಕೊಂಡು ಹಿಂದು ಸಮಾಜವನ್ನು ಕೆಣಕುವ ಕುತಂತ್ರಕ್ಕೆ ಮುಂದಾಗಿದ್ದರು. ಅಂಥ ಸ್ಥಿತಿ ಈಗಲೂ ಇದೆ. ಈಗ ವಿದೇಶದ ಫಂಡಿಂಗ್‌ನಿಂದ ಕೇರಳದ ಮಲಬಾರ್ ಭಾಗದಿಂದ ಜನರನ್ನು ತರಿಸಿ ಹಿಂದುತ್ವವಾದಿಗಳ ಹತ್ಯೆ ನಡೆಸಲಾಗುತ್ತಿದೆ ಎಂದು ಶ್ರೀಕಾಂತ್ ಹೇಳಿದರು.

ADVERTISEMENT

ಕರಾವಳಿಯಲ್ಲಿ ಭಯೋತ್ಪಾದಕರ ಜಾಲ ಗಟ್ಟಿಯಗಿದೆ ಎಂಬುದಕ್ಕೆ ಸುಹಾಸ್ ಶೆಟ್ಟಿ ಹತ್ಯೆಯೇ ಸಾಕ್ಷಿ. ಅವರನ್ನು ಕೊಂದವರು ಭಯೋತ್ಪಾದಕ ಶಕ್ತಿಗಳೇ ಹೊರತು ಬೇರೆ ಯಾರೂ ಅಲ್ಲ. ಅಂಥವರ ರಕ್ತದಾಹ ತೀರಿದ ನಂತರವೂ ಒಂದು ತೊಟ್ಟಾದರೂ ಹಿಂದುಗಳಲ್ಲಿ ಉಳಿದಿರುತ್ತದೆ. ಬಿದ್ದಲ್ಲಿ ಹತ್ತು, ಸತ್ತಲ್ಲಿ ಸಾವಿರ ಆಗುವ ಹಿಂದುಗಳು ಇಂಥ ಕೊಲೆಗೆ ಉತ್ತರ ಕೊಟ್ಟೇ ಕೊಡುತ್ತಾರೆ. ಅದು ಯಾವಾಗ, ಹೇಗೆ ಮತ್ತು ಎಲ್ಲಿ ಎಂಬುದನ್ನು ನಾವೇ ನಿರ್ಧರಿಸುತ್ತೇವೆ. ಸುಹಾಸ್ ಶೆಟ್ಟಿ ಕೊಲೆಯ ಸೇಡಿನ ಬೆಂಕಿ ಆರಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಅವರು ನುಡಿದರು. 

ಸರ್ಕಾರದ ಪ್ರತಿನಿಧಿಗಳು ಕರಾವಳಿಯನ್ನು ಹಿಂದುತ್ವದ ಪ್ರಯೋಗ ಶಾಲೆ ಎನ್ನುತ್ತಾರೆ. ಇದು ಹಾಗೆ ಆಗದೇ ಇರುತ್ತಿದ್ದರೆ ಭಯೋತ್ಪಾದನೆಯ ಪ್ರಯೋಗ ಶಾಲೆ ಆಗುತ್ತಿತ್ತು. ಹಿಂದು ಕಾರ್ಯಕರ್ತರು ಇರುವುದರಿಂದ ಮಂಗಳೂರು ಇನ್ನೂ ಮಂಗಳೂರು ಆಗಿಯೇ ಉಳಿದಿದೆ ಎಂದ ಶ್ರೀಕಾಂತ್ ಅವರು, ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ತನಿಖೆ  ಎನ್ಐಎಗೆ ವಹಿಸಿದರೆ ಅದರ ಹಿಂದಿನ ಕಾಣದ ಕೈಗಳ ಬಗ್ಗೆ ತಿಳಿಯುತ್ತದೆ. ಪಿಎಫ್‌ಐ ಫಲಕ ಮಾತ್ರ ನಿಷೇಧ ಆಗಿದ್ದು ಕಾರ್ಯಚಟುವಟಿಕೆಗಳು ಇನ್ನೂ ನಡೆಯುತ್ತಿವೆ. ಅದನ್ನು ಮಟ್ಟಹಾಕಲು ಎನ್‌ಐಎಯಂಥ ಸಂಸ್ಥೆ ಬೇಕು ಎಂದರು. 

ಶಾಸಕ ಉಮಾನಾಥ ಕೊಟ್ಯಾನ್‌ ಮಾತನಾಡಿ ಸುಹಾಸ್ ಕೊಲೆ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿ, ರಾಜಕಾರಣಿ ಶಾಮೀಲಾಗಿದ್ದಾರೆ. ದೇಶದ್ರೋಹಿಗಳ ಜೊತೆ ಪೊಲೀಸರು ಸೇರಿಕೊಂಡಿದ್ದಾರೆ. ಹಿಂದೂಪರ ಕಾರ್ಯಕರ್ತರ ಕೊಲೆ ಮತ್ತು ಕೊಲೆಯತ್ನ ಪ್ರಕರಣಗಳಲ್ಲಿ ಭಾಗಿಯಾದವರೆಲ್ಲರೂ ಒಂದೇ ವಸತಿ ಸಮುಚ್ಛಯದಲ್ಲಿ ವಾಸಿಸುತ್ತಿದ್ದಾರೆ. ಈಚೆಗೆ ಸರ್ವೆಗೆ ಸಿಬ್ಬಂದಿ ಹೋದಾಗ ಅಲ್ಲಿನ ನಿವಾಸಿಗಳು ಬೆದರಿಕೆ ಹಾಕಿ ಕಳುಹಿಸಿದ್ದಾರೆ. ಪೊಲೀಸರಿಗೆ ಧೈರ್ಯ ಇದ್ದರೆ ಆ ವಸತಿ ಸಮುಚ್ಛಯದ ಮೇಲೆ ದಾಳಿ ಮಾಡಬೇಕು ಎಂದರು.

ವಿಶ್ವ ಹಿಂದೂ ಪರಿಷತ್‌ ಪ್ರಾಂತ ಸಹಕಾರ್ಯದರ್ಶಿ ಶಿವಾನಂದ್ ಮೆಂಡನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶ್ವಹಿಂದು ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಕೆ ಪುರುಷೋತ್ತಮ, ಸುಹಾಸ್ ಅವರ ತಂದೆ ಮೋಹನ್ ಶೆಟ್ಟಿ ಬಜಪೆ, ತಾಯಿ ಸುಲೋಚನಾ ಎಂ ಶೆಟ್ಟಿ, ಬಜರಂಗ ದಳದ ಪ್ರಾಂತ ಸಂಹಸಂಯೋಜಕ ಭುಜಂಗ ಕುಲಾಲ್‌, ನವೀನ್ ಮೂಡುಶೆಡ್ಡೆ ಪಾಲ್ಗೊಂಡಿದ್ದರು.

ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ಒಪ್ಪಿಸುವಂತೆ ಆಗ್ರಹಿಸಿ ಬಜಪೆಯಲ್ಲಿ ಭಾನುವಾರ ನಡೆದ ಜನಾಗ್ರಹ ಸಭೆಯಲ್ಲಿ  ಹಿಂದೂ ಜಾಗರಣ ವೇದಿಕೆ ಪ್ರಾಂತ ಕಾರ್ಯಕಾರಿ ಸದಸ್ಯ ಶ್ರೀಕಾಂತ್ ಶೆಟ್ಟಿ ಮಾತನಾಡಿದರು
ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ಒಪ್ಪಿಸುವಂತೆ ಆಗ್ರಹಿಸಿ ಬಜಪೆಯಲ್ಲಿ ಭಾನುವಾರ ನಡೆದ ಜನಾಗ್ರಹ ಸಭೆಯಲ್ಲಿ ಪಾಲ್ಗೊಂಡಿದ್ದ ಕಾರ್ಯಕರ್ತರು

‘ನನ್ನ ಮಗ ರೌಡಿಯಲ್ಲ’

ಸುಹಾಸ್ ಅವರ ತಾಯಿ ಸುಲೋಚನಾ ಎಂ ಶೆಟ್ಟಿ ಮಾತನಾಡಿ ‘ನನ್ನ ಮಗನಿಗೆ ಸುಮ್ಮನೇ ರೌಡಿಶೀಟರ್ ಪಟ್ಟ ಕಟ್ಟಿದ್ದಾರೆ. ಆತ ರೌಡಿ ಆಗಿರಲಿಲ್ಲ. ಬಜರಂಗ ದಳದ ಕಾರ್ಯಕರ್ತ ಹಿಂದುಪರ ಕಾರ್ಯಕರ್ತ ಆಗಿದ್ದ’ ಎಂದರು.  ಸುಹಾಸ್ ಕೊಲೆ ಪ್ರಕರಣವನ್ನು ಸಮರ್ಪಕವಾಗಿ ಮಾಡಲು ಪೊಲೀಸರಿಗೆ ಸರ್ಕಾರ ಅವಕಾಶ ನೀಡದು. ಪಿಎಫ್‌ಐ ಹೇಳಿದಂತೆಯೇ ಚಾರ್ಜ್‌ಶೀಟ್ ತಯಾರಾಗಬಹುದು. ಆದ್ದರಿಂದ ಈ ಪ್ರಕರಣವನ್ನು ಎನ್‌ಐಎಗೆ ವಹಿಸಬೇಕು’ ಎಂದು ಅವರು ಒತ್ತಾಯಿಸಿದರು. ‘ಸುಹಾಸ್ ಅವರಿಗೆ ಚಿತ್ರಹಿಂಸೆ ಕೊಟ್ಟು ರೌಡಿಶೀಟರ್ ಪಟ್ಟ ಕಟ್ಟಿದವರು ಪೊಲೀಸರು’ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.

ಮಳೆಯಲ್ಲೇ ಮೊಳಗಿದ ಘೋಷಣೆ

ಜನಾಗ್ರಹ ಸಭೆಯ ಸಂದರ್ಭದಲ್ಲಿ ಧಾರಾಕಾರ ಮಳೆ ಸುರಿಯುತ್ತಿತ್ತು. ತೆರೆದ ಅಂಗಣದಲ್ಲಿ ಕುಳಿತಿದ್ದವರು ಮಳೆಯನ್ನು ಲೆಕ್ಕಿಸದೆ ಕಾರ್ಯಕ್ರಮದ ಕೊನೆಯ ವರೆಗೂ ಭಾಗಿಯಾದರು. ‘ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣವನ್ನು ಎನ್‌ಐಎ ತನಿಖೆಗೆ ಕೊಡಿ..’ ‘ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ..’ ‘ಕಾಂಗ್ರೆಸ್ ಸರ್ಕಾರದ ಪೊಲೀಸ್ ತನಿಖೆಯಲ್ಲಿ ನಂಬಿಕೆ ಇಲ್ಲ..’ ‘ಪಿಎಫ್‌ಐ ಭಯೋತ್ಪಾದಕರನ್ನು ಬಂಧಿಸಿ..’ ‘ಸುಹಾಸ್ ಶೆಟ್ಟಿ ಹಂತಕರನ್ನು ಗಲ್ಲಿಗೇರಿಸಿ..’ ‌‘ಸುಹಾಸ್ ಶೆಟ್ಟಿ ಹತ್ಯೆ ಹಿಂದಿರುವ ಪಾತಕಿಗಳನ್ನು ಬಂಧಿಸಬೇಕು..’ ಸುಹಾಸ್ ಶೆಟ್ಟಿ ಹತ್ಯೆಯಲ್ಲಿ ಭಾಗಿಯಾದ ಬುರ್ಕಾಧಾರಿ ಭಯೋತ್ಪಾದಕರನ್ನು ಬಂಧಿಸಬೇಕು..’ ಎಂಬಿತ್ಯಾದಿ ಘೋಷಣೆಗಳು ಮೊಳಗಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.