ADVERTISEMENT

ವಿಶಿಷ್ಟ ಚೇತನರ ಸಂಘದ ವಾರ್ಷಿಕೋತ್ಸವ

​ಪ್ರಜಾವಾಣಿ ವಾರ್ತೆ
Published 20 ಮೇ 2022, 16:14 IST
Last Updated 20 ಮೇ 2022, 16:14 IST

ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ವಿಶಿಷ್ಟ ಚೇತನರ ಸಂಘ ಮಂಗಳೂರು ಮತ್ತು ಭಾರತೀಯ ರೆಡ್‌ಕ್ರಾಸ್ ಜಿಲ್ಲಾ ಘಟಕ ಹಾಗೂ ಮಂಗಳೂರು ವಿಶ್ವವಿದ್ಯಾಲಯದ ಯುವ ರೆಡ್‌ಕ್ರಾಸ್ ಘಟಕದ ಆಶ್ರಯದಲ್ಲಿ ವಿಶಿಷ್ಟ ಚೇತನರ ಸಂಘದ 30ನೇ ವರ್ಷದ ವಾರ್ಷಿಕ ಸಮಾವೇಶ, ಅಂಗವಿಕಲರಿಗೆ ವೈದ್ಯಕೀಯ ನೆರವು ಮತ್ತು ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮ ಮೇ 22ರಂದು ಬೆಳಿಗ್ಗೆ 10 ಗಂಟೆಗೆ ನಗರದ ಹಂಪನಕಟ್ಟೆ ವಿಶ್ವವಿದ್ಯಾಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ನಡೆಯಲಿದೆ.

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ವಿಶಿಷ್ಟ ಚೇತನರ ಸಂಘದ ಅಧ್ಯಕ್ಷ ಡಾ.ವಿ.ಮುರಲೀಧರ ನಾಕ್, ‘ರೆಡ್‌ಕ್ರಾಸ್ ಜಿಲ್ಲಾ ಘಟಕದ ಅಧ್ಯಕ್ಷ ಸಿಎ ಶಾಂತಾರಾಮ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸುವರು. ನಿಟ್ಟೆ ವಿಶ್ವವಿದ್ಯಾಲಯದ ಸಹಕುಲಾಧಿಪತಿ ಡಾ. ಎಂ.ಶಾಂತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸುವರು. ಸಹಕಾರ ಭಾರತಿಯ ದಕ್ಷಿಣ ಮಧ್ಯಕ್ಷೇತ್ರ ಸಂಪರ್ಕ ಪ್ರಮುಖ್ ಎಸ್.ಆರ್. ಸತೀಶ್ಚಂದ್ರ ವಿದ್ಯಾರ್ಥಿವೇತನ ವಿತರಿಸುವರು’ ಎಂದರು.

ಸಕ್ಷಮ ಕರ್ನಾಟಕದ ಟ್ರಸ್ಟಿ ಜಯದೇವ ಕಾಮತ್ ವೈದ್ಯಕೀಯ ನೆರವು ವಿತರಿಸುವರು. ಮೇಯರ್ ಪ್ರೇಮಾನಂದ ಶೆಟ್ಟಿ ಸಾಧಕರನ್ನು ಸನ್ಮಾನಿಸುವರು. ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪಿ.ಎಸ್.ಯಡಪಡಿತ್ತಾಯ ಮಾಹಿತಿ ಪುಸ್ತಕ ವಿತರಣೆ ಮಾಡುವರು. ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಯು.ಟಿ.ಖಾದರ್, ವೇದವ್ಯಾಸ ಕಾಮತ್, ಡಾ.ವೈ.ಭರತ್ ಶೆಟ್ಟಿ ಪಾಲ್ಗೊಳ್ಳುವರು ಎಂದು ತಿಳಿಸಿದರು.

ADVERTISEMENT

ರೆಡ್‌ಕ್ರಾಸ್ ಘಟಕದ ಗೌರವ ಕಾರ್ಯದರ್ಶಿ ಬಿ.ಕೆ.ಕುಸುಮಾಧರ್, ರವೀಂದ್ರನಾಥ್, ರೆಡ್‌ಕ್ರಾಸ್‌ನ ದಿವ್ಯಾಂಗ ಕೋಶದ ಅಧ್ಯಕ್ಷ ಡಾ.ಕೆ.ಆರ್.ಕಾಮತ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.