ADVERTISEMENT

ದೃಢ ಭಕ್ತಿಯಿಂದ ಭಗವಂತನ ಅನುಗ್ರಹ: ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

24ನೇ ವರ್ಷದ ಭಜನಾ ತರಬೇತಿ ಕಮ್ಮಟದ ಸಮಾರೋಪದಲ್ಲಿ ಪೇಜಾವರ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2022, 4:52 IST
Last Updated 24 ಸೆಪ್ಟೆಂಬರ್ 2022, 4:52 IST
ಧರ್ಮಸ್ಥಳದಲ್ಲಿ ಶುಕ್ರವಾರ 24ನೇ ವರ್ಷದ ಭಜನಾ ತರಬೇತಿ ಕಮ್ಮಟದ ಸಮಾರೋಪ ಸಮಾರಂಭದಲ್ಲಿ ಬೆಂಗಳೂರಿನ ವಾಸುದೇವ ರೆಡ್ಡಿ ಮತ್ತು ಮನೆಯವರು ಡಿ.ವೀರೇಂದ್ರ ಹೆಗ್ಗಡೆ ಅವರಿಗೆ ರಜತ ಕಿರೀಟ ಮತ್ತು ರಜತ ಗದೆ ಅರ್ಪಿಸಿ ಗೌರವಿಸಿದರು.
ಧರ್ಮಸ್ಥಳದಲ್ಲಿ ಶುಕ್ರವಾರ 24ನೇ ವರ್ಷದ ಭಜನಾ ತರಬೇತಿ ಕಮ್ಮಟದ ಸಮಾರೋಪ ಸಮಾರಂಭದಲ್ಲಿ ಬೆಂಗಳೂರಿನ ವಾಸುದೇವ ರೆಡ್ಡಿ ಮತ್ತು ಮನೆಯವರು ಡಿ.ವೀರೇಂದ್ರ ಹೆಗ್ಗಡೆ ಅವರಿಗೆ ರಜತ ಕಿರೀಟ ಮತ್ತು ರಜತ ಗದೆ ಅರ್ಪಿಸಿ ಗೌರವಿಸಿದರು.   

ಉಜಿರೆ: ‘ಸರ್ವ ಶಾಸ್ತ್ರಗಳ ಸಾರ ಭಜನೆ ಯಲ್ಲಿದ್ದು, ಅರ್ಥವನ್ನು ಅರಿತು ಪರಿಶುದ್ಧ ಮನಸ್ಸಿನಿಂದ ದೃಢ ಭಕ್ತಿಯೊಂದಿಗೆ ಪ್ರತಿದಿನ ಭಜನೆ ಹಾಡಿದರೆ ಭಗವಂತನ ಅನುಗ್ರಹ ಪ್ರಾಪ್ತಿಯಾಗುತ್ತದೆ. ತನ್ಮೂಲಕ ಸುಖ-ಶಾಂತಿ, ನೆಮ್ಮದಿಯ ಜೀವನ ನಡೆಸಬಹುದು’ ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

ಧರ್ಮಸ್ಥಳದಲ್ಲಿ ಶುಕ್ರವಾರ 24ನೇ ವರ್ಷದ ಭಜನಾ ತರಬೇತಿ ಕಮ್ಮಟದ ಸಮಾರೋಪ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.

‘ಭಗವಂತ ಮತ್ತು ಭಕ್ತರ ನಡುವಿನ ಸಂಪರ್ಕ ಸೇತು ಭಜನೆ. ಭಗವಂತನ ಅನುಗ್ರಹ ಪ್ರಾಪ್ತಿಗೆ ಭಜನೆ ಅತ್ಯಂತ ಸರಳ ಮಾಧ್ಯಮವಾಗಿದೆ. ದೇವರು ಭಕ್ತಿಯ ಭಾವವನ್ನು ಗಮನಿಸುತ್ತಾರೆ. ಭಕ್ತಿಯಿಂದ ಮಾಡಿದ ಸಾರ್ಥಕ ಸೇವೆ ಮೂಲಕ ಸಕಲ ದೋಷಗಳಿಂದ ಮುಕ್ತಿ ಪಡೆಯಬಹುದು’ ಎಂದರು.

ADVERTISEMENT

‘ಕೆಲವು ವರ್ಷಗಳ ಹಿಂದೆ ಮುಸ್ಸಂಜೆಯಲ್ಲಿ ಪ್ರತಿ ಮನೆಯಲ್ಲಿಯೂ ಭಜನೆ ಮಾಡುವ ಸಂಪ್ರದಾಯವಿತ್ತು. ಈಗ ರೇಡಿಯೊ, ಟಿ.ವಿ. ಬಂದ ಮೇಲೆ ಭಜನೆ ಹಾಡುವ ಸಂಸ್ಕೃತಿ ಮಾಯವಾಗಿ ಮನೆಯೇ ಚಲನಚಿತ್ರ ಮಂದಿರವಾಗಿದೆ. ನಮ್ಮ ಸನಾತನ ಧರ್ಮ ಮತ್ತು ಸಂಸ್ಕೃತಿಯನ್ನು ಉಳಿಸಿ, ಬೆಳೆಸುವುದು ನಮ್ಮೆಲ್ಲರ ಹೊಣೆ. ಪ್ರತಿ ಮನೆಯಲ್ಲಿಯೂ ನಿತ್ಯವೂ ಸಂಜೆ ಒಂದು ಗಂಟೆಯಾದರೂ ಭಜನೆ ಮಾಡಬೇಕು. ಭಜನಾ ಸಂಸ್ಕೃತಿಯನ್ನು ಮಕ್ಕಳಿಗೂ ಕಲಿಸಿ ಸಭ್ಯ, ಸುಸಂಸ್ಕೃತ ನಾಗರಿಕರನ್ನಾಗಿ ರೂಪಿಸಬೇಕು. ಭಜನಾ ತರಬೇತಿ ಕಮ್ಮಟದ ಮೂಲಕ ಡಿ.ವೀರೇಂದ್ರ ಹೆಗ್ಗಡೆ ಅವರು ಪ್ರತಿ ಮನೆಯಲ್ಲಿಯೂ ಭಜನಾ ಸಂಸ್ಕೃತಿಯನ್ನು ಉಳಿಸಿ, ಬೆಳೆಸಿದ್ದಾರೆ’ ಎಂದು ಹೇಳಿ ಅಭಿನಂದಿಸಿದರು.

ರಾಜ್ಯಸಭಾ ಸದಸ್ಯರಾಗಿ ನಾಮ ನಿರ್ದೇಶನಗೊಂಡಿರುವ ವೀರೇಂದ್ರ ಹೆಗ್ಗಡೆ ಅವರನ್ನು ಸ್ವಾಮೀಜಿ ಅವರು ಶ್ರೀ ಕೃಷ್ಣ ದೇವರ ಪ್ರಸಾದ ನೀಡಿ, ಶಾಲು ಹೊದಿಸಿ ಗೌರವಿಸಿದರು. ತುಳು ಭಜನೆಯೊಂದನ್ನು ಸ್ವಾಮೀಜಿ ಸುಶ್ರಾವ್ಯವಾಗಿ ಹಾಡಿದರು.

ಚಲನಚಿತ್ರ ಸಂಗೀತ ನಿರ್ದೇಶಕ ಶ್ರೀಧರ್ ಸಂಭ್ರಮ್ ಗೀತೆಯೊಂದನ್ನು ಹಾಡಿ ಶ್ರೋತೃಗಳನ್ನು ರಂಜಿಸಿದರು. ‘ಸಾಂಸ್ಕೃತಿಕ ಹಿನ್ನೆಲೆಯ ಸಂಗೀತ ನಮ್ಮ ಬದುಕಿನಲ್ಲಿ ಧನಾತ್ಮಕ ಪರಿವರ್ತನೆ ಮಾಡಿ ಮಾನಸಿಕ ಶಾಂತಿ, ನೆಮ್ಮದಿ ನೀಡುತ್ತದೆ’ ಎಂದು ಶ್ರೀಧರ್ ಸಂಭ್ರಮ್ ಹೇಳಿದರು.

ಬೆಂಗಳೂರಿನ ವಾಸುದೇವ ರೆಡ್ಡಿ ಮತ್ತು ಮನೆಯವರು ಡಿ.ವೀರೇಂದ್ರ ಹೆಗ್ಗಡೆ ಅವರಿಗೆ ರಜತ ಕಿರೀಟ ಮತ್ತು ರಜತ ಗದೆ ಅರ್ಪಿಸಿ ಗೌರವಿಸಿದರು. ಮಂಗಳೂರು ವಿವಿಯಿಂದ ಗೌರವ ಡಾಕ್ಟರೇಟ್ ಪಡೆದ ಹೇಮಾವತಿ ಹೆಗ್ಗಡೆ ಅವರನ್ನೂ ಅವರು ಗೌರವಿಸಿದರು.

ಭಜನಾ ಕಮ್ಮಟದ ಕಾರ್ಯದರ್ಶಿ ಸುರೇಶ್ ಮೊಯಿಲಿ ವರದಿ ವಾಚಿಸಿ, 174 ಭಜನಾ ಮಂಡಳಿಗಳಿಂದ 184 ಮಂದಿ ಪುರುಷರು ಹಾಗೂ 138 ಮಹಿಳೆಯರು ಸೇರಿದಂತೆ ಒಟ್ಟು 322 ಶಿಬಿರಾರ್ಥಿಗಳು ಕಮ್ಮಟದಲ್ಲಿ ಭಾಗವಹಿಸಿದ್ದಾರೆ ಎಂದು ತಿಳಿಸಿದರು.

ಮಾಣಿಲದ ಮೋಹನದಾಸ ಸ್ವಾಮೀಜಿ ಇದ್ದರು. ಭಜನಾ ಕಮ್ಮಟದ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್ ಸ್ವಾಗತಿಸಿದರು. ನಿವೃತ್ತ ಶಿಕ್ಷಕ ಧರ್ಣಪ್ಪ ವಂದಿಸಿದರು. ಶ್ರೀನಿವಾಸರಾವ್ ಧರ್ಮಸ್ಥಳ ಮತ್ತು ದಿನರಾಜ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

‘ಸಂಸ್ಕೃತಿ ಉಳಿಸಿದ ಧನ್ಯತಾ ಭಾವ’

ಅಧ್ಯಕ್ಷತೆ ವಹಿಸಿದ್ದ ಡಿ.ವೀರೇಂದ್ರ ಹೆಗ್ಗಡೆ ಮಾತನಾಡಿ, ಧರ್ಮವನ್ನು ನಾವು ಕಾಪಾಡಿದರೆ, ಧರ್ಮ ನಮ್ಮನ್ನು ಸದಾ ರಕ್ಷಣೆ ಮಾಡುತ್ತದೆ. ಧಾರ್ಮಿಕ ಮತ್ತು ಆಧ್ಯಾತ್ಮಿಕ ಹಿನ್ನೆಲೆಯಲ್ಲಿ ಸಂಸ್ಕೃತಿಯನ್ನು ಉಳಿಸುವುದು ಕೂಡಾ ಅತ್ಯಂತ ಶ್ರೇಷ್ಠವಾದ ಧರ್ಮವಾಗಿದೆ. ಧರ್ಮಸ್ಥಳದಲ್ಲಿ ಪ್ರತಿ ವರ್ಷ ಶಿಸ್ತು ಮತ್ತು ವ್ಯವಸ್ಥಿತವಾಗಿ ಭಜನಾ ಕಮ್ಮಟ ಆಯೋಜಿಸಿ ಭಜನಾ ಸಂಸ್ಕೃತಿ ಉಳಿಸಿ ಬೆಳೆಸಿದ ಧನ್ಯತಾ ಭಾವ ಮೂಡಿ ಬಂದಿದೆ. ಮುಂದಿನ ಪೀಳಿಗೆಯೂ ಭಜನಾ ಸಂಸ್ಕೃತಿಯನ್ನು ಬೆಳೆಸಬೇಕು ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.