ADVERTISEMENT

ವಿಟ್ಲ ಜಾತ್ರೆ: ಪಂಚಾಯಿತಿ ಮೂಲಕ ಮಳಿಗೆಗೆ ಅನುಮತಿ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2025, 6:36 IST
Last Updated 6 ನವೆಂಬರ್ 2025, 6:36 IST
ಫೋಟೋ: ವಿಟ್ಲ ಪಟ್ಟಣ ಪಂಚಾಯತಿ ತಿಂಗಳ ಸಾಮಾನ್ಯ ಸಭೆ  ಪಟ್ಟಣ ಪಂಚಾಯತಿ ಅಧ್ಯಕ್ಷ ಕರುಣಾಕರ ನಾಯ್ತೊಟ್ಟು ಅವರ ಅಧ್ಯಕ್ಷತೆಯಲ್ಲಿ ಜರಗಿತು.
ಫೋಟೋ: ವಿಟ್ಲ ಪಟ್ಟಣ ಪಂಚಾಯತಿ ತಿಂಗಳ ಸಾಮಾನ್ಯ ಸಭೆ  ಪಟ್ಟಣ ಪಂಚಾಯತಿ ಅಧ್ಯಕ್ಷ ಕರುಣಾಕರ ನಾಯ್ತೊಟ್ಟು ಅವರ ಅಧ್ಯಕ್ಷತೆಯಲ್ಲಿ ಜರಗಿತು.   

ವಿಟ್ಲ: ಪಟ್ಟಣ ಪಂಚಾಯತಿ ತಿಂಗಳ ಸಾಮಾನ್ಯ ಸಭೆಯಲ್ಲಿ ಇಲ್ಲಿನ ಪಂಚಲಿಂಗೇಶ್ವರ ದೇವರ ಕಾಲಾವಧಿ ಜಾತ್ರೆಯ ತಾತ್ಕಾಲಿಕ ಮಳಿಗೆಗಳ ಏಲಂ ಬದಲು ಪಂಚಾಯತಿಯಿಂದ ನೇರ ಅನುಮತಿ ನೀಡುವ ನಿರ್ಣಯ ಕೈಗೊಳ್ಳಲಾಯಿತು. 

ಅಧ್ಯಕ್ಷ ಕರುಣಾಕರ ನಾಯ್ತೊಟ್ಟು ಈ ವಿಷಯ ಪ್ರಸ್ತಾಪಿಸಿದಾಗ ಸದಸ್ಯರು ಅಂಗೀಕರಿಸಿ ನಿರ್ಣಯ ಕೈಗೊಳ್ಳುವಂತೆ ಸೂಚಿಸಿದರು. ಪ್ರತಿ ಸಲ ಜಾತ್ರೆಯ ಮಳಿಗೆಗಳ ಏಲಂ ಸಮಸ್ಯೆ ಸೃಷ್ಟಿಸುತ್ತದೆ. ಅದಕ್ಕಾಗಿ ಮಳಿಗೆಗಳಿಗೆ ಪಂಚಾಯತಿಯಿಂದ ನೇರವಾಗಿ ಅನುಮತಿ ಪಡೆದು ಪಂಚಾಯತಿಯೇ ವ್ಯವಸ್ಥೆ ನೋಡಿಕೊಳ್ಳುವಂತೆ ಆಗಲಿ ಎಂದು  ಒತ್ತಾಯಿಸಿದರು.

‘ಬಸ್ ನಿಲುಗಡೆ’ ಎಂಬ ನಾಮಫಲಕ ಹಾಕಿರುವ ಸ್ಥಳದಲ್ಲಿ ದ್ವಿಚಕ್ರ ಮತ್ತು ಇತರ ವಾಹನಗಳನ್ನು ನಿಲ್ಲಿಸಿ ಬಸ್ ನಿಲುಗಡೆ ತಡೆ ಒಡ್ಡುತ್ತಾರೆ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸ್ ಹೆಡ್‌ ಕಾನ್‌ಸ್ಟೆಬಲ್ ಹರೀಶ್ ಮಾತನಾಡಿ, ಪೊಲೀಸ್ ಇಲಾಖೆಯ ಸಹಕಾರ ಸದಾ ಇದೆ. ಟ್ರಾಫಿಕ್ ನಿಯಮ ಉಲ್ಲಂಘನೆ ಆದದ್ದು ಗಮನಕ್ಕೆ ಬಂದರೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು. ಸದಸ್ಯರು ತಮ್ಮ ವಾರ್ಡ್‌ಗಳಲ್ಲಿ ಟ್ರಾಫಿಕ್ ಅವ್ಯವಸ್ಥೆ, ಅಕ್ರಮ ಚಟುವಟಿಕೆ, ಅಪರಾಧ ಕೃತ್ಯಗಳ ಕುರಿತು ಗಮನಕ್ಕೆ ತನ್ನಿ ಎಂದರು.

ADVERTISEMENT

ಸಾಮಾನ್ಯ ಸಭೆಯಲ್ಲಿ ಕೈಗೊಂಡ ನಿರ್ಣಯಗಳು ಅನುಷ್ಠಾನ ಮಾಡುವಲ್ಲಿ ಸಿಬ್ಬಂದಿ ನಿರ್ಲಕ್ಷ್ಯ, ವಿಳಂಬ ಧೋರಣೆ ತೋರುತ್ತಾರೆ ಎಂದು ಸದಸ್ಯರು ಆಕ್ರೋಶ ಹೊರಹಾಕಿದರು. ವರ್ಷದ ಹಿಂದೆ ಕ್ರೀಡಾಪಟು ನೆರವು ಕೋರಿ ಮನವಿ ಸಲ್ಲಿಸಿದ್ದರು. ನೆರವು ನೀಡುವ ಬಗ್ಗೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ವರ್ಷವಾದರೂ ನೆರವು ನೀಡಿಲ್ಲ ಎಂದು ಆರೋಪಿಸಿದರು. ಸಿಬ್ಬಂದಿಯನ್ನು ತರಾಟೆ ತೆಗೆದುಕೊಂಡ ಮುಖ್ಯಾಧಿಕಾರಿ ಕರುಣಾಕರ ವಿ. ಅವರು ಶೀಘ್ರ ನೆರವು ನೀಡುವಂತೆ ಸೂಚಿಸಿದರು.

ಕುಡಿಯುವ ನೀರಿನ ವ್ಯವಸ್ಥೆ, ಸಿಬ್ಬಂದಿ ನೇಮಕ, ಸದಸ್ಯರ ಗೌರವ ಧನ ಹೆಚ್ಚಳ, ಮನೆ ದುರಸ್ತಿಗೆ ನೆರವು, ವಿವಿಧ ಕಾಮಗಾರಿಗಳ ಟೆಂಡರ್, ಅಂಗಡಿ ಕೋಣೆಗಳ ಏಲಂ ಇತ್ಯಾದಿ ಬಗ್ಗೆ ಚರ್ಚೆ ನಡೆದವು.

ಜಯಂತ್ , ಹಸೈನಾರ್ ನೆಲ್ಲಿಗುಡ್ಡೆ, ಅಶೋಕ್ ಕುಮಾರ್ ಶೆಟ್ಟಿ, ಅರುಣ್ ವಿಟ್ಲ, ಹರೀಶ್, ಸುನೀತಾ, ಆಶ್ರಫ್, ಕೃಷ್ಣ ಚರ್ಚೆಯಲ್ಲಿ ಭಾಗವಹಿಸಿದ್ದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಪಟ್ಟಣ ಪಂಚಾಯತಿ ನಾಮಕರಣ ಸದಸ್ಯ ಶ್ರೀನಿವಾಸ ಶೆಟ್ಟಿ ಕೊಲ್ಯ ಅವರನ್ನು ಸನ್ಮಾನಿಸಲಾಯಿತು. ಪಟ್ಟಣ ಪಂಚಾಯತಿ ಉಪಾಧ್ಯಕ್ಷೆ ಸಂಗೀತಾ ಪಾಣೆಮಜಲು, ಸ್ಥಾಯಿ ಸಮಿತಿ ಅಧ್ಯಕ್ಷ ರವಿಪ್ರಕಾಶ್, ಮುಖ್ಯಾಧಿಕಾರಿ ಕರುಣಾಕರ ವಿ, ಸದಸ್ಯರಾದ ಶಾಕಿರಾ, ಶ್ರೀನಿವಾಸ ಶೆಟ್ಟಿ, ಸದಸ್ಯರು, ಕಂದಾಯ ವಸೂಲಿಗಾರ ಚಂದ್ರಶೇಖರ ವರ್ಮ, ಸಿಬ್ಬಂದಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.