ADVERTISEMENT

ವಿಟ್ಲದ ನಾಡ ಕಚೇರಿಗೆ ನೂತನ ಕಟ್ಟಡ: ವ್ಯವಸ್ಥೆಯೇ ಇಲ್ಲ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2025, 4:04 IST
Last Updated 18 ಆಗಸ್ಟ್ 2025, 4:04 IST
ನಾಡ ಕಚೇರಿ
ನಾಡ ಕಚೇರಿ   

ವಿಟ್ಲ: ವಿಟ್ಲ ಹೋಬಳಿಗೆ ಸಂಬಂಧಿಸಿದ ನಾಡಕಚೇರಿಯ ನೂತನ ಕಟ್ಟಡ ಉದ್ಘಾಟನೆಗೊಂಡರೂ ಮೂಲ ಸವಲತ್ತಿನ ಕೊರತೆಯಿಂದ ಸಾರ್ವಜನಿಕರು, ಇಸಬ್ಬಂದಿ ತೊಂದರೆ ಅನುಭವಿಸುತ್ತಿದ್ದಾರೆ.

ಹೋಬಳಿಗೆ ಸಂಬಂಧಿಸಿ ನಾಡಕಚೇರಿಗೆ ನೂತನ ಕಟ್ಟಡ ನಿರ್ಮಿಸಿ ಕಚೇರಿ ಸ್ಥಳಾಂತರಿಸಲಾಗಿದೆ. ಆದರೆ, ಇಲ್ಲಿ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ಪ್ರಿಂಟರ್, ಇನ್ವರ್ಟರ್ ಇಲ್ಲದೆ ಜನರ ಕೆಲಸಗಳು ಸಮರ್ಪಕವಾಗಿ ನಡೆಯುತ್ತಿಲ್ಲ.

ಈ ಹಿಂದೆ ವಿಟ್ಲ ನಾಡಕಚೇರಿ ಕಟ್ಟಡ ಐ.ಬಿ (ಅತಿಥಿಗೃಹ)ದ ಪಕ್ಕದ ಹಳೆಯ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿತ್ತು. ಇಲ್ಲಿ ದಾಖಲೆ ಪತ್ರ ಕೊಠಡಿ, ಜನಸ್ನೇಹಿ ಕೇಂದ್ರ (ನೆಮ್ಮದಿ ಕೇಂದ್ರ), ಉಪ ತಹಶೀಲ್ದಾರ್ ಕಚೇರಿ, ಆಧಾರ್ ಕೇಂದ್ರ ಕಾರ್ಯಾಚರಿಸುತ್ತಿತ್ತು. ಅದು ಶಿಥಿಲಗೊಂಡು ಕುಸಿಯುವ ಹಂತದಲ್ಲಿತ್ತು. ಮಳೆಗಾಲದಲ್ಲಿ ಮಳೆ ನೀರು ಸೋರುತ್ತಿತ್ತು. ಇದನ್ನು ಮನಗಂಡ ಸಾರ್ವಜನಿಕರು ನೂತನ ಕಟ್ಟಡಕ್ಕೆ ಸ್ಥಳಾಂತರಿಸುವಂತೆ ಬೇಡಿಕೆ ಇಟ್ಟಿದ್ದರು.

ADVERTISEMENT

ನಿರ್ಮಿತಿ ಕೇಂದ್ರದ ವತಿಯಿಂದ ಸುಮಾರು ₹ 17 ಲಕ್ಷ ಅನುದಾನದಲ್ಲಿ ಮೂರು ವರ್ಷಗಳ ಹಿಂದೆಯೇ ನಾಡಕಚೇರಿ ಕಟ್ಟಡ ನಿರ್ಮಿಸಲಾಗಿತ್ತು. ಕಟ್ಟಡ ನಿರ್ಮಾಣಗೊಂಡು ಕೆಲವು ಸಮಯಗಳ ಬಳಿಕ ಅಂದಿನ ಶಾಸಕ ಸಂಜೀವ ಮಠಂದೂರು ಚಾಲನೆ ನೀಡಿದ್ದರು. ಮೂರು ವರ್ಷ ಕಳೆದರೂ ಕಚೇರಿ ಸ್ಥಳಾಂತರ ಆಗಿರಲಿಲ್ಲ. ಕಳೆದ ವಾರ ಬಂಟ್ವಾಳ ತಹಶೀಲ್ದಾರ್ ಅವರು ನೂತನ ಕಟ್ಟಡಕ್ಕೆ ಸೇವಾ ಕೇಂದ್ರವನ್ನು ಸ್ಥಳಾಂತರಿಸಿ ಉದ್ಘಾಟಿಸಿದ್ದರು.

ಈ ನೂತನ ನಾಡಕಚೇರಿ ಕಟ್ಟಡದಲ್ಲಿ ದಾಖಲೆ ಪತ್ರ ಕೊಠಡಿ ಕೊಠಡಿ, ಜನಸ್ನೇಹಿ ಕೇಂದ್ರ (ನೆಮ್ಮದಿ ಕೇಂದ್ರ), ಉಪತಹಶೀಲ್ದಾರ್‌ ಕಚೇರಿ, ಆಧಾರ್ ಕೇಂದ್ರ ಕಾರ್ಯಾಚರಿಸುತ್ತಿದೆ. ಕಟ್ಟಡದ ಕಿಟಕಿಯ ಚೀಲಕ ಮುರಿದು ಬಿದ್ದಿದೆ. ಇಲ್ಲಿ ಬಹುತೇಕ ಮಹಿಳಾ ಸಿಬ್ಬಂದಿಯೇ ಕರ್ತವ್ಯ ನಿರ್ವಹಿಸುತ್ತಿದ್ದು, ಶೌಚಾಲಯ ವ್ಯವಸ್ಥೆ ಇಲ್ಲ. ಇನ್ವರ್ಟರ್ ಅಳವಡಿಸದ ಕಾರಣ ವಿದ್ಯುತ್‌ ಪೂರೈಕೆ ಸ್ಥಗಿತಗೊಂಡಾಗ ಜನರ ಕೆಲಸಗಳೂ ಸ್ಥಗಿತಗೊಳ್ಳುತ್ತವೆ. ಬುಧವಾದ ವಿಟ್ಲದಲ್ಲಿ ಇಡೀ ದಿನ ವಿದ್ಯುತ್ ನಿಲುಗಡೆ ಇರುವುದರಿಂದ ಅಂದು ಯಾವುದೇ ಕೆಲಸ ನಡೆಯುವುದಿಲ್ಲ.

ವಿವಿಧ ಸವಲತ್ತಿಗೆ ಅರ್ಜಿ ಸಲ್ಲಿಸುವರಿಗೆ ಹಿಂಬರಹ ನೀಡಲು ಒಂದೇ ಪ್ರಿಂಟರ್ ಇದೆ. ಎರಡು ಕೊಠಡಿ ಹಾಗೂ ಒಂದು ಹಾಲ್ ಇದ್ದು, ಒಂದು ಕೊಠಡಿಯನ್ನು ದಾಖಲೆ ಪತ್ರಕ್ಕೆ, ಮತ್ತೊಂದು ಕೊಠಡಿಯನ್ನು ಖಾಲಿ ಬಿಡಲಾಗಿದೆ. ಹಾಲ್‌ನಲ್ಲಿ ಉಪತಹಶೀಲ್ದಾರ್‌ ಕಚೇರಿ, ಆಧಾರ್ ಕೇಂದ್ರ, ಮತ್ತು ಜಾತಿ ಪ್ರಮಾಣ ಸೇರಿದಂತೆ ವಿವಿಧ ಅರ್ಜಿಗಳನ್ನು ಪಡೆಯುವ ಕೇಂದ್ರ ಇದೆ. ಕಟ್ಟಡ ನಿರ್ಮಾಣದ ಗುತ್ತಿಗೆ ಪಡೆದ ಸಂಸ್ಥೆ ಶೌಚಾಲಯ ನಿರ್ಮಿಸಿಲ್ಲ. ದಾನಿಗಳ ಸಹಕಾರದಲ್ಲಿ ಹೊರಗಡೆ ಸಿಮೆಂಟ್ ಶೀಟ್ ಅಳವಡಿಸಲಾಗಿದೆ. ಈ ಕಟ್ಟಡ ನಿರ್ಮಾಣದಲ್ಲಿ ಗುತ್ತಿಗೆದಾರನ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ತಕ್ಷಣವೇ ಇಲ್ಲಿಗೆ ಸುಸಜ್ಜಿತ ಶೌಚಾಲಯ, ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕೇವಲ ಕಾಟಾಚಾರಕ್ಕೆ ಕಟ್ಟಡ ನಿರ್ಮಾಣ ಮಾಡಿದಂತಾಗಿದೆ. ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನದಿಂದ ಕಾಮಗಾರಿ ನಡೆಸಲಾಗಿದೆ. ಇದಕ್ಕೆ ಸಂಬಂಧಪಟ್ಟ ಗುತ್ತಿಗೆದಾರನ ವಿರುದ್ಧ ಕ್ರಮ ಕೈಗೊಳ್ಳಬೇಕು
ರವಿಪ್ರಕಾಶ್, ಅಧ್ಯಕ್ಷ ಸ್ಥಾಯಿ ಸಮಿತಿ ವಿಟ್ಲ ಪಟ್ಟಣ ಪಂಚಾಯಿತಿ
ಇಲ್ಲಿ ಯಾವುದೇ ಸೌಸವಲತ್ತು ಇಲ್ಲ. ಜನರಿಗೆ ಮತ್ತು ಸಿಬ್ಬಂದಿಗೆ ಸಮಸ್ಯೆಯಾಗುತ್ತಿದೆ. ಮೂಲ ಸವಲತ್ತು ಒದಗಿಸುವಂತೆ ಸಿಬ್ಬಂದಿ, ಸಾರ್ವಜನಿಕರು ನಮ್ಮಲ್ಲಿ ಮನವಿ ಮಾಡಿದ್ದು, ಈ ಬಗ್ಗೆ ಗಮನಹರಿಸಲಾಗುವುದು.
ಬಾಬು ಕೆ.ವಿ., ಅಧ್ಯಕ್ಷ ವಿಟ್ಲ ವರ್ತಕರ ಸಂಘ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.