ವಿಟ್ಲ: ಇಲ್ಲಿನ ವಿಟ್ಲ ಪೇಟೆಯಲ್ಲಿ ಕೆಲವು ದಿನಗಳಿಂದ ಸಂಚಾರ ವ್ಯವಸ್ಥೆ ಸಮರ್ಪಕವಾಗಿದ್ದು, ಮಂಗಳವಾರ ಬೆಳಿಗ್ಗೆ ಏಕಾಏಕಿ ರಿಕ್ಷಾಗಳು ರಸ್ತೆಯಲ್ಲಿ ನಿಲ್ಲಲು ಪ್ರಾರಂಭವಾಗಿದೆ. ಅವರಿಗೆ ಅಲ್ಲಿ ನಿಲ್ಲಲು ಸೂಚನೆ, ಸಲಹೆ ನೀಡುವುದಾದರೆ ಪಟ್ಟಣ ಪಂಚಾಯಿತಿ ಆಡಳಿತ ವ್ಯವಸ್ಥೆ ಇರುವುದು ಯಾಕೆ?
ಮಂಗಳವಾರ ನಡೆದ ವಿಟ್ಲ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಇಂಥ ಪ್ರಶ್ನೆ ಮೂಡಿಬಂದಿತು.
ರಿಕ್ಷಾದವರಿಗೆ ಪರ್ಯಾಯ ವ್ಯವಸ್ಥೆಯನ್ನು ಮಾಡಿದ್ದು, ಇನ್ನಷ್ಟು ಬೇಕಾದರೆ ಪರ್ಯಾಯವಾಗಿ ಮಾಡಲಾಗುವುದು. ಅದು ಬಿಟ್ಟು ರಸ್ತೆಯಲ್ಲಿ ನಿಲ್ಲುವುದಕ್ಕೆ ಅವಕಾಶ ನೀಡಬಾರದು. ಪಟ್ಟಣ ಪಂಚಾಯಿತಿಯ ತೀರ್ಮಾನವನ್ನು ಶಾಸಕರಿಗೆ ತಿಳಿಸಿ, ಬಡವರಿಗೆ ಸಮಸ್ಯೆಯಾಗಿಲ್ಲ ಎಂಬುದನ್ನು ಮನವರಿಕೆ ಮಾಡಿದರೆ ಸರಿಯಾಗುತ್ತದೆ ಎಂದು ವಿಟ್ಲ ಪಟ್ಟಣ ಪಂಚಾಯಿತಿ ಸದಸ್ಯರು ಹೇಳಿದರು.
ಅಧ್ಯಕ್ಷ ಕರುಣಾಕರ ನಾಯ್ತೊಟ್ಟು ಅಧ್ಯಕ್ಷತೆ ವಹಿಸಿದ್ದರು.
ವಿಟ್ಲದ ಪಳಿಕೆ ಎಂಬಲ್ಲಿ ನಿರ್ಮಾಣಗೊಂಡಿರುವ ಪದವಿ ಪೂರ್ವ ಕಾಲೇಜು ಕಟ್ಟಡದ ಬಗ್ಗೆ ಚರ್ಚೆ ನಡೆಯಿತು.
ವಿದ್ಯುತ್ ಮಾರ್ಗ ವಿರೋಧಿಸಿದ ಸದಸ್ಯರು: ಐದು ವರ್ಷಗಳಿಂದ ಉಡುಪಿ-ಕಾಸರಗೋಡು 400 ಕೆ.ವಿ ವಿದ್ಯುತ್ ಪ್ರಸರಣ ಮಾರ್ಗದ ವಿರುದ್ಧ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಯಿತು.
ಖಾಸಗಿ ಒಡೆತನದ ಯುಕೆಟಿಸಿಎಲ್ ಕಂಪನಿಯ ಇನ್ನೊಂದು ಖಾಸಗಿ ಸಂಸ್ಥೆಯಾದ ಸ್ಪೆರ್ಲೈಟ್ ವಿದ್ಯುತ್ ಪ್ರಸರಣ ಮಾರ್ಗವನ್ನು ಅನುಷ್ಠಾನ ಮಾಡುತ್ತಿದೆ. ವಿಟ್ಲ ಪಟ್ಟಣ ಪಂಚಾಯಿತಿಯ ಸೂಚನಾ ಫಲಕದಲ್ಲಿ ಕೆಲವು ಗ್ರಾಮಗಳ ಭೂಮಿಯ ಸರ್ವೆ ನಂಬರ್‌ಗಳನ್ನು ಕಂಪನಿಯವರು ಹಾಕಿಸಿ ಈ ಸರ್ವೆ ನಂಬರ್‌ಗಳ ಭೂಮಿಯಲ್ಲಿ ಮನೆ, ಕಟ್ಟಡ ಕಟ್ಟುವರೇ ಜನರು ಅರ್ಜಿ ಹಾಕಿದರೆ ಪಂಚಾಯಿತಿ ನಿರಾಕ್ಷೇಪಣಾ ಪತ್ರ ನೀಡಬಾರದು ಎಂದು ಪಂಚಾಯಿತಿಗೆ ತಿಳಿಸಿದ್ದರು.
ಆದರೆ, ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಕಂಪನಿಯ ಸೂಚನೆಯನ್ನು ಖಂಡಿಸಲಾಯಿತು.
ಸ್ಥಾಯಿ ಸಮಿತಿ ಅಧ್ಯಕ್ಷ ರವಿಪ್ರಕಾಶ್, ಮುಖ್ಯಾಧಿಕಾರಿ ಕರುಣಾಕರ ವಿ., ಸಮುದಾಯ ಸಂಘಟನಾಧಿಕಾರಿ ಶ್ರೀಶೈಲ ಸಂಕನ ಗೌಡ, ಎಂಜಿನಿಯರ್ ಡೊಮಿನಿಕ್ ಡಿಮೆಲ್ಲೊ, ಸದಸ್ಯರಾದ ಅರುಣ್ ಎಂ.ವಿಟ್ಲ, ವಿ.ಕೆ.ಎಂ. ಅಶ್ರಫ್, ಹಸೈನಾರ್ ನೆಲ್ಲಿಗುಡ್ಡೆ, ಅಶೋಕ್ ಕುಮಾರ್ ಶೆಟ್ಟಿ, ವಸಂತ, ಗೋಪಿ ಕೃಷ್ಣ, ರಕ್ಷಿತಾ ಸನತ್, ಡೀಕಯ್ಯ, ಜಯಂತ ಸಿ.ಎಚ್., ವಿಜಯಲಕ್ಷ್ಮೀ, ಸುನೀತಾ, ಲತಾವೇಣಿ, ಪದ್ಮಿನಿ, ಶಾಕೀರಾ, ನಾಮನಿರ್ದೇಶಿತ ಸದಸ್ಯರಾದ ಮಹಮ್ಮದ್ ಇಕ್ಬಾಲ್ ಹಾನೆಸ್ಟ್, ಶ್ರೀನಿವಾಸ ಶೆಟ್ಟಿ ಕೊಲ್ಯ, ಸುನೀತಾ ಕೋಟ್ಯಾನ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.