ADVERTISEMENT

‘ಸಂತೆ ವ್ಯಾಪಾರ ಹರಾಜು ಪ್ರಕ್ರಿಯೆ ಪಾರದರ್ಶಕ’

ವಿಟ್ಲ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2026, 7:19 IST
Last Updated 1 ಫೆಬ್ರುವರಿ 2026, 7:19 IST
ವಿಟ್ಲ ಪಟ್ಟಣ ಪಂಚಾಯಿತಿ ಸಭೆ ಕರುಣಾಕರ ನಾಯ್ತೊಟ್ಟು ಅವರ ಅಧ್ಯಕ್ಷತೆಯಲ್ಲಿ ನಡೆಯಿತು
ವಿಟ್ಲ ಪಟ್ಟಣ ಪಂಚಾಯಿತಿ ಸಭೆ ಕರುಣಾಕರ ನಾಯ್ತೊಟ್ಟು ಅವರ ಅಧ್ಯಕ್ಷತೆಯಲ್ಲಿ ನಡೆಯಿತು   

ವಿಟ್ಲ: ಆಡಳಿತ ಪಕ್ಷಗಳ ಒಮ್ಮತದ ನಿರ್ಣಯದಂತೆ ಹರಾಜು ಪ್ರಕ್ರಿಯೆ ನಡೆದಿದ್ದು ಎಲ್ಲವೂ ಪಾರದರ್ಶಕವಾಗಿದೆ ಎಂದು ವಿಟ್ಲ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕರುಣಾಕರ ತಿಳಿಸಿದರು.

ವಿಟ್ಲ ಪಟ್ಟಣ ಪಂಚಾಯಿತಿ ಅಧ್ಯಕ್ಷ ಕರುಣಾಕರ ನಾಯ್ತೊಟ್ಟು ಅವರ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಸ್ಪಷ್ಟಪಡಿಸಿದರು.

ವಿಟ್ಲ ಪಂಚಲಿಂಗೇಶ್ವರ ದೇವರ ಜಾತ್ರೋತ್ಸವ ಸಂತೆ ಟೆಂಡರ್ ಪಡೆದ ವ್ಯಕ್ತಿ ಜಾತ್ರೆಗದ್ದೆಯಲ್ಲಿ ಅಂಗಡಿ ಹಾಕಿದವರಿಂದ ನಿಗದಿ ಪಡಿಸಿದ್ದಕ್ಕಿಂತ ಹೆಚ್ಚು ಹಣ ವಸೂಲಿ ಮಾಡಿದ್ದಾರೆ ಎಂಬ ಆರೋಪದ ಬಗ್ಗೆ ಸಭೆಯಲ್ಲಿ ಸ್ಪಷ್ಟನೆ ನೀಡಿದ ಮುಖ್ಯಾಧಿಕಾರಿ, ಟೆಂಡರ್ ಪಡೆದ ವ್ಯಕ್ತಿ ಹೆಚ್ಚುವರಿ ಹಣ ವಸೂಲಿ ಮಾಡಿದ ಬಗ್ಗೆ ಸಂತೆ ವ್ಯಾಪಾರಿಯೊಬ್ಬರು ದೂರು ನೀಡಿದ್ದಾರೆ. ಹಣ ಪಡೆದ ಮತ್ತು ನೀಡಿದ ಬಗ್ಗೆ ದಾಖಲೆಗಳಿದ್ದರೆ ವಿಚಾರಣೆ ನಡೆಸಿ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

ADVERTISEMENT

ಅಡಳಿತ ಪಕ್ಷದ ಹಿರಿಯ ಸದಸ್ಯ ಅರುಣ್ ಅವರ ಎತ್ತಿದ ಪ್ರಶ್ನೆಗೆ ಪ್ರತಿಪಕ್ಷದ ವಿಕೆಎಂ ಆಶ್ರಫ್ ಮತ್ತು ಹಸೈನಾರ್ ನೆಲ್ಲಿಗುಡ್ಡೆ ಧ್ವನಿಗೂಡಿಸಿದರು.
ಜಾತ್ರೆಗದ್ದೆಗೆ 67 ಅಂಗಡಿಗಳು ಬಂದಿದ್ದು, ಈ ವರ್ಷ ಕಳೆದ ವರ್ಷಕ್ಕಿಂತ ಅಧಿಕ ಆದಾಯ ಬಂದಿದೆ ಎಂದು ಮುಖ್ಯಾಧಿಕಾರಿ ತಿಳಿಸಿದರು.

ಸಾಮಾಜಿಕ ಜಾಲತಾಣಗಳಲ್ಲಿ ಪಟ್ಟಣ ಪಂಚಾಯಿತಿ ಅಭಿವೃದ್ಧಿ ಶುಲ್ಕದ ನಡೆಯುತ್ತಿರುವ ಅಪಪ್ರಚಾರ ಬಗ್ಗೆ ಸಭೆಯಲ್ಲಿ ಅಧ್ಯಕ್ಷರು ಮತ್ತು ಮುಖ್ಯಾಧಿಕಾರಿ ಸದಸ್ಯರಿಗೆ ಹೊಸ ಬೈಲಾ ಮತ್ತು ಅಭಿವೃದ್ಧಿ ಶುಲ್ಕದ ಬಗ್ಗೆ ಮಾಹಿತಿ ನೀಡಿದರು.

ಸಭೆ ಆರಂಭ ಆಗುತ್ತಿದ್ದಂತೆ ಪ್ರತಿಪಕ್ಷ ನಾಯಕ ವಿಷಯ ಪ್ರಸ್ತಾಪಿಸಿ ಈ ಬಗ್ಗೆ ಮಾಹಿತಿ ಬೇಕು ಎಂದರು.
ಜಿಲ್ಲೆಯ ಇತರ ಪಟ್ಟಣ ಪಂಚಾಯಿತಿಗಳಿಗೆ ಹೋಲಿಕೆ ಮಾಡಿ ವಿಟ್ಲ ಪಟ್ಟಣ ಪಂಚಾಯಿತಿಯನ್ನು ತುಲನೆ ಮಾಡಿ ಅಭಿವೃದ್ಧಿ ಶುಲ್ಕದ ಹೆಸರಿನಲ್ಲಿ ಜನರ ಜೇಬಿಗೆ ನೇರವಾಗಿ ಕೈ ಹಾಕಲಾಗಿದೆ ಎಂಬ ಆರೋಪ ಮಾಡಲಾಗಿದೆ. ಆದರೆ ಹೋಲಿಕೆ ಮಾಡಲಾದ ಇತರ ಪಟ್ಟಣ ಪಂಚಾಯಿತಿಗಳಲ್ಲಿ ಇನ್ನೂ ಹೊಸ ಬೈಲಾ ಜಾರಿಯಾಗಿಲ್ಲ. ಹೊಸ ಬೈಲಾ ಬಂದರೆ ಅಲ್ಲಿ ಕೂಡ ಅಭಿವೃದ್ಧಿ ಶುಲ್ಕ ಹೆಚ್ಚಳ ಆಗಲಿದೆ. ಇಲ್ಲಿ ಹೊಸ ಬೈಲಾ ಸಮಿತಿ ರಚಿಸಿ ಅಭಿವೃದ್ಧಿ ಶುಲ್ಕ ಬಗ್ಗೆ ನಿರ್ಣಯ ಮಾಡಲಾಗಿದೆ ಎಂದು ಮುಖ್ಯಾಧಿಕಾರಿ ತಿಳಿಸಿದರು.

ಅಗ್ನಿಶಾಮಕದಳಕ್ಕೆ ನೆಲ್ಲಿಗುಡ್ಡೆಯಲ್ಲಿ ಅಗ್ನಿಶಾಮಕ ಠಾಣೆಗೆ ಸ್ಥಳ ಮಂಜೂರಾತಿಗೆ ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ಮನವಿ ಮಾಡಿದ್ದರು. ಅಗ್ನಿಶಾಮಕ ಅಧಿಕಾರಿಗಳು ಕೋರಿಕೆ ಸಲ್ಲಿಸಿದ ಸ್ಥಳ ಪಟ್ಟಣ ಪಂಚಾಯತಿ ಕಚೇರಿ ನಿರ್ಮಾಣಕ್ಕೆ ಕಾದಿರಿಸಲಾಗಿದೆ. ಹಾಗಾಗಿ ವಿಟ್ಲ ಕಸಬಾ ಗ್ರಾಮದ ನೆಲ್ಲಿಗುಡ್ಡೆಯಲ್ಕಿ ಸ್ಥಳ ಪರಿಶೀಲನೆ ಮಾಡಿ ನೀಡಲು ಪಂಚಾಯತಿ ಸಭೆ ನಿರ್ಣಯ ಕೈಗೊಂಡಿತು.

ಬೀದಿನಾಯಿಗಳ ನಿಯಂತ್ರಣಕ್ಕೆ ಕ್ರಮ:

ನಾಲ್ಕು ಮಾರ್ಗ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಸಹಿತ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆದು ನಿರ್ಣಯ ಕೈಗೊಳ್ಳಲಾಯಿತು. ಸಭಾ ಕಲಾಪದ ಮೊದಲು ನೀರಾವರಿ ಇಲಾಖೆಯ ಅಧಿಕಾರಿ ಶೋಭಾ ಮತ್ತು ಇತರರು ಬಹುಗ್ರಾಮ ಕುಡಿಯುವ ನೀರು ಯೋಜನೆಯ ಕುರಿತು ಮಾಹಿತಿ ನೀಡಿದರು.

ಸಭೆಯಲ್ಲಿ ಪಟ್ಟಣ ಪಂಚಾಯತಿ ಅಧ್ಯಕ್ಷ ಕರುಣಾಕರ ನಾಯ್ತೊಟ್ಟು, ಉಪಾಧ್ಯಕ್ಷೆ ಸಂಗೀತಾ ಪಾಣೆಮಜಲು, ಸ್ಥಾಯಿ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಕಂದಾಯ ವಸೂಲಿಗಾರ ಚಂದ್ರಶೇಖರ ವರ್ಮ, ಪಂಚಾಯಿತಿ ಸದಸ್ಯರು, ವಿವಿಧ ಇಲಾಖೆ ಅಧಿಕಾರಿಗಳು, ಪಂಚಾಯಿತಿ ಸಿಬ್ಬಂದಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.