ADVERTISEMENT

ದುಸ್ವಪ್ನವಾಗಿ ಕಾಡುವ ‘ಹೆದ್ದಾರಿ’ ಅಪಘಾತದ ಹೆಮ್ಮಾರಿ

ಪ್ರವೀಣ್‌ ಕುಮಾರ್‌ ಪಿ.ವಿ
Published 14 ಅಕ್ಟೋಬರ್ 2025, 7:06 IST
Last Updated 14 ಅಕ್ಟೋಬರ್ 2025, 7:06 IST
ನಂದಿನಿ ನದಿಯನ್ನು ಸೇರುವ ತೊರೆಗೆ  ಮುಕ್ಕ ಬಳಿ ಕಲುಷಿತ ನೀರು ಸೇರುವುದರಿಂದ ಅದರ ಒಡಲ ತುಂಬಾ ಕಳೆ ಬೆಳೆದಿರುವುದು 
ನಂದಿನಿ ನದಿಯನ್ನು ಸೇರುವ ತೊರೆಗೆ  ಮುಕ್ಕ ಬಳಿ ಕಲುಷಿತ ನೀರು ಸೇರುವುದರಿಂದ ಅದರ ಒಡಲ ತುಂಬಾ ಕಳೆ ಬೆಳೆದಿರುವುದು    

ಮಂಗಳೂರು: ಶರವೇಗದಲ್ಲಿ ಸಾಗುವ ವಾಹನಗಳು, ಪದೇ ಪದೇ ಸಂಭವಿಸುವ ಅಪಘಾತಗಳು, ಪಾಲಿಕೆಯ ಉತ್ತರದ ತುತ್ತ ತುದಿಯಲ್ಲಿರುವ ಸುರತ್ಕಲ್ ಪೂರ್ವ ವಾರ್ಡ್‌ನ ನಿವಾಸಿಗಳನ್ನು ದುಃಸ್ವಪ್ನದಂತೆ ಕಾಡುತ್ತಿದೆ. ಇನ್ನೊಂದೆಡೆ ವಾರ್ಡ್‌ನ ನೆರೆಯ ಗ್ರಾಮದಲ್ಲಿರುವ ತ್ಯಾಜ್ಯ ನೀರು ಸಂಸ್ಕರಣಾ ಘಟಕದ ಅಸಮರ್ಪಕ ನಿರ್ವಹಣೆಯ ದುಷ್ಪರಿಣಾಮ ಈ ವಾರ್ಡ್‌ನ ನಿವಾಸಿಗಳನ್ನೂ ತಟ್ಟುತ್ತಿದೆ. 

ಮುಕ್ಕ ಜಂಕ್ಷನ್‌ನಲ್ಲಿ ಸಸಿಹಿತ್ಲು ಕಡೆಗೆ ಹಾಗೂ ಚೇಳಾಯ್ರು ಕಡೆಗೆ ಸಂಪರ್ಕಿಸುವ ಎರಡು ರಸ್ತೆಗಳು ರಾಷ್ಟ್ರೀಯ ಹೆದ್ದಾರಿಯನ್ನು ಸೇರುತ್ತವೆ. ಇಲ್ಲಿ ಸಂಚಾರ ಪೊಲೀಸರು ಬ್ಯಾರಿಕೇಡ್‌ಗಳನ್ನು ಅಳವಡಿಸಿ ಹೆದ್ದಾರಿಯಲ್ಲಿ ವಾಹನಗಳ ವೇಗಕ್ಕೆ ಕಡಿವಾಣ ಹಾಕುವ ಪ್ರಯತ್ನ ಮಾಡುತ್ತಾರೆ. ದಟ್ಟಣೆಯ ಅವಧಿಯಲ್ಲಿ ಪೊಲೀಸ್‌ ಸಿಬ್ಬಂದಿಯನ್ನೂ ನಿಯೋಜಿಸಲಾಗುತ್ತದೆ. ಆದರೂ, ಈ ಜಂಕ್ಷನ್‌ನಲ್ಲಿ  ಅಪಘಾತ ಮರುಕಳಿಸುತ್ತಲೇ ಇದೆ. ಸಸಿಹಿತ್ಲು ಕಡೆಯಿಂದ ಹಾಗೂ ಚೇಳಾಯ್ರು ಕಡೆಯಿಂದ ಬರುವ ವಾಹನಗಳು ಸುರತ್ಕಲ್ ಕಡೆಗೆ ಸಾಗಲು ಹೆದ್ದಾರಿ ಸೇರಲು ಹರಸಾಹಸ ಪಡಬೇಕಾದ ಸ್ಥಿತಿ ಇದೆ. ತಿಂಗಳ ಹಿಂದೆ ಮುಕ್ಕ ಜಂಕ್ಷನ್‌ನಲ್ಲಿ ಸಂಭವಿಸಿದ ಅಪಘಾತದಲ್ಲಿ ಕಾರು ಡಿಕ್ಕಿ ಹೊಡೆದ ರಭಸಕ್ಕೆ ಸ್ಕೂಟರ್‌ ಸವಾರ (ಕರುಣಾಕರ ಈಶ್ವರ ಶೆಟ್ಟಿ)  ಸ್ಥಳದಲ್ಲೇ ಮೃತಪಟ್ಟಿದ್ದು, ಸಹ ಸವಾರ ಬಾಲಕ ಗಂಭೀರವಾಗಿ ಗಾಯಗೊಂಡಿದ್ದ.  

ಪಾಲಿಕೆ ವ್ಯಾಪ್ತಿಯಲ್ಲೇ ಇದ್ದರೂ ಗ್ರಾಮೀಣ ಸೊಗಡನ್ನು ತೀರಾ ಇತ್ತೀಚಿನವರೆಗೂ ಉಳಿಸಿಕೊಂಡಿದ್ದ ವಾರ್ಡ್‌ ಇದು. ಎನ್‌ಐಟಿಕೆ, ಮುಕ್ಕದ ಶ್ರೀನಿವಾಸ ಪರಿಗಣಿತ ವಿಶ್ವವಿದ್ಯಾಲಯ ಮತ್ತು ವೈದ್ಯಕೀಯ ಕಾಲೇಜುಗಳಿಂದಾಗಿ ಈ ಪ್ರದೇಶದಲ್ಲಿ ಜನವಸತಿ ವ್ಯಾಪಕವಾಗಿ ಹೆಚ್ಚಿದೆ. ಅಣಬೆಯಂತೆ ತಲೆ ಎತ್ತಿರುವ ಪಿ.ಜಿ.ಗಳು ಹೊಸ ಹೊಸ ಸಮಸ್ಯೆಗಳಿಗೆ ಕಾರಣವಾಗುತ್ತಿವೆ. 

ADVERTISEMENT

ಈಚಿನ ವರ್ಷಗಳಲ್ಲಿ ಗಾಂಜಾ ಹಾವಳಿ ಕಾಣಿಸಿಕೊಂಡಿದೆ. ಕತ್ತಲಾವರಿಸುವ ಹೊತ್ತಿನಲ್ಲಿ ಇಲ್ಲಿನ ಕಡಲ ಕಿನಾರೆ ಬಳಿ ನಶೆಯೇರಿಸಿಕೊಂಡವರು ಇಲ್ಲಿ ಮಾಮೂಲಿ ಎಂಬಂತಾಗಿದೆ ಎನ್ನುತ್ತಾರೆ ಸ್ಥಳೀಯರು. 

ವಾರ್ಡ್‌ನ ಬಹುತೇಕ ಕಡೆ ರಸ್ತೆಗಳ ಸಂಪರ್ಕ ಚೆನ್ನಾಗಿದೆ. ಆದರೆ ಇಲ್ಲಿನ ಕೆಲ ಒಳ ರಸ್ತೆಗಳು ಕೆಟ್ಟು ಹೋಗಿವೆ. ಕೆಲವು ಕಡೆ ಒಳಚರಂಡಿ ಸಂಪರ್ಕ ಇಲ್ಲ. ಕೆಲವೊಮ್ಮೆ ಬೀದಿ ದೀಪಗಳೂ ಕೈಕೊಡುತ್ತವೆ. ಬೇಸಿಗೆಯಲ್ಲಿ ಈ ಪ್ರದೇಶದಲ್ಲಿ ನೀರಿನ ಕೊರತೆ ತೀವ್ರವಾಗಿರುತ್ತದೆ. ಟ್ಯಾಂಕ್‌ ನೀರಿನ ವ್ಯವಸ್ಥೆ ಕಲ್ಪಿಸಲಾಗುತ್ತದೆಯಾದರೂ ಅದು ಯಾವುದಕ್ಕೂ ಸಾಲದು ಎನ್ನುತ್ತಾರೆ ಸ್ಥಳೀಯರು. 

ವಾರ್ಡ್‌ನ ವಿಶೇಷ

ಮಂಗಳೂರು ಮಹಾನಗರ ಪಾಲಿಕೆಯ ಉತ್ತರದ ತುತ್ತ ತುದಿಯ ವಾರ್ಡ್‌ ಇದು. ದೇಶದ ಗಮನ ಸೆಳೆದ ಎನ್‌ಐಟಿಕೆ ಪ್ರಾಂಗಣ ಮುಕ್ಕದ ಶ್ರೀನಿವಾಸ ವಿಶ್ವವಿದ್ಯಾಲಯ ಹಾಗೂ ವೈದ್ಯಕೀಯ ಕಾಲೇಜು ಇರುವುದು ಇದೇ ವಾರ್ಡ್‌ನಲ್ಲಿ. ಈ ಸಂಸ್ಥೆಗಳಿಂದಾಗಿ  ಈ ಪ್ರದೇಶದ ನಗರೀಕರಣ ಪ್ರಕ್ರಿಯೆ ವೇಗ ಪಡೆದಿದೆ. ಇದರೊಂದಿಗೆ ಹೊಸ ಸವಾಲುಗಳೂ ಈ ವಾರ್ಡ್‌ನ ನಿವಾಸಿಗಳನ್ನು ಕಾಡುತ್ತಿವೆ. ರಾಷ್ಟ್ರೀಯ ಹೆದ್ದಾರಿ 66 ಈ ವಾರ್ಡ್‌ ಅನ್ನು ಸೀಳಿಕೊಂಡು ಸಾಗುತ್ತದೆ. ವಾರ್ಡ್‌ನ ಬಹುತೇಕ ಪ್ರದೇಶ ಈ ಹೆದ್ದಾರಿಯ ಪೂರ್ವ ಭಾಗದಲ್ಲಿದ್ದರೆ ಒಂದು ಸಣ್ಣ ಚಾಚು ಮಾತ್ರ ಪಶ್ಚಿಮ ಭಾಗದಲ್ಲಿ ಹರಡಿದೆ.  

‘ನಂದಿನಿಯ ತೊರೆಗೆ ಕಲುಷಿತ ನೀರು’

ಮುಂಚೂರಿನ ದ್ರವತ್ಯಾಜ್ಯ ಸಂಸ್ಕರಣಾ ಘಟಕದಿಂದ ಶುದ್ಧೀಕರಗೊಳ್ಳದ ನೀರು ಮುಕ್ಕ ಬಳಿ ನಂದಿನಿ ನದಿಯನ್ನು ಸೇರುವ ತೊರೆಯ ಒಡಲು ಸೇರುತ್ತದೆ. ಇಲ್ಲಿನ ಖಾಸಗಿ ವಿದ್ಯಾ ಸಂಸ್ಥೆಗಳೂ ಇಟಿಪಿ ಅಳವಡಿಸಿಕೊಂಡಿರುವುದಾಗಿ ಹೇಳಿಕೊಂಡರೂ ಅಲ್ಲಿನ ಕಲುಷಿತ ನೀರೂ ಈ ತೊರೆಯನ್ನು ಸೇರುತ್ತಿದೆ ಎಂದು ಸ್ಥಳೀಯರು. ಕಲುಷಿತ ನೀರು ಸೇರಿ ಸುತ್ತಮುತ್ತಲ ಪರಿಸರದ ಬಾವಿಗಳ ನೀರೂ ಹಾಳಾಗಿದೆ. ‘ಈ ತೊರೆಗೆ ಕೃಷಿ ಹಾಗೂ ಕುಡಿಯುವ ನೀರು ಪೂರೈಕೆ ಉದ್ದೇಶದಿಂದ 1953ರಲ್ಲಿ ಕಿಂಡಿ ಅಣೆಕಟ್ಟು ಕಟ್ಟಲಾಗಿತ್ತು. ದಶಕದ ಈಚಿನವರೆಗೂ ಸ್ವಚ್ಛ ನೀರು ಈ ತೊರೆಯಲ್ಲಿ ಹರಿಯುತ್ತಿತ್ತು. ನಾವು ಅದರಲ್ಲಿ ಆಡಿಕೊಂಡು ಮೀನು ಹಿಡಿಯುತ್ತಿದ್ದೆವು. ಕಂಡೇವು ಮೀನು ಹಡಿಯುವ ಜಾತ್ರೆಯಂತೂ ತುಂಬಾ ಪ್ರಸಿದ್ಧಿ. ಆದರೆ ಟ್ಟಿನ ಹಲಗೆ ಹಾಕಲಾಗುತ್ತದೆ. ಆಗ ಕಲುಷಿತ ನೀರು ಸಂಗ್ರಹಗೊಂಡು ಅದರ ತುಂಬಾ ಕಳೆ ಸಸ್ಯ ಬೆಳೆಯುತ್ತದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಬೇಕು’ ಎಂದು ನಂದಿನಿ ಸಂರಕ್ಷಣಾ ಸಮಿತಿಯ ಸುಕೇಶ್‌ ಶೆಟ್ಟಿ ಒತ್ತಾಯಿಸಿದರು.    

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.