ADVERTISEMENT

ಸಂವಿಧಾನ ರಕ್ಷಣೆಗೆ ಸತ್ಯಾಗ್ರಹ, ಮಾನವ ಸರಪಳಿ ನಾಳೆ

ವಿ ದಿ ಪೀಪಲ್ ಸಂಘಟನೆ ನೇತೃತ್ವದಲ್ಲಿ ಮಹಿಳೆಯರಿಂದ ಜಾಗೃತಿ

​ಪ್ರಜಾವಾಣಿ ವಾರ್ತೆ
Published 28 ಜನವರಿ 2020, 15:36 IST
Last Updated 28 ಜನವರಿ 2020, 15:36 IST
‘ವಿ ದಿ ಪೀಪಲ್‌’ ಸಂಘಟನೆಯ ಮಹಿಳೆಯರು ಮಂಗಳವಾರ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದರು 
‘ವಿ ದಿ ಪೀಪಲ್‌’ ಸಂಘಟನೆಯ ಮಹಿಳೆಯರು ಮಂಗಳವಾರ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದರು    

ಮಂಗಳೂರು: ಸಂವಿಧಾನದ ರಕ್ಷಣೆಗಾಗಿ ಮಹಾತ್ಮ ಗಾಂಧಿ ಪುಣ್ಯತಿಥಿಯ ಜ.30ರಂದು ‘ವಿ ದಿ ಪೀಪಲ್’ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಮಹಿಳೆಯರು ಒಂದು ದಿನ ಸತ್ಯಾಗ್ರಹ ನಡೆಸಲಿದ್ದು, ಸಂಜೆ 4.30ರಿಂದ ‘ಹಿಂಸೆಯ ವಿರುದ್ಧ ಐಕ್ಯತೆ’ ಎಂಬ ಘೋಷಣೆ ಅಡಿಯಲ್ಲಿ ಮಾನವ ಸರಪಳಿ ನಿರ್ಮಿಸಲಿದ್ದಾರೆ.

ಈ ಕುರಿತು ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಸಾಜಿದ ಮುಮಿನ್ , ‘ ಗಾಂಧಿ ಹುತಾತ್ಮರಾಗಿ ಏಳು ದಶಕಗಳು ಸಂದಿವೆ. ಆದರೆ, ಈಚಿನ ವರ್ಷಗಳಲ್ಲಿ ಗಾಂಧೀ ಆಶಯಗಳಿಂದ ದೂರ ಸರಿದಿರುವ ಹಾಗೂ ಹಂತಕ ಗೋಡ್ಸೆಯನ್ನು ವೈಭೀಕರಿಸುವ ಮಂದಿ ಜನಪ್ರತಿನಿಧಿಗಳಾಗಿ ಆಯ್ಕೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಗಾಂಧಿ ಹಾಗೂ ಸಂವಿಧಾನದ ಬಗ್ಗೆ ಈ ತಲೆಮಾರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಸತ್ಯಾಗ್ರಹವನ್ನು ಆಯೋಜಿಸಲಾಗಿದೆ’ ಎಂದರು.

‘ ಅಂದು ಜಿಲ್ಲಾಧಿಕಾರಿ ಕಚೇರಿ ಎದುರು ಬೆಳಿಗ್ಗೆ 10 ಗಂಟೆಯಿಂದ ಸುಮಾರು 100ರಷ್ಟು ಮಹಿಳೆಯರು ಸತ್ಯಾಗ್ರಹ ನಡೆಸಲಿದ್ದೇವೆ. ಇದು ಘೋಷಣೆ, ಮೈಕ್ ರಹಿತ ಮೌನ ಸತ್ಯಾಗ್ರಹವಾಗಲಿದೆ. ಗಾಂಧೀಜಿ ಅವರನ್ನು ಹತ್ಯೆ ಮಾಡಿದ ಸಂಜೆ 5.17ಕ್ಕೆ ಮಾನವ ಸರಪಳಿಯ ಮೂಲಕ ಹಿಂಸೆಯ ವಿರುದ್ಧ ಐಕ್ಯತೆಯನ್ನು ಸಾರಲಾಗುವುದು’ ಎಂದು ವಿವರ ನೀಡಿದರು.

ADVERTISEMENT

‘ಗಾಂಧೀಜಿ ಇಲ್ಲದ ಸ್ವಾತಂತ್ರ ಹೋರಾಟವನ್ನು ನಾವು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅವರಿಗೆ ಗುಂಡಿಕ್ಕಿದ ಗೋಡ್ಸೆಯನ್ನು ಅಂದು ಯಾರೂ ಬೆಂಬಲಿಸುತ್ತಿರಲಿಲ್ಲ. ಆದರೆ, ಇಂದು ದೇಶಪ್ರೇಮ ದೂರವಾಗಿ ಗೋಡ್ಸೆ ಹಾಗೂ ಅವರ ಚಿಂತನೆಯ ಪ್ರೇಮಿಗಳೇ ಹೆಚ್ಚಾಗುತ್ತಿದ್ದಾರೆ’ ಎಂದರು.

‘ಅಂಬೇಡ್ಕರ್ ದೇಶದ ಪ್ರಥಮ ಕಾನೂನು ಸಚಿವರಾದರು. ಸಂವಿಧಾನ ರಚನಾ ಸಮಿತಿಯ ನೇತೃತ್ವ ವಹಿಸಿ ಉನ್ನತ ಸಂವಿಧಾನ ನೀಡಿದರು. ಆದರೆ, ಇಂದು ಗೋಡ್ಸೆಯನ್ನು ನೆಚ್ಚಿಕೊಳ್ಳುವವರು ಮೇಳೈಸುತ್ತಿದ್ದಾರೆ. ಅಂಬೇಡ್ಕರ್ ರಚಿತ ಸಂವಿಧಾನವನ್ನು ಪರೋಕ್ಷವಾಗಿ ಅವಮಾನಿಸುವ ಹಾಗೂ ಪ್ರಶ್ನಿಸುವ ಕೆಲಸ ಮಾಡುತ್ತಿದ್ದಾರೆ. ಸಂವಿಧಾನ ಕೊಡಮಾಡಿದ ಮೂಲಭೂತ ಹಕ್ಕುಗಳನ್ನು ಕಿತ್ತುಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆ. ಈ ವಿಷಯಗಳ ಕುರಿತು ಜನ ಎಚ್ಚೆತ್ತುಕೊಳ್ಳುವುದು ಅನಿವಾರ್ಯವಾಗಿದೆ’ ಎಂದರು.

‘ಈ ಕಾರ್ಯಕ್ರಮಕ್ಕೆ ಪೊಲೀಸರಿಂದ ಈವರೆಗೂ ಅನುಮತಿ ದೊರಕಿಲ್ಲ. ಜಿಲ್ಲಾಧಿಕಾರಿ ಪರಿಶೀಲನೆ ಮಾಡುವುದಾಗಿ ಹೇಳಿದ್ದಾರೆ. 250 ಜನರೊಳಗೆ ನಡೆಸುವ ಸತ್ಯಾಗ್ರಹಕ್ಕೆ ಪೊಲೀಸರ ಅನುಮತಿಯ ಅಗತ್ಯವಿಲ್ಲ. ಹಾಗಿದ್ದರೂ ಪೊಲೀಸ್ ಆಯುಕ್ತರು ಪೂರಕವಾಗಿ ಸ್ಪಂದಿಸಲಿದ್ದಾರೆ ಎಂಬ ಭರವಸೆ ನಮಗಿದೆ’ ಎಂದು ಸಂಘಟನೆಯ ವಿದ್ಯಾ ದಿನಕರ್ ತಿಳಿಸಿದರು.

ಟೆರ್ರಿ ಪಾಯಸ್, ಸುಹಾಸಿನಿ ಬಬ್ಬುಕಟ್ಟೆ, ಮೆಹರ್, ಮರಿಯಾ ಫೆರ್ನಾಂಡಿಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.