ADVERTISEMENT

ಮಂಗಳೂರು: ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್‌ ಬಾಧಿತರ ಶುಶ್ರೂಷೆಗೆ ಮನೆ ಮಂದಿ

​ಪ್ರಜಾವಾಣಿ ವಾರ್ತೆ
Published 1 ಮೇ 2021, 15:48 IST
Last Updated 1 ಮೇ 2021, 15:48 IST
ವೆನ್ಲಾಕ್ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಆವರಣ
ವೆನ್ಲಾಕ್ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಆವರಣ   

ಮಂಗಳೂರು: ವೆನ್ಲಾಕ್ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ 250 ಬೆಡ್‌ಗಳನ್ನು ಜಿಲ್ಲಾಡಳಿತ ಕೋವಿಡ್‌ ಚಿಕಿತ್ಸೆಗೆ ಮೀಸಲಿಟ್ಟಿದೆ. ಆದರೆ ಇಲ್ಲಿ ಅಗತ್ಯ ದಾದಿಯರು (ನರ್ಸ್), ವೈದ್ಯರು ಇದ್ದಂತಿಲ್ಲ. ವಾರ್ಡ್‌ಗಳಲ್ಲಿ ಕೋವಿಡ್ ರೋಗಿಗಳ ಶುಶ್ರೂಷೆಗೆ ಅಗತ್ಯ ಸಿಬ್ಬಂದಿ ಇಲ್ಲ ಎಂದು ಒಳರೋಗಿಗಳ ಕುಟುಂಬದವರು ಆರೋಪಿಸಿದ್ದು, ಜಿಲ್ಲಾಡಳಿತ, ಚುನಾಯಿತ ಶಾಸಕರು, ಸಂಸದರು ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದು ಪಾಲಿಕೆ ಪ್ರತಿಪಕ್ಷದ ನಾಯಕ ಎ.ಸಿ. ವಿನಯರಾಜ್ ಆಗ್ರಹಿಸಿದ್ದಾರೆ.

ಶುಕ್ರವಾರ 74 ವಯಸ್ಸಿನ ಮಹಿಳೆಗೆ ಕೋವಿಡ್ ತಗಲಿದೆ ಎಂದು ಖಾಸಗಿ ಆಸ್ಪತ್ರೆ ವರದಿ ಕೊಟ್ಟಿದ್ದು, ವೆನ್ಲಾಕ್ ಆಸ್ಪತ್ರೆಯ ಕೋವಿಡ್ ಬ್ಲಾಕ್‌ನಲ್ಲಿ ಒಳರೋಗಿಯಾಗಿ ‘ಬಿ ವಾರ್ಡ್’ನಲ್ಲಿ ತಡರಾತ್ರಿ ದಾಖಲು ಮಾಡಲಾಗಿದೆ. ಸೋಂಕಿತ ಮಹಿಳೆಯ ಶುಶ್ರೂಷೆ ಮಾಡಲು ರೋಗಿಯ ಸೊಸೆಗೆ ಹೇಳಿರುವುದು ಹಾಗೂ ಜೊತೆಯಲ್ಲಿರುವಂತೆ ಮಾಡಿದ್ದು ವೈದ್ಯರ ಬೇಜವಾಬ್ದಾರಿತನ ಎಂದು ದೂರಿದ್ದಾರೆ.

‘ಮಹಿಳೆಯ ಸೊಸೆಗೂ ಕೋವಿಡ್ ತಗುಲಿ ಜೀವಕ್ಕೆ ಅಪಾಯವಾದರೆ ಯಾರು ಹೊಣೆ? ಅವರು ನೀಡಿದ ಮಾಹಿತಿ ಪ್ರಕಾರ ಆ ವಾರ್ಡ್‌ನಲ್ಲಿ ಸುಮಾರು 6 ಜನ ಸೋಂಕಿತರಿದ್ದು, ಅವರ ಶುಶ್ರೂಷೆಗೂ ಮನೆ ಮಂದಿಯನ್ನು ವೈದ್ಯರು ನೇಮಿಸಿದ್ದಾರೆ. ವೈದ್ಯರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಕಾಂಗ್ರೆಸ್ ಪಕ್ಷ ಆಗ್ರಹಿಸುತ್ತದೆ’ ಎಂದು ತಿಳಿಸಿದ್ದಾರೆ.

ADVERTISEMENT

‘ಕೋವಿಡ್‌ ನಿಯಮ ಪಾಲನೆ’: ‘ಈ ಪ್ರಕರಣದಲ್ಲಿ ರೋಗಿಗೆ ವಯಸ್ಸಾಗಿದ್ದರಿಂದ ಸಂಬಂಧಿಕರು ಹಠ ಹಿಡಿದಿದ್ದರು. ಹಾಗಾಗಿ ಅವರನ್ನು ಜತೆಯಲ್ಲೇ ಇರಿಸಲಾಗಿತ್ತು. ವೈದ್ಯರು, ನರ್ಸ್‌ ಆದೇಶ ಅಲ್ಲ ಎಂದು ವೆನ್ಲಾಕ್‌ ವೈದ್ಯಾಧಿಕಾರಿ ತಿಳಿಸಿದ್ದಾರೆ. ಆದಾಗ್ಯೂ ಕೋವಿಡ್‌ ರೋಗಿಗಳ ಬಗ್ಗೆ ಸರ್ಕಾರದ ನಿಯಮಾವಳಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು, ಸಂಬಂಧಿಕರನ್ನು ಹೊರ ಕಳಿಸಬೇಕು. ನೆಗೆಟೆವ್‌ ವರದಿ ಬರುವವರೆಗೆ ನಿರ್ಬಂಧ ಪಾಲಿಸಲು ಸೂಚನೆ ನೀಡಿದ್ದೇನೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಿಶೋರ್‌ಕುಮಾರ್‌ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.