
ಮಂಗಳೂರು: ‘ನಗರಕ್ಕೆ ಕುಡಿಯುವ ನೀರು ಪೂರೈಸುವ ಕೊಳವೆ ಒಡೆದಿದ್ದನ್ನು ದುರಸ್ತಿಗೊಳಿಸಲು ಪಾಲಿಕೆಗೆ ಮೂರು ದಿನಗಳು ಬೇಕೇ. ಲಕ್ಷಾಂತರ ಜನ ನೀರಿಲ್ಲದೇ ಪರದಾಡುವಾಗ ಕನಿಷ್ಠ ಪಕ್ಷ ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಪಾಲಿಕೆ ವ್ಯವಸ್ಥೆ ಮಾಡಿಲ್ಲ ಏಕೆ’ ಎಂದು ಶಾಸಕ ಡಿ.ವೇದವ್ಯಾಸ ಕಾಮತ್ ಪ್ರಶ್ನಿಸಿದರು.
ಇಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘ರಾಜ್ಯ ಸರ್ಕಾರವೇ ಪಾಲಿಕೆಯಲ್ಲಿ ಆಡಳಿತ ನಡೆಸುತ್ತಿದೆ. ನಗರದ ರಸ್ತೆಗಳೆಲ್ಲ ಗುಂಡಿಮಯವಾದರೂ ದುರಸ್ತಿ ಪಡಿಸಲು ಅಧಿಕಾರಿಗಳು ಕ್ರಮ ವಹಿಸಿಲ್ಲ. ಇ–ಖಾತಾ ವ್ಯವಸ್ಥೆಯಿಂದ ಜನ ನಿತ್ಯ ಸಮಸ್ಯೆ ಅನುಭವಿಸುತ್ತಿದ್ದಾರೆ. ಅದನ್ನೂ ಸರಿಪಡಿಸಿಲ್ಲ. ನಗರದಲ್ಲಿ ಕಸದ ಸಮಸ್ಯೆ ವಿಪರೀತವಾಗಿದೆ’ ಎಂದು ಆರೋಪಿಸಿದರು.
‘ನಗರದ ಕದ್ರಿ ಉದ್ಯಾನ ರಸ್ತೆಯಲ್ಲಿ ಜನವರಿಯಿಂದ ವಾಹನಗಳಿಗೆ ಟೋಲ್ ವಿಧಿಸಲು ಸರ್ಕಾರ ಚಿಂತನೆ ನಡೆಸಿದೆ. ಸರ್ಕಾರದ ಅನುದಾನದಲ್ಲಿ ಅಭಿವೃದ್ಧಿಪಡಿಸಿದ ಕಾಮಗಾರಿಗೆ ಟೋಲ್ ಸಂಗ್ರಹಿಸುವುದಕ್ಕೆ ಆಕ್ಷೇಪವಿದೆ. ಈ ರಸ್ತೆಯ ಬಳಿ ಬೀದಿ ಬದಿ ವ್ಯಾಪಾರಿಗಳನ್ನು ತೆರವುಗೊಳಿಸುವ ಮುನ್ನ ಅವರಿಗೆ ಕಾನೂನುಬದ್ಧವಾಗಿ ಪುನರ್ವಸತಿ ಕಲ್ಪಿಸಬೇಕಿತ್ತು’ ಎಂದರು.
‘ನಗರದ ಕಾರಾಗೃಹದಲ್ಲಿ ಮೊಬೈಲ್ ಸಿಗ್ನಲ್ ಜಾಮರ್ ಅಳವಡಿಕೆಯಿಂದ ಸುತ್ತಲಿನ 4 ಕಿ.ಮೀ ವ್ಯಾಪ್ತಿಯ ನಿವಾಸಿಗಳಿಗೆ ಸಮಸ್ಯೆ ಆಗುತ್ತಿದೆ. ಈ ಬಗ್ಗೆ ಪ್ರತಿಭಟನೆ ನಡೆಸಿದ್ದೇನೆ. ವಿಧಾನಸಭೆಯ ಅಧಿವೇಶನದಲ್ಲೇ ಈ ಬಗ್ಗೆ ಪ್ರಸ್ತಾಪಿಸಿದರೂ ಸಮಸ್ಯೆ ಬಗೆಹರಿದಿಲ್ಲ. ಜಾಮರ್ ಅನ್ನು ಸರ್ಕಾರ ಕಿತ್ತೊಗೆಯುತ್ತಿಲ್ಲ, ನಾವು ಕಿತ್ತಗೆಯುತ್ತೇವೆ ಎಂದರೂ ಅವಕಾಶ ಕಲ್ಪಿಸುತ್ತಿಲ್ಲ. ಜೈಲನ್ನು ಸ್ಥಳಾಂತರಿಸಿ ಅಥವಾ ಜೈಲಿನೊಳಗೆ ಯಾರು ಮೊಬೈಲ್ ಕೊಂಡೊಯ್ಯದಂತೆ ನಿರ್ಬಂಧಿಸಿ’ ಎಂದು ಅವರು ಒತ್ತಾಯಿಸಿದರು.
‘ಪಾಲಿಕೆ ವ್ಯಾಪ್ತಿಗೆ ಈ ಸರ್ಕಾರದ ಅವಧಿಯಲ್ಲಿ ಯಾವುದೇ ವಿಶೇಷ ಅನುದಾನ ಬಿಡುಗಡೆಯಾಗಿಲ್ಲ. ಸರ್ಕಾರ ಘೋಷಿಸಿದ ಕಾಮಗಾರಿಗಳೂ ಅನುಷ್ಠಾನಕ್ಕೆ ಬರುತ್ತಿಲ್ಲ. ಭ್ರಷ್ಟಾಚಾರ ಮಾತ್ರ ದಿನೇ ದಿನೇ ಹೆಚ್ಚಾಗುತ್ತಿದೆ’ ಎಂದರು.
ಪಕ್ಷದ ಮುಖಂಡರಾದ ರಮೇಶ್ ಕಂಡೆಟ್ಟು, ರಮೇಶ್ ಹೆಗ್ಡೆ ಹಾಗೂ ಲಲ್ಲೇಶ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.