ಪುತ್ತೂರು: ತಾಲ್ಲೂಕಿನ ಮಾಡ್ನೂರು ಮತ್ತು ಕೊಳ್ತಿಗೆ ಗ್ರಾಮಗಳ ಗಡಿಪ್ರದೇಶ ವ್ಯಾಪ್ತಿಯಲ್ಲಿ ಮತ್ತೆ ಕಾಡಾನೆ ಉಪಟಳ ಆರಂಭವಾಗಿದೆ. 3 ತಿಂಗಳ ಬಳಿಕ ಮತ್ತೆ ಮತ್ತೆ ಕಾಡಾನೆ ಲಗ್ಗೆಯಿಟ್ಟು ಕೃಷಿ ಹಾನಿ ಮಾಡಿದೆ.
ಮಂಗಳವಾರ ರಾತ್ರಿ ಕಾಡಾನೆ ಮಾಡ್ನೂರು ಗ್ರಾಮ ವ್ಯಾಪ್ತಿಯ ಮಳಿಯ ಮಧುಪಲ್ಟಿಪ್ಲಸ್ ಸಂಸ್ಥೆಯ ಎಂ.ಎನ್.ಭಟ್, ಪಕ್ಕದ ನಿವಾಸಿಯಾದ ನಿವೃತ್ತ ಶಿಕ್ಷಕಿ ಸಾವಿತ್ರಿ ಮಳಿ, ಅಮ್ಚಿನಡ್ಕದ ನಿವೃತ್ತ ಶಿಕ್ಷಕ ಶ್ರೀಕೃಷ್ಣ ಭಟ್, ಕೊಳ್ತಿಗೆ ಗ್ರಾಮ ವ್ಯಾಪ್ತಿಯ ಅಲಸಂಡೆಮಜಲಿನ ನೀಲಪ್ಪ ಗೌಡ ಮತ್ತು ಶ್ರೀಕೃಷ್ಣ ಅಡಿಗ ಅವರ ಕೃಷಿ ತೋಟಗಳಿಗೆ ನುಗ್ಗಿ ಬೆಳೆ ಹಾನಿ ಮಾಡಿದೆ. ನೆಟ್ಟಣಿಗೆ ಮುಡ್ನೂರು ಗ್ರಾಮದ ಪೆರ್ನಾಜೆಯ ರಾಘವೇಂದ್ರ ಭಟ್ ಅವರ ತೋಟಗಳಿಗೆ ಲಗ್ಗೆಯಿಟ್ಟು ಕೃಷಿ ಹಾನಿ ಮಾಡಿದೆ. ಕಾಡಾನೆಯು ತೆಂಗು, ಬಾಳೆ, ದೀವಿಹಲಸು ಕೃಷಿಗಳನ್ನು ಹಾನಿ ಮಾಡಿರುವುದಾಗಿ ತಿಳಿದು ಬಂದಿದೆ.
ಕಳೆದ ಜುಲೈ ತಿಂಗಳಲ್ಲಿ ಕಾಡಾನೆ ನಿರಂತರವಾಗಿ ಅಮ್ಚಿನಡ್ಕ, ಪೆರ್ನಾಜೆ ವ್ಯಾಪ್ತಿಯ ಕೃಷಿ ಪ್ರದೇಶಗಳಿಗೆ ಲಗ್ಗೆಯಿಟ್ಟು ಕೃಷಿ ಹಾನಿ ಮಾಡಿತ್ತು. ಜುಲೈ ತಿಂಗಳ ಬಳಿಕ ಕಾಡಾನೆ ಹಾವಳಿ ಇಲ್ಲದಾಗಿರುವುದರಿಂದ ಈ ಭಾಗದ ಜನ ನಿಟ್ಟುಸಿರು ಬಿಟ್ಟಿದ್ದರು. ಇದೀಗ ಮತ್ತೆ ಉಪಟಳದಿಂದ ಜನರಲ್ಲಿ ಕೃಷಿ ನಾಶದ ಆತಂಕದ ಜತೆಗೆ ಭಯದ ವಾತಾವರಣ ನಿರ್ಮಾಣವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.